ಮೈಸೂರು: ಉಪ ಚುನಾವಣೆಯಲ್ಲಿ ಗೆದ್ದ ಹತ್ತು ಶಾಸಕರು ಸಚಿವರಾಗಿ ಮಜಾ ಮಾಡಿದರೆ ಬಿಜೆಪಿಯ 105 ಶಾಸಕರು ಕಡುಬು ತಿನ್ನುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿರಲಿಲ್ಲ. ಹಾಗಾಗಿ ನಾನು ಹೋಗಿಲ್ಲ ಎಂದರು. ನಮ್ಮ ಪಕ್ಷಗಳಿಂದ ಹೊರ ಹೋಗಿ ಹೊಸದಾಗಿ ಶಾಸಕರಾಗಿರುವವರಿಗೆ ತೃಪ್ತಿ ಆಗಿದೆ. ಅವರು ಈಗ ಸಂಪದ್ಭರಿತರೂ ಆಗಿದ್ದಾರೆ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ಅವರು ಅನುಭವಿಗಳಾಗಿದ್ದಾರೆ. ಸರಕಾರವನ್ನು ಬೀಳಿಸುವುದು, ಹೊಸ ಸರಕಾರ ರಚನೆ ಮಾಡುವ ಕಲೆ ಅವರಿಗೆ ಕರಗತವಾಗಿದೆ. ಆ ಅನುಭವದಲ್ಲಿ ಸರಕಾರ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಎಷ್ಟು ದಿನ ಈ ಸರಕಾರ ಇರಲಿದೆ ಎಂದು ಭವಿಷ್ಯ ಹೇಳಲು ನಾನೇನು ಜ್ಯೋತಿಷಿಯಲ್ಲ ಎಂದರು.
ಸರಕಾರ ಉಳಿಸಿಕೊಳ್ಳಲು ಸಚಿವ ಸಂಪುಟದಿಂದ ಸಣ್ಣಪುಟ್ಟ ಸಮಾಜವನ್ನು ದೂರು ಇಟ್ಟಿರುವುದು ಮುಂದಿನ ದಿನಗಳಲ್ಲಿ ಮುಳುವಾಗಲಿದೆ. ಬಿಜೆಪಿ ವರಿಷ್ಠರಿಗೂ ಈ ಸರಕಾರದ ಬಗ್ಗೆ ಒಲವಿದ್ದಂತಿಲ್ಲ. ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಾಧಾನಗಳು ಏಳುವುದು ಸಹಜ. ಹಾಗೆಂದು ಬಿಜೆಪಿಯ ಯಾವೊಬ್ಬ ಅತೃಪ್ತರೂ ನನ್ನ ಸಂಪರ್ಕದಲ್ಲಿಲ್ಲ ಎಂದರು.
ಮೈತ್ರಿ ಸರಕಾರ ತೆಗೆಯಲೇಬೇಕೆಂದು ಬಿಜೆಪಿಗೆ ಹೋದೆವು ಎಂದು ವಿಶ್ವನಾಥ್ ಹೇಳಿದ್ದಾರೆ. ಮೈತ್ರಿ ಸರಕಾರ ತೆಗೆದು ಒಳ್ಳೆಯ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರ ಹೆಸರನ್ನು ಚರಿತ್ರೆಯಲ್ಲಿ ಬರೆಯುತ್ತಾರೆ. ಆಪರೇಷನ್ ಕಮಲ ಕುರಿತು ಯಾರಿಗೆ ಪ್ರೇರಣೆ ನೀಡಲು ವಿಶ್ವನಾಥ್ ಪುಸ್ತಕ ಬರೆಯುತ್ತಾರೋ ಗೊತ್ತಿಲ್ಲ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ