ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ “ಮತಬ್ಯಾಂಕ್’ ದೃಷ್ಟಿಯಲ್ಲಿಟ್ಟುಕೊಂಡು “ಅಸ್ತ್ರ’ವನ್ನಾಗಿ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದ ಜಾತಿವಾರು ಜನಗಣತಿ ವರದಿಗೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಬಿಡುಗಡೆ ಭಾಗ್ಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ವಿಧಾನಸಭೆ ಚುನಾವಣೆ ನಂತರ ಧ್ರುವೀಕರಣಗೊಂಡಿರುವ ಜಾತಿ ಸಮೀಕರಣ ಲೆಕ್ಕಾಚಾರ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆವರೆಗೂ ವರದಿ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡವೆಂದು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್ ಬಯಸಿದೆ. ಹೀಗಾಗಿ, ವರದಿ ಅಲ್ಲಿಯವರೆಗೆ ಶೈತ್ಯಾಗಾರದಲ್ಲೇ ಇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು, ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಬೇಡಿಕೆ ತಲೆಬಿಸಿ ನಡುವೆ ಜಾತಿವಾರು ಜನಗಣತಿ ವರದಿ ಬಿಡುಗಡೆ ಮಾಡಿ ಮತ್ತೂಂದು ವಿವಾದ ಮೈ ಮೇಲೆ ಎಳೆದುಕೊಳ್ಳುವುದು ಬೇಡವೆಂಬ ಕಾರಣಕ್ಕೆ ಈ ನಿರ್ಧಾ ರಕ್ಕೆ ಬರಲಾಗಿದೆಂದು ಮೂಲಗಳು ತಿಳಿಸಿವೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್, ಅದರಲ್ಲೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ವರದಿ ಬಗ್ಗೆ ಆಸಕ್ತಿಯಿದೆ. ಏಕೆಂದರೆ, “ಜಾತಿವಾರು ಜನಗಣತಿ’ (ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ) ಅವರ ಕನಸಿನ ಕೂಸು. ಆದರೆ, ಸದ್ಯಕ್ಕೆ ವರದಿ ಬಗ್ಗೆ ಜೆಡಿಎಸ್‌ಗೆ ಆಸಕ್ತಿಯಿಲ್ಲ. ಹೀಗಾಗಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿ ಸಲ್ಲಿಸಲು ಮುಂದಾದರೂ ಸರ್ಕಾರ ಅದನ್ನು ತಕ್ಷಣಕ್ಕೆ ಸ್ವೀಕರಿಸಲು ಸಿದ್ಧವಿಲ್ಲ.
ಬೆಂಗಳೂರು ಸೇರಿ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಕಲಬುರಗಿ ಮಹಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲವೆಂಬ ಅಂಶ ಮುಂದಿಟ್ಟು ಸರ್ಕಾರ ವರದಿ ಪಡೆಯಲು ಮೀನಾಮೇಷ ಎಣಿಸುತ್ತಿದೆ. ಮಾನದಂಡ ಆಧರಿಸಿ ಮಾಡಿರುವ ಸಮೀಕ್ಷೆ ಸ್ಥಿತಿ ಡೋಲಾಯಮಾನವಾಗಿದೆ. ಮತ್ತೂಮ್ಮೆ ಸಮೀಕ್ಷೆಗೆ ಸೂಚಿಸಿದರೂ ಆಶ್ಚರ್ಯ ವಿಲ್ಲ ಎಂದೂ ಹೇಳಲಾಗಿದೆ. ಹೀಗಾಗಿ, ಸುಮಾರು 180 ಕೋಟಿ ರೂ. ವೆಚ್ಚ ಮಾಡಿ 55 ಪ್ರಶ್ನಾವಳಿ, ಹಿಂದುಳಿದಿರುವಿಕೆ ಪರಿಗಣಿಸಲು 16 ಅಂಶಗಳ ಮಾನದಂಡ ಆಧರಿಸಿ 3ಬಾರಿ ಕಾಲಾವಧಿ ವಿಸ್ತರಿಸಿ ಮಾಡಿದ ಸಮೀಕ್ಷೆ ಡೋಲಾ ಯಮಾನ’ ಸ್ಥಿತಿ ತಲುಪಿದೆ. ಇದರ ನಡುವೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರು ಆಯೋಗದ ವರದಿ ವಿಚಾರವಾಗಿಯೇ ಮುಖ್ಯಮಂತ್ರಿ ಜತೆ ಚರ್ಚಿ ಸಲು ಸಮಯ ಕೋರಿದ್ದಾರೆ.
ಯಾಕೆ ಹಿಂದೇಟು?: ಜಾತಿವಾರು ಜನಗಣತಿ ವರದಿಯಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಅತಿ ಹೆಚ್ಚು, ಮುಸ್ಲಿಂಮರು 2ನೇ ಸ್ಥಾನ, ಲಿಂಗಾಯತ ಸಮುದಾಯ 3 ನೇ ಸ್ಥಾನ ಆ ನಂತರ ಒಕ್ಕಲಿಗ, ಕುರುಬ ಸಮುದಾಯವಿದೆ ಎಂಬ ಮಾಹಿತಿಯಿದೆ. ಹೀಗಾಗಿ, ಒಂದೊಮ್ಮೆ ವರದಿ ಬಿಡುಗಡೆಯಾದರೆ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಬೇಕೆಂಬ ಹೋರಾಟ ಪ್ರಾರಂಭವಾದರೆ ಕಷ್ಟ. ಈಗಿನ ಸಂದರ್ಭದಲ್ಲಿ ಅದು ಬೇರೆ ಬೇರೆ ಸ್ವರೂಪಕ್ಕೆ ತಿರುಗಬಹುದು ಎಂಬ ಆತಂಕವಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಹೋರಾಟ ಪ್ರಾರಂಭವಾಗಿದೆ. ಹೀಗಾಗಿ, ಕರ್ನಾಟಕದಲ್ಲೂ ಜಾತಿವಾರು ಜನಗಣತಿ ವರದಿ ಬಿಡುಗಡೆಯಾದರೆ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿ ಸಮ್ಮಿಶ್ರ ಸರ್ಕಾರಕ್ಕೆ ತಲೆಬಿಸಿ ಉಂಟಾಗಬಹುದೆಂಬ ಕಾರಣಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿ ಸಿದ್ಧಗೊಂಡಿದೆ. ಸಲ್ಲಿಕೆ ಸಂಬಂಧ ಸರ್ಕಾರಕ್ಕೆ ಈ ಕುರಿತು ಪತ್ರ ಸಹ ಬರೆಯಲಾಗಿದೆ. ಇನ್ನೂ ಯಾವುದೇ ಉತ್ತರ ಬಂದಿಲ್ಲ. ನಾವು ಕಾಯುತ್ತಿದ್ದೇವೆ.
● ಎಚ್.ಕಾಂತರಾಜ್, ಅಧ್ಯಕ್ಷರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ
● ಎಸ್. ಲಕ್ಷ್ಮಿನಾರಾಯಣ