ರಾಮನಗರ: ಜಿಲ್ಲೆಯಲ್ಲಿ ಚುನಾವಣಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರರನ್ನು ಸೆಳೆಯುವ ಸಲುವಾಗಿ ಹಲವು ಭಾಗ್ಯಗಳ ಸುರಿಮಳೆಯಾಯ್ತು, ಉಡುಗೊರೆ, ಕೊಡುಗೆಗಳ ಕೊಟ್ಟಿದ್ದೂ ಆಯ್ತು. ಸೈಟ್ ನೋಂದಣಿ ಮಾಡಿಸಿದ್ದೂ ಮುಗೀತು.
ಈಗ, ಹೋಮ ಹವನದ ಸರದಿ. ಹೌದು. ವಿಶೇಷವಾಗಿ ತೀವ್ರ ಜಿದ್ದಾಜಿದ್ದಿಗೆ ಸಿದ್ಧವಾಗಿರುವ ಚನ್ನಪಟ್ಟಣದ ರಾಜಕೀಯ ವಲಯದಲ್ಲಿ ಹೊಸದೊಂದು ಟ್ರೆಂಡ್ ಸೃಷ್ಟಿಯಾಗಿದೆ. ಇಬ್ಬರು ಮದಗಜಗಳು ದೇವರ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಮಾಟ ಮಂತ್ರದ ಮಾಡಿಸ್ತಿದ್ದಾರೆ ನೋಡುವಾ ಎನ್ನುವ ಮೂಲಕ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೊಸದೊಂದು ನ್ಪೋಟಕ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಕಸರತ್ತು: ಬೊಂಬೆನಗರಿ ಜೆಡಿಎಸ್‌ನ ಭದ್ರಕೋಟೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಕೂಡ ಹೌದು. ತಮ್ಮ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಎನ್ನುವ ಮೂಲಕ ಮಾಡು ಇಲ್ಲವೆ ಮಡಿ ಎನ್ನುವ ಹಂತಕ್ಕೆ ಮುಂದಾಗಿದ್ದಾರೆ. ಸೈನಿಕ-ದಳಪತಿ ಕೋಟೆಯಲ್ಲಿ ಹಿಡಿತ ಸಾಧಿಸಲು ಹಾಗೂ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಕಳೆದ ಒಂದು ತಿಂಗಳಿನಿಂದ ಸ್ವಾಭಿಮಾನ ಸಂಕಲ್ಪ ನಡಿಗೆ ಆರಂಭಿಸುವ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತ ಬೇಟೆಗೆ ನಿಂತಿದ್ದಾರೆ. ಆದರೆ, ದಳಪತಿ ಮಾತ್ರ ಪಂಚರತ್ನ ಯಾತ್ರೆ ಮೂಲಕ ರಾಜ್ಯ ಸುತ್ತಿ ಪಕ್ಷ ಸಂಘಟನೆ ಗಟ್ಟಿಗೊಳಿಸಿ ಅಧಿಕಾರಕ್ಕೆ ತಂದೇ ತರಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.
ಮಹದೇಶ್ವರನಿಗೆ ರುದ್ರಾಭಿಷೇಕ: ಇದೇ ಹಾದಿಯಲ್ಲಿ ಮುಂದುವರಿದಿರುವ ಸಿ.ಪಿ.ಯೋಗೇಶ್ವರ್ ಅವರು, ತಮ್ಮ ಕುಲದೇವರಾದ ಮಹದೇಶ್ವರ ಸ್ವಾಮಿಯ ಮೊರೆ ಹೋಗಿದ್ದು, ಸಕುಟುಂಬ ಸಮೇತ ಹೋಮ-ಹವನ ಮಾಡುವ ಮೂಲಕ ಶಿವಲಿಂಗಕ್ಕೆ ರುದ್ರಾಭಿಷೇಕ ವಿಶೇಷ ಪೂಜೆ ಮಾಡಿಸಿದ್ದಾರೆ. ಇದು ದಳಪತಿ ಮಾಡಿಸಿದ್ದ ಮಹಾಚಂಡಿಕಾ ಯಾಗಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಸಿಪಿವೈ ಪೂಜೆ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸುತ್ತಾ ಮಾಜಿ ಸಿಎಂ ಕುಮಾರಸ್ವಾಮಿ ಅವರು ತೋಟದ ಮನೆಯಲ್ಲಿ ಮಾಟ ಮಂತ್ರ ಮಾಡಿಸುತ್ತಿದ್ದಾರೆ. ಏನಾಗುತ್ತೋ ನೋಡೋಣ ಎನ್ನುವ ಮೂಲಕ ವ್ಯಂಗ್ಯ ವಾಡಿದ್ದರು.
ಮದಗಜಗಳ ನಡುವೆ ಜಂಗಿ ಕುಸ್ತಿ ಜೋರು : ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ದಾಳ-ಪ್ರತಿದಾಳ, ತಂತ್ರ-ಪ್ರತಿತಂತ್ರಗಳೇ ಜೋರಾಗಿದ್ದು, ನಾನಾ-ನೀನಾ ಎನ್ನುವ ಪ್ರಶ್ನೆ ಎದುರಾಗಿದೆ. ದಳಪತಿಗೆ ಸ್ವಕ್ಷೇತ್ರ ಉಳಿಸಿಕೊಳ್ಳುವ ಪ್ರಶ್ನೆಯಾಗಿದ್ರೆ, ಸೈನಿಕನಿಗೆ ಈ ಚುನಾವಣೆ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಇಬ್ಬರು ಮದಗಜಗಳ ನಡುವೆ ಜಂಗಿ ಕುಸ್ತಿ ಜೋರಾಗಿದ್ದು, ರಾಜಕೀಯ ಪಡಸಾಲೆಯಲ್ಲಿ ಕೌತುಕ ಹುಟ್ಟು ಹಾಕಿದೆ. ಯಾರು ಹಿತವರು ಇವರಿಬ್ಬರೊಳಗೆ ಎನ್ನುವ ಪ್ರಶ್ನೆ ಕೂಡ ಈಗ ಎದುರಾಗಿದೆ.
ಬಿಡದಿ ತೋಟದ ಮನೆಯಲ್ಲಿ ಮಹಾಚಂಡಿಕಾಯಾಗ : ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಹೊರರಾಜ್ಯದ ಪುರೋಹಿತರನ್ನು ಕರೆಸಿ ಬಿಡದಿಯ ತೋಟದ ಮನೆಯಲ್ಲಿ 11 ದಿನಗಳ ಕಾಲ ದಂಪತಿ ಸಮೇತರಾಗಿ ಮಹಾಚಂಡಿಕಾಯಾಗ ನಡೆಸಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವಗೌಡರು ಆರೋಗ್ಯ ಸುಧಾರಿಸಲಿ, ಲೋಕಕಲ್ಯಾಣಕ್ಕಾಗಿ ಹಾಗೂ ಈ ಬಾರಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಬಹುಮತದಿಂದ ಅಧಿಕಾರಕ್ಕೆ ಬರಲಿ ಎಂಬ ಸದುದ್ದೇಶದಿಂದ ದೈವದ ಮೊರೆ ಹೋಗಿದ್ದು, ಪೂಜೆ-ಪುನಸ್ಕಾರಗಳು ನಡೆಸಿದ್ದರು.
– ಎಂ.ಎಚ್. ಪ್ರಕಾಶ, ರಾಮನಗರ