ರಾಯಚೂರು/ಬೆಂಗಳೂರು: ವೋಟ್ ಮಾತ್ರ ಮೋದಿಗೆ ಹಾಕ್ತೀರಿ, ಸಮಸ್ಯೆ ಮಾತ್ರ ನನ್ನತ್ರ ಹೇಳ್ತೀರಿ…
ಕರೇಗುಡ್ಡದ ಗ್ರಾಮವಾಸ್ತವ್ಯಕ್ಕೆ ಆಗಮಿಸುವ ವೇಳೆ ಸಮೀಪದ ಯರಮರಸ್ ಅತಿಥಿಗೃಹದಲ್ಲಿ ತಂಗಿದ್ದ ಅವರು, ತುಂಗಭದ್ರಾ ಜಲಾಶಯದ ಹಂಗಾಮಿ ಕಾರ್ಮಿಕರು, ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಟಿಯುಸಿಐ ಮುಖಂಡರೊಂದಿಗೆ ಚರ್ಚಿಸಿದರು. ಆದರೆ, ಮಾತುಕತೆ ಸಫಲವಾಗದ ಹಿನ್ನೆಲೆಯಲ್ಲಿ ಕಾರ್ಮಿಕರು ಸಿಎಂ ಚಲಿಸುತ್ತಿದ್ದ ಬಸ್ ಅಡ್ಡಲಾಗಿ ನಿಂತು ಪ್ರತಿಭಟನೆಗೆ ಮುಂದಾದರು. ಸುಮಾರು 15 ನಿಮಿಷಕ್ಕೂ ಅಧಿಕ ಕಾಲ ಹೋರಾಟ ಸ್ಥಗಿತಗೊಳಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು. ಈ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ ”ವೋಟ್ ಮಾತ್ರ ಮೋದಿಗೆ ಹಾಕ್ತೀರಾ. ಸೌಲಭ್ಯ ನನ್ನನ್ನು ಕೇಳ್ತಿರಾ. ಅವರನ್ನೇ ಕೇಳಿ ಹೋಗಿ” ಎಂದು ಟೀಕಿಸಿದರು.
ಇನ್ನು ಮೋದಿ ಬಗ್ಗೆ ಮಾತೇ ಆಡಲ್ಲ: ಕರೇಗುಡ್ಡಕ್ಕೆ ಆಗಮಿಸಿ ವೇದಿಕೆ ಕಾರ್ಯಕ್ರಮ ಶುರುವಾಗುವ ವೇಳೆಗೆ ಆ ಸುದ್ದಿ ಎಲ್ಲೆಡೆ ಸದ್ದು ಮಾಡಿರುವ ಸಂಗತಿ ಅರಿತ ಸಿಎಂ, ಭಾಷಣ ಆರಂಭಿಸುತ್ತಿದ್ದಂತೆ ಅದೇ ವಿಚಾರ ಪ್ರಸ್ತಾಪಿಸಿದರು. ನಾನು ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ್ದೇ ತಪ್ಪಾ? ವೋಟ್ ಅವರಿಗೆ ಮಾಡಿ, ಸೌಲಭ್ಯ ನನ್ನ ಕೇಳಿದರೆ ತಪ್ಪೇ ಎಂದು ಕೇಳಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಬೇಡ ಎಂದರೆ ಇನ್ನು ಮುಂದೆ ನಾನು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವುದನ್ನೇ ಬಿಡುತ್ತೇನೆ ಎಂದರು.
ಅಲ್ಲಿಗೆ ಸುಮ್ಮನಾಗದ ಸಿಎಂ, ನನ್ನ ಎದುರು ಮೋದಿ ಮೋದಿ ಎಂದು ಕೂಗಿದರೆ ಏನು ಪ್ರಯೋಜನ. ನಿಮ್ಮ ಸಮಸ್ಯೆ ಆಲಿಸಿ ಇತ್ಯರ್ಥಪಡಿಸಬೇಕಾದವನು ನಾನೇ ಎಂದು ಹೇಳುವ ಮೂಲಕ ಮೋದಿ ಬಗೆಗಿನ ಅಸಮಾಧಾನ ಹೊರಹಾಕಿದರು.
Advertisement
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಟ್ಟಿನಲ್ಲಿ ಹೇಳಿದ ಈ ಮಾತು ವಿವಾದಕ್ಕೆ ಕಾರಣವಾಗಿ, ಕಡೆಗೆ ಅವರೇ ಸ್ಪಷ್ಟೀಕರಣ ನೀಡಿದ ಪ್ರಸಂಗ ನಡೆದಿದೆ. ಈ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಎಂ ಅವರ ಕೊಳಕು ಮನಸ್ಸನ್ನು ತೋರಿಸುತ್ತದೆ ಎಂದು ಎಂದು ಬಣ್ಣಿಸಿದೆ.
Related Articles
Advertisement
ಕೊಳಕು ಮನಸ್ಸು: ಬಿಎಸ್‌ವೈ
ಜನರ ಬಗ್ಗೆ ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಗೆದ್ದ ಕಾರಣ ಸಂಯಮ ಕಳೆದುಕೊಳ್ಳುತ್ತಿರುವುದು ಕುಮಾರಸ್ವಾಮಿಯವರ ಕೊಳಕು ಮನಸ್ಸನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮೋದಿಗೆ, ಬಿಜೆಪಿಗೆ ಮತ ಹಾಕಿದರು’ ಎಂದು ಹೀಯಾಳಿಸಿ ಮಾತನಾಡುವುದು ಮುಖ್ಯಮಂತ್ರಿ ಸ್ಥಾನಕ್ಕೆ ಮಾಡಿದ ಅವಮಾನ. ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಭಾವನೆಗಳನ್ನು ಹತ್ತಿಕ್ಕಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಪ್ರಜಾಪ್ರಭುತ್ವ ಹಾಗೂ ಜನ ವಿರೋಧಿ ಕ್ರಮ ಎಂದು ಕಿಡಿ ಕಾರಿದ್ದಾರೆ. ಈ ರೀತಿಯ ದೌರ್ಜನ್ಯದಿಂದ ಕೂಡಿದ ಗ್ರಾಮ ವಾಸ್ತವ್ಯವನ್ನು ಜನ ಸಹಿಸುವುದಿಲ್ಲ. ಮಾನಸಿಕ ದೌರ್ಜನ್ಯ ಮುಂದುವರಿಸಿದರೆ ಬಿಜೆಪಿಯೂ ಸಹಿಸುವುದಿಲ್ಲ. ಸಮಯ ಬಂದರೆ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವೂ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಹಿಂದೆ ‘ಕಾಣದ ಶಕ್ತಿ’
ಸಿಎಂ ಕುಮಾರಸ್ವಾಮಿ ಅವರ ವಿರುದ್ಧದ ಪ್ರತಿಭಟನೆ ಹಿಂದೆ ಕಾಣದ ಶಕ್ತಿಯ ಕೈವಾಡವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿಯ ವರು ಗ್ರಾಮವಾಸ್ತವ್ಯದ ವೇಳೆ ಜನತಾದರ್ಶನ ನಡೆಸಿ ಎಲ್ಲರ ಸಮಸ್ಯೆ ಆಲಿಸುವುದಾಗಿ ಹೇಳಿ ದರೂ ತಾಳ್ಮೆ ಬೇಡವೇ? ಏಕಾಏಕಿ ಬಂದು ಈಗಲೇ, ಸ್ಥಳದಲ್ಲೇ ಪರಿಹಾರ ಕೊಡಿಸಿ ಎಂದರೆ ಹೇಗೆ? ಬಿಜೆಪಿ ನಾಯಕರು ಈ ಬಗ್ಗೆ ಮಾತನಾ ಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಕುಮಾರಸ್ವಾಮಿಯವರು ವಿನೂತನ ಮಾದರಿಯಲ್ಲಿ ಗ್ರಾಮವಾಸ್ತವ್ಯ ಮಾಡಲು ಮುಂದಾಗಿದ್ದಾರೆ. ಆದರೆ, ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಗ್ರಾಮ ವಾಸ್ತವ್ಯ ಅಡ್ಡಿಪಡಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಯಾರದೋ ಪ್ರೇರಣೆ ಇದೆ. ಒಂದು ಶಕ್ತಿ ಇದಕ್ಕೆ ಅಡ್ಡಿಪಡಿಸುತ್ತಿದೆ ಎಂದು ಹೇಳಿದರು.