Advertisement

ನಾನೇ ಕಿಂಗ್‌ ,ನನ್ನ ಟಾರ್ಗೆಟ್‌ 113:ಎಚ್‌.ಡಿ.ಕುಮಾರಸ್ವಾಮಿ

06:00 AM Apr 26, 2018 | Team Udayavani |

ಬೆಂಗಳೂರು: ನಾವು (ಜೆಡಿಎಸ್‌) ಮ್ಯಾಜಿಕ್‌ ನಂಬರ್‌ 113 ಗುರಿ ಮುಟ್ಟಬೇಕು ಎಂದು ಹೊರಟಿದ್ದೇವೆ. ಬಿಜೆಪಿಯವರು 150 ಸೀಟು ಗೆಲ್ಲಬೇಕು ಎಂದುಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡರೆ ಆ ಗುರಿ ಮುಟ್ಟುವುದೆಲ್ಲಿ ಸಾಧ್ಯ? ಚುನಾವಣಾ ಕಣದಲ್ಲಿ ನಾವಿಬ್ಬರೂ ಶತ್ರುಗಳೇ.ಇದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತು. ಚುನಾವಣಾ ಪ್ರಚಾರದ ಮಧ್ಯೆಯೇ ಎಚ್‌.ಡಿ.ಕುಮಾರಸ್ವಾಮಿ ಅವರು ಉದಯವಾಣಿಗೆ ವಿಶೇಷ ಸಂದರ್ಶನ ನೀಡಿದ್ದಾರೆ.

Advertisement

ಅಧಿಕಾರದ ಕನಸು ಕಾಣುತ್ತಿರುವ ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ವೇಳೆ ಗೊಂದಲ ಸೃಷ್ಟಿಯಾಗಿದೆ. ಇದು ಹಿನ್ನಡೆಯಾಗುವುದಿಲ್ಲವೇ?
                   ಪೂರ್ಣ ಪ್ರಮಾಣದ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಮೇಲೆ ಜೆಡಿಎಸ್‌ನಲ್ಲಿ ಸಣ್ಣ ಪುಟ್ಟ ಗೊಂದಲಗಳಾಗಿರುವುದು ಹೌದಾದರೂ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಆದಷ್ಟು ಮಟ್ಟದ ಗೊಂದಲಗಳು ಆಗಿಲ್ಲ. ಒಂದೊಮ್ಮೆ ನನ್ನ ಗಮನಕ್ಕೆ ಬಂದಿದ್ದರೆ ಆ ಗೊಂದಲಗಳಿಗೂ ಅವಕಾಶ ನೀಡುತ್ತಿರಲಿಲ್ಲ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಕಾಂಗ್ರೆಸ್‌, ಬಿಜೆಪಿಗಿಂತ ನಾವು ಒಂದು ಹೆಜ್ಜೆ ಮುಂದಿದ್ದೇವೆ. ಕಾಂಗ್ರೆಸ್‌, ಬಿಜೆಪಿಯವರು ಕಳೆದ ವಾರ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದರೆ, ಜೆಡಿಎಸ್‌ ಫೆ. 17ರಂದೇ 126 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿತ್ತು. ಹೀಗಾಗಿ ನಮಗೆ ಹಿನ್ನಡೆಯ ಪ್ರಶ್ನೆ ಬರುವುದಿಲ್ಲ.

ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೆಬ್ರವರಿಯಲ್ಲೇ ಪ್ರಕಟಿಸಿದ ಜೆಡಿಎಸ್‌, 2ನೇ ಪಟ್ಟಿಗೆ ಬೇರೆ ಪಕ್ಷಗಳ ಅಭ್ಯರ್ಥಿಗಳ ಘೋಷಣೆವರೆಗೆ ಕಾಯಬೇಕಾಯಿತು. ಏಕೆ ಅಭ್ಯರ್ಥಿಗಳ ಕೊರತೆಯಿತ್ತೇ?
                  ಇದು ಕೂಡ ತಂತ್ರಗಾರಿಕೆಯ ಒಂದು ಭಾಗ. ಜೆಡಿಎಸ್‌ ಮಾತ್ರವಲ್ಲ, ಕಾಂಗ್ರೆಸ್‌, ಬಿಜೆಪಿ ಕೂಡ ಎಲ್ಲಾ 224 ಕ್ಷೇತ್ರಗಳಲ್ಲಿ ಶಕ್ತಿಯುವ ಅಭ್ಯರ್ಥಿಗಳನ್ನು ಹೊಂದಿಲ್ಲ.ನಮಗೆ ಕೆಲವು ಕ್ಷೇತ್ರದಲ್ಲಿ ಅಂತಹ ಶಕ್ತಿ ಇಲ್ಲ. ಅಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿಯಲ್ಲಿ ಟಿಕೆಟ್‌ ಸಿಗದೆ ಶಕ್ತಿ ತುಂಬುವವರು ಬರಬಹುದು ಎಂಬ ಕಾರಣಕ್ಕೆ ವಿಳಂಬ ಮಾಡಿದೆವು. ಇದರಿಂದ ಹವಾ ಎಬ್ಬಿಸಬಹುದು ಎಂಬ ದೊಡ್ಡ ಆಸೆಯೂ ಇಲ್ಲ. ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧೆಯೊಡ್ಡಬಹುದು, ಇನ್ನು ಕೆಲವೆಡೆ ಗೆಲ್ಲಬಹುದು. ನಮ್ಮ ಈ ತಂತ್ರಗಾರಿಕೆ ಯಶ ಕಂಡಿದ್ದು, ಜೆಡಿಎಸ್‌ಗೆ 10-15 ಸೀಟುಗಳು ಹೆಚ್ಚುವರಿಯಾಗಿ ಬರಬಹುದು ಎಂಬ ನಿರೀಕ್ಷೆಯಿದೆ. ಉದಾಹರಣೆಗೆ ಬೆಂಗಳೂರು ನಗರದಲ್ಲಿ ಎರಡು ಸ್ಥಾನ ಗೆಲ್ಲಬಹುದು ಎಂದುಕೊಂಡಿದ್ದೆ. ಆದರೆ, ಬಿಜೆಪಿ, ಕಾಂಗ್ರೆಸ್‌ ಗೊಂದಲ, ಜೆಡಿಎಸ್‌ಗೆ ಅದರಿಂದ ಆದ ಲಾಭ ನೋಡಿದಾಗ ಕನಿಷ್ಠ 8 ಸೀಟು ಗೆಲ್ಲುವ ವಿಶ್ವಾಸ ಬಂದಿದೆ.

ಕಾರ್ಯಕರ್ತರು ಒತ್ತಾಯಿಸಿದರೂ ಪ್ರಜ್ವಲ್‌ ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿ ಅವರಿಗೆ ಏಕೆ ಟಿಕೆಟ್‌ ನೀಡಿಲ್ಲ?
                ಜೆಡಿಎಸ್‌ನಲ್ಲಿ ನಾನು, ಎಚ್‌.ಡಿ.ರೇವಣ್ಣ ಜತೆಗೆ ಪ್ರಜ್ವಲ್‌ ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿ ಅವರಿಗೂ ಟಿಕೆಟ್‌ ಕೊಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದರು. ಆದರೆ, ಜೆಡಿಎಸ್‌ನಲ್ಲಿ ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸುತ್ತೇವೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದು, ಅದರಂತೆ ನಡೆದುಕೊಂಡಿದ್ದೇವೆ. ಜೆಡಿಎಸ್‌ ಎಂದರೆ ಕುಟುಂಬ ರಾಜಕಾರಣ ಎಂಬ ಆರೋಪವಿದೆ. ಅದರಿಂದ ಹೊರಬರಬೇಕು ಎಂಬ ಉದ್ದೇಶದಿಂದ ಇಬ್ಬರಿಗೂ ಸ್ಪರ್ಧೆಗೆ ಅವಕಾಶ ನೀಡಿಲ್ಲ.

ನಿಮ್ಮ ಪ್ರಕಾರ ಈ ಬಾರಿ ಸ್ಪರ್ಧೆ ಜೆಡಿಎಸ್‌-ಬಿಜೆಪಿ ಮಧ್ಯೆಯೇ ಅಥವಾ ಜೆಡಿಎಸ್‌-ಕಾಂಗ್ರೆಸ್‌ ಮಧ್ಯೆಯೇ?
               ಹಳೇ ಮೈಸೂರು ಭಾಗದಲ್ಲಿ ಬಹುತೇಕ ಕಡೆ ಜೆಡಿಎಸ್‌-ಕಾಂಗ್ರೆಸ್‌ ಮಧ್ಯೆ, ಕೆಲವೆಡೆ ತ್ರಿಕೋನ ಸ್ಪರ್ಧೆ ಇದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌-ಬಿಜೆಪಿ, ಕೆಲವೆಡೆ ತ್ರಿಕೋನ ಸ್ಪರ್ಧೆ ಇರುತ್ತದೆ. ಎಲ್ಲೂ ಜೆಡಿಎಸ್‌ ಪಕ್ಷವನ್ನು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಬಾದಾಮಿ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸುತ್ತಿದ್ದು, ನೇರ ಹಣಾಹಣಿ ಅಂತ ಟ್ರೆಂಡ್‌ ಸೃಷ್ಟಿಸಲಾಗುತ್ತಿದೆ. ಆದರೆ, ಅದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ, ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಹೊರಗಿನಿಂದ ಬಂದವರು. ಕಾರ್ಯಕರ್ತರ ಮೂಲಕ ಜನರನ್ನು ತಲುಪಬೇಕು. ಆದರೆ, ಜೆಡಿಎಸ್‌ ಅಭ್ಯರ್ಥಿ ಹನುಮಂತಪ್ಪ ಮಾವಿನಮರದ್‌ ಕಳೆದ ಎರಡು ವರ್ಷದಿಂದ ಮನೆ ಮನೆಗೆ ಸುತ್ತಿ ಜನರನ್ನು ಈಗಾಗಲೇ ತಲುಪಿದ್ದಾರೆ. ಹೀಗಾಗಿ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಸೋಲಬಹುದು.

Advertisement

ಆದರೆ, ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದೇ ಬಿಟ್ಟೆವು ಎನ್ನುತ್ತಿದ್ದಾರಲ್ಲಾ?
              ನನಗೆ ಅಚ್ಚರಿ ಉಂಟುಮಾಡಿರುವುದು ಬಿಜೆಪಿಯವರ ತಂತ್ರಗಾರಿಕೆಯ ವೈಫ‌ಲ್ಯ. ಅಮಿತ್‌ ಶಾ, ನರೇಂದ್ರ ಮೋದಿ ಅಂಥವರು ತಮ್ಮ ಕಾರ್ಯತಂತ್ರಗಳ ಮೂಲಕ ಇಡೀ ರಾಷ್ಟ್ರವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಆರಂಭದಲ್ಲೇ ಅಪಘಾತವಾಗಿದೆ ಅನ್ನಿಸುತ್ತಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಭ್ರಮನಿರಸನಗೊಂಡಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಉದಾಹರಣೆಗೆ ವರುಣಾ ಕ್ಷೇತ್ರ. ಅಲ್ಲಿ ಯಡಿಯೂರಪ್ಪ ಅವರ ಪುತ್ರ ಕಣಕ್ಕಿಳಿಯುತ್ತಾರೆ ಎಂದು ಹೋಗಿ ಬಾಡಿಗೆ ಮನೆ ಮಾಡಿ ವಿದ್ಯುತ್‌ ಸಂಚಲನ ಉಂಟುಮಾಡಿದರು. ಅಷ್ಟು ವೇಗವಾಗಿ ಹೋಗಿ ಇದ್ದಕ್ಕಿದ್ದಂತೆ ಅಭ್ಯರ್ಥಿ ಬದಲು ಎಂದರೆ ಕಾರ್ಯಕರ್ತರ ಸ್ಥಿತಿ ಏನಾಗಬೇಕು. ರಾಜ್ಯದಲ್ಲಿ ಪ್ರಧಾನಿ ಮೋದಿ ಅವರಿಂದಲೂ ಬಿಜೆಪಿ ಗೆಲ್ಲಿಸಲು ಸಾಧ್ಯವಿಲ್ಲ.

ಮೋದಿಯಿಂದಲೂ ಬಿಜೆಪಿ ಗೆಲ್ಲಿಸಲು ಸಾಧ್ಯವಿಲ್ಲ ಎಂದು ಹೇಗೆ ಹೇಳುತ್ತೀರಿ?
               ಕರ್ನಾಟಕದಲ್ಲಿ ಬಿಜೆಪಿಯವರಿಗೆ ವಿಷಯಗಳೇ ಇಲ್ಲ. ಈ ಹಿಂದೆ ಬಿಜೆಪಿಗೆ ಐದು ವರ್ಷ ಅಧಿಕಾರ ಕೊಟ್ಟಾಗ ರಾಜ್ಯವನ್ನು ಹಾಳು ಮಾಡಿದರು. ಮತ್ತೆ ಅವಕಾಶ ಕೊಡಿ ಎಂದು ಕೇಳಿದರೆ ಹಿಂದೆ ಅವಕಾಶ ಕೊಟ್ಟಾಗ ಏನೂ ಮಾಡಲಿಲ್ಲ. ಮತ್ತೆ ಏಕೆ ಅಧಿಕಾರ ಕೊಡಬೇಕು ಎಂದು ಜನ ಪ್ರಶ್ನಿಸುತ್ತಾರೆ. ಇನ್ನು ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ರಾಜ್ಯದ ಸಮಸ್ಯೆಗಳನ್ನು ನ್ಯಾಯಯುತವಾಗಿ ಪರಿಹರಿಸಲು ಏನು ಸಹಕಾರ ನೀಡಬೇಕಿತ್ತೋ ಅದನ್ನು ನೀಡಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ಏನು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಅವರಲ್ಲಿ ಏನೂ ಇಲ್ಲ. ಇನ್ನು ಕೋಮುವಾದ ಉತ್ತರ ಪ್ರದೇಶದಂತಹ ಕಡೆ ನಡೆಯಬಹುದಷ್ಟೇ ಹೊರತು ಕರ್ನಾಟಕದಲ್ಲಿ ಸಾಧ್ಯವಿಲ್ಲ. ಇನ್ನೊಂದು ಕಡೆ ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕರೇ ಇಲ್ಲ ಆ ಪಕ್ಷಕ್ಕೆ.

 ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ವರುಣಾ ಕ್ಷೇತ್ರವನ್ನು ನಿರ್ಲಕ್ಷಿಸಿದಿರಾ?
               ಜಾತಿ ಲೆಕ್ಕಾಚಾರ ಬಂದಾಗ ನಮಗೆ ಅಲ್ಲಿ ಅಷ್ಟೊಂದು ಶಕ್ತಿ ಇಲ್ಲ ಎಂಬುದು ನಿಜ. ಆದರೂ ಕಳೆದ ಫೆಬ್ರವರಿಯಲ್ಲಿ ಪ್ರಕಟಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಲಿಂಗಾಯತರೊಬ್ಬರಿಗೆ ಟಿಕೆಟ್‌ ಘೋಷಿಸಲಾಗಿತ್ತು. ಆದರೆ, ನಂತರದಲ್ಲಿ ಅಲ್ಲಿಗೆ ಬಿಜೆಪಿಯಿಂದ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬಂದರು. ಒಂದು ಸಮಾಜದ ನಾಯಕನ ಮಗ ಬಂದಾಗ ಅಲ್ಲಿನ ಲಿಂಗಾಯತರು ವಿಜಯೇಂದ್ರ ಜತೆ ಹೋಗಲು ನಿರ್ಧರಿಸಿದರು. ಹೀಗಾಗಿ ಅವರಿಗೆ ಸರಿಸಮಾನಾಗಿ ಹೋಗಲು ಸಾಧ್ಯವಿಲ್ಲ ಎಂದು ಸುಮ್ಮನಾದೆವು. ಆದರೆ, ಈಗ ಸ್ಪರ್ಧೆ ಏನಿದ್ದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ.

ನೀವು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ರಾಮನಗರದಲ್ಲಿ ಸೋಲಿನ ಭಯ ಕಾರಣವೇ?
              ಖಂಡಿತಾ ಅಲ್ಲ. ಮೊದಲಿನಿಂದಲೂ ನನ್ನ ದೃಷ್ಟಿ ರಾಮನಗರದ ಮೇಲೆಯೇ ಇತ್ತು. ಚನ್ನಪಟ್ಟಣದಲ್ಲಿ ನನ್ನ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ಆದರೆ, ಅದು ಸಾಧ್ಯವಿಲ್ಲ ಎಂದು ಹೇಳಿದಾಗ, ನಮ್ಮಲ್ಲಿ ಗುಂಪುಗಾರಿಕೆ ಇರುವುದರಿಂದ ಬೇರೆ ಅಭ್ಯರ್ಥಿ ನಿಂತರೆ ಗೆಲ್ಲುವುದು ಸಾಧ್ಯವಿಲ್ಲ. ನೀವೇ ಬನ್ನಿ ಎಂದು ಚನ್ನಪಟ್ಟಣದ ಕಾರ್ಯಕರ್ತರು ಒತ್ತಾಯಿಸಿದರು. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ನಾನೇ ಕಣಕ್ಕಿಳಿಯುವಂತಾಯಿತು.

ಇತ್ತೀಚಿನ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿವೆ ಎಂದು ಹೇಳಿರುವ ಬಗ್ಗೆ ಏನಂತೀರಿ?
             ಅವು ಅಭ್ಯರ್ಥಿಗಳು ಅಂತಿಮಗೊಳ್ಳುವ ಮುಂಚೆ ಸಿದ್ಧವಾದ ಸಮೀಕ್ಷೆಗಳು. ಅವುಗಳಲ್ಲಿ ಎಷ್ಟು ಸ್ಥಾನ ಎಂದು ಹೇಳಲಾಗಿದೆಯೇ ಹೊರತು ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂದು ಹೇಳಿಲ್ಲ. ಮತದಾನದ ಬಳಿಕ ಮತಗಟ್ಟೆ ಸಮೀಕ್ಷೆಗಳಲ್ಲಿ ಶೇ. 90ರಿಂದ 95ರಷ್ಟು ಸ್ಪಷ್ಟತೆ ಇರುತ್ತದೆ. ಅಲ್ಲದೆ, ಪ್ರತಿನಿತ್ಯ ಯಾವುದೋ ವಿಷಯದ ಮೇಲೆ ರಾಜಕೀಯ ಬದಲಾವಣೆಗಳಾಗುತ್ತವೆ. ಹೀಗಾಗಿ ಸಮೀಕ್ಷೆಗಳಿಂದ ನನ್ನ ಮನಸ್ಸು ಗಲಿಬಿಲಿಗೊಂಡಿಲ್ಲ.

ಅತಂತ್ರ ಪರಿಸ್ಥಿತಿ ಉದ್ಭವವಾಗದೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುತ್ತೀರಾ?
           ಜನರ ಆಶೀರ್ವಾದದೊಂದಿಗೆ ನಾನು ಕಿಂಗ್‌ ಆಗಬೇಕು ಎಂದು ಬಯಸಿದ್ದೇನೆ. 113 ಸ್ಥಾನ ಬಂದರೆ ಮಾತ್ರ ರಾಜ್ಯಪಾಲರು ಗೇಟ್‌ ಓಪನ್‌ ಮಾಡುತ್ತಾರೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ. ನನಗೆ ಈ ಬಗ್ಗೆ ವಿಶ್ವಾಸವಿದೆ. ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌, ಬಿಜೆಪಿಯಿಂದ ಜನರಿಗೆ ಭ್ರಮನಿರಸನವಾಗಿದ್ದು, ಅವರು ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ. ಹೀಗಾಗಿ ಬೇರೆಯವರ ಜತೆ ಸೇರಿ ಸರ್ಕಾರ ರಚಿಸುವ ಬಗ್ಗೆ ಏಕೆ ಯೋಚನೆ ಮಾಡಲಿ?

ಜೆಡಿಎಸ್‌ನಲ್ಲಿ ಪ್ರಚಾರಕರಿಲ್ಲ. ನಾನೊಬ್ಬನೇ ಎಲ್ಲಾ ಕ್ಷೇತ್ರಗಳಲ್ಲಿ ಓಡಾಡಬೇಕು. ಹೀಗಾಗಿ ಎಲ್ಲಾ 224 ಕ್ಷೇತ್ರಗಳನ್ನೂ ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ. 150 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಗಮನ ಕೇಂದ್ರೀಕರಿಸಿ ಕನಿಷ್ಟ 113 ಕ್ಷೇತ್ರಗಳನ್ನು ಗೆಲ್ಲಲೇ ಬೇಕು ಎಂಬ ನಿಟ್ಟಿನಲ್ಲಿ ಪೂರ್ವಸಿದ್ಧತೆ ಮುಗಿಸಿದ್ದೇನೆ.
– ಎಚ್‌.ಡಿ.ಕುಮಾರಸ್ವಾಮಿ

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next