ಬೆಂಗಳೂರು: ಆಡಳಿತಾರೂಢ ಬಿಜೆಪಿ ಪಕ್ಷದ ಜನಸ್ವರಾಜ್ ಸಮಾವೇಶಗಳ ಬಗ್ಗೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “ಸ್ವರಾಜ್ ಹಸೆರಲ್ಲಿ ಶಂಖ ಊದಿದರೆ ಸ್ವರಾಜ್ಯ ಸಿಗುತ್ತಾ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭಾರಿ ಮಳೆಯಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದರೆ ಆಡಳಿತಾರೂಢ ಬಿಜೆಪಿ ಪಕ್ಷ ಶಂಖ ಊದಿಕೊಂಡು ಜನ ಸ್ವರಾಜ್ ಯಾತ್ರೆ ಅಂತ ಶುರು ಮಾಡಿಕೊಂಡಿದೆ. ಯಾರ ಸ್ವರಾಜ್ಯಕ್ಕಾಗಿ ಈ ಯಾತ್ರೆ? ಶಂಖ ಊದಿದರೆ ಜನರಿಗೆ ಸ್ವರಾಜ್ಯ ಬರುತ್ತದಾ? ಇದರಿಂದ ರೈತರ ಸಮಸ್ಯೆ ಬಗೆಹರಿಯುತ್ತಾ? ಎಂದು ವಾಗ್ಧಾಳಿ ನಡೆಸಿದರು.
ರಾಜ್ಯದಲ್ಲಿ ಅನೇಕ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸರ್ಕಾರದ ಅಂದಾಜಿನ ಪ್ರಕಾರ 7 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. ಚಿಕ್ಕಮಗಳೂರು ಕಡೆ ಕಾಫಿ ತೋಟಗಳು ಹಾಳಾಗಿವೆ. ರಾಯಚೂರು ಜಿಲ್ಲೆಯಲ್ಲಿ ಭತ್ತ ಕೆಸರಿನಲ್ಲಿ ಮುಚ್ಚಿ ಹೋಗಿದೆ. ಚಿತ್ರದುರ್ಗ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಎಲ್ಲಾ ಕಡೆ ಅನಾಹುತ ಆಗಿದೆ. ಬೆಂಗಳೂರಿನಲ್ಲೂ ರಸ್ತೆಗಳು ಹಾಳಾಗಿವೆ, ಹಲವಾರು ಸಮಸ್ಯೆಗಳು ಎದುರಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಸಚಿವರು ತ್ವರಿತವಾಗಿ ಪರಿಹಾರ ಕೆಲಸ ಮಾಡುವುದು ಬಿಟ್ಟು ಶಂಖ ಊದಿಕೊಂಡು ಹೋದರೆ ಹೇಗೆ? ಎಂದು ಅವರು ಕಿಡಿ ಕಾರಿದರು.
ಇದನ್ನೂ ಓದಿ:ಪರಿಷತ್ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್, ಶತಾಯಗತಾಯ ಗೆಲ್ಲಲು ಬಿಜೆಪಿ ಯತ್ನ
ಗೋವಿನ ಸಂರಕ್ಷಣೆ ಮಾಡುತ್ತೇವೆ ಎಂದು ಸರಕಾರ ಹೇಳಿ ಎಲ್ಲ ಕಡೆ ಗೋಶಾಲೆಗಳನ್ನು ತೆರೆಯುತ್ತವೆ ಎಂದು ಹೇಳಿತ್ತು. ಈಗ ನೋಡಿದರೆ ಗೋಶಾಲೆಗಳನ್ನು ತೆರೆಯಲು ಕೇವಲ 25 ಕೋಟಿ ರೂಪಾಯಿ ಕೊಡಲಾಗುವುದು ಎಂದು ಈಗ ಹೇಳುತ್ತಿದ್ದಾರೆ. ಗೋ ಶಾಲೆಗಳಿಗೆ ಹಣ ನೀಡುವುದಕ್ಕೂ ಸಾಕಾರಕ್ಕೆ ಆಗಿಲ್ಲ. ಬೆಳೆ ನಾಶದಿಂದ ಮೇವು ಕೊರತೆ ಉಂಟಾಗಿದೆ. ಇದೆಲ್ಲಾ ಒಂದಕ್ಕೊಂದು ಚೈನ್ ಲಿಂಕ್ ಇದೆ. ಸ್ಥಳೀಯ ಮಟ್ಟದಲ್ಲಿ ಡಿಸಿಗಳು ಇಷ್ಟೊತ್ತಿಗೆ ಸಮೀಕ್ಷೆ ಮಾಡಬೇಕಿತ್ತು. ಅದಾವುದೂ ಆಗಿಲ್ಲ. ಶಂಕ ಊದಿಕೊಂಡು ಹೋದರೆ ಇದೆಲ್ಲ ಬಗೆಹರಿಯುತ್ತಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.
ಕೇಂದ್ರ ಸರರ್ಕಾರವನ್ನು ನೆಚ್ಚಿಕೊಳ್ಳದೆ ಎಸ್‌ಡಿಆರ್‌ಎಫ್ನಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕು. ತಕ್ಷಣ ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಿ ಬೆಳೆ ಪರಿಹಾರ, ಪುನರ್ವಸತಿಗೆ ತರ್ತು ಕ್ರಮ ವಹಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಇಲ್ಲ: ಎಚ್‌ಡಿಕೆ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಸೋಮವಾರ ಪ್ರಕಟಿಸಲಾಗುವುದು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಬೇರೆ ಪಕ್ಷಗಳಿಂದ ಬಂದವರಿಗೆ ಟಿಕೆಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.