ಎಚ್.ಡಿ.ಕೋಟೆ: ರಾಜ್ಯದಲ್ಲಿ ಮುಂಗಾರು ಮಳೆ ಕಣ್ಮರೆಯಾಗಿ ರಾಜ್ಯದ ಅನೇಕ ತಾಲೂಕುಗಳಲ್ಲಿ ಬರದಛಾಯೆ ಆವರಿಸಿರುವುದನ್ನು ಮನಗಂಡಿರುವ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಸರ್ಕಾರ, ಇಂದು ರಾಜ್ಯದ 113 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುತ್ತಿದ್ದು ಎಚ್.ಡಿ.ಕೋಟೆ ತಾಲೂಕು ಈ ಬಾರಿ ಬರಪೀಡಿತ ತಾಲೂಕು ಎಂದು ಘೋಷಣೆ ಆಗುವ ಸಾಧ್ಯತೆ ಇದೆ.
ಕುತೂಹಲ: ಅರೆ ಮಲೆನಾಡು ಖ್ಯಾತಿಯ ಎಚ್.ಡಿ.ಕೋಟೆ ತಾಲೂಕು ಕೂಡ ತೀವ್ರ ಮಳೆ ಕೊರತೆ ಎದುರಿಸುತ್ತಿದೆ. ಈಗಾಗಲೇ ಬರಪೀಡಿತ ಪ್ರದೇಶಗಳ ಆಯ್ಕೆ ಸಂಬಂಧ ಸರ್ಕಾರ ರಚನೆ ಮಾಡಿರುವ ಉಪಸಮಿತಿ ಪಟ್ಟಿಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಹೆಸರಿದೆ. ಜತೆಗೆ ಸರ್ಕಾರ ಸೂಚಿರುವ ಮಾನದಂಡದಂತೆ ಈಗಾಗಲೇ ತಾಲೂಕಿನಲ್ಲಿ ಕನಿಷ್ಠ ಮಳೆಯಾಗಿರುವ 17 ಹಳ್ಳಿಗಲ್ಲಿ ಇಲ್ಲಿನ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಬೆಳೆ ಆ್ಯಪ್ ಮೂಲಕ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಹೀಗಾಗಿ ಸರ್ಕಾರ ಬರ ಪೀಡಿತ ತಾಲೂಕು ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು ತಾಲೂಕಿನ ಜನರಲ್ಲಿ ಕುತೂಹಲ ಹೆಚ್ಚಿಸಿದೆ.
ಕೈತಪ್ಪುವ ಭೀತಿ: ಮುಂಗಾರು ಮಳೆ ಆಗಸ್ rನಲ್ಲಿ ಸಂಪೂರ್ಣ ಕಣ್ಮರೆಯಾಗಿ ಈಗ ಸೆಪ್ಟೆಂಬರ್ ಮೊದಲ ವಾರದಲ್ಲೂ ಮಳೆ ಬರುವ ಸುಳಿವು ಕಾಣಿಸುತ್ತಿಲ್ಲ. ಈಗಾಗಾಲೇ ಬಿಸಿಲಿನ ತಾಪಕ್ಕೆ ತಾಲೂಕಿನ ಕೆರೆಕಟ್ಟೆ ಬತ್ತಿಹೋಗುತ್ತಿವೆ. ಈ ಹಿಂದೆ ಬಿದ್ದ ಮಳೆಗೆ ರೈತರು ಹೊಲ ಗದ್ದೆಗಳಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕಾಲ ಕಾಲಕ್ಕೆ ಮಳೆಯಿಲ್ಲದೇ ಒಣಗುತ್ತಿವೆ. ತಾಲೂಕಿನ ರೈತರಿಗೆ ಬೆಳೆ ನಷ್ಟದ ಜತೆಗೆ ಬಿತ್ತನೆ ಹಾಕಿದ್ದ ಮೂಲ ಬಂಡವಾಳವೂ ಕೈತಪ್ಪುವ ಭೀತಿ ಆವರಿಸಿದೆ. ತಾಲೂಕಿನಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಸಮಗ್ರ ವರದಿಯನ್ನು ಎಚ್.ಡಿ.ಕೋಟೆ ಸಹಾಯಕ ಕೃಷಿ ಅಧಿಕಾರಿಗಳು ಮತ್ತು ತಂಡ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರ ಸೋಮವಾರ ಘೋಷಣೆ ಮಾಡಲಿರುವ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಎಚ್ .ಡಿ.ಕೋಟೆ ತಾಲೂಕು ಘೋಷಣೆಯಾಗಲಿ ಎಂದು ಇಲ್ಲಿನ ರೈತಾಪಿ ವರ್ಗ ದೇವರಲ್ಲಿ ಮೊರೆಯಿಟ್ಟಿದೆ. ಈ ಬಾರಿ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗುವ ಮಳೆ ಕೊರತೆಯಿಂದ ಮೂಲಕ ಬೆಳೆ ನಷ್ಟವೊಂದಿರುವ ರೈತರಿಗೆ ಸೂಕ್ತ ಪರಿಹಾರ ಸಿಗಲಿ ಎಂಬುದು ತಾಲೂಕಿನ ಜನತೆ ಆಶಯವಾಗಿದೆ.
ಸರಗೂರು ತಾಲೂಕಿನ ಹೆಸರಿಲ್ಲ?: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಅವಳಿ ತಾಲೂಕಾಗಿದ್ದರೂ ಈ ಬಾರಿ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸರಗೂರು ತಾಲೂಕಿನ ಹೆಸರು ಇಲ್ಲ ಎಂದು ಇಲ್ಲಿನ ಸಹಾಯಕ ಕೃಷಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಸರಗೂರು ತಾಲೂಕನ್ನು ಬರಪೀಡಿತ ಪಟ್ಟಿಗೆ ಪರಿಗಣಿಸದೆ ಎಚ್.ಡಿ.ಕೋಟೆ ತಾಲೂಕನ್ನು ಮಾತ್ರ ಪರಿಗಣಿಸಲಾಗಿದೆ. ಸರಗೂರು ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆ ಎದ್ದು ಕಾಣುತ್ತಿದೆಯಾದರೂ ಬರಪೀಡಿತ ತಾಲೂಕು ಪಟ್ಟಿಯಿಂದ ಸರಗೂರು ವಂಚಿತವಾಗಿದ್ದು ರೈತರಲ್ಲಿ ನಿರಾಶೆ ಮೂಡಿಸಿದೆ. ಈ ಬಾರಿ ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ಮತ್ತು ಟಿ.ನರಸೀಪುರ ತಾಲೂಕು ಮಾತ್ರ ಬರ ಪೀಡಿತ ತಾಲೂಕು ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ತಿಳಿದು ಬಂದಿದೆ.
ಮಾರ್ಗಸೂಚಿ ಹಾಗೂ ಮಾನದಂಡದಂತೆ ತಾಲೂಕಿನಲ್ಲಿ ಕನಿಷ್ಠ ಮಳೆ ಆಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಬಾರಿ ಎಚ್.ಡಿ.ಕೋಟೆ ತಾಲೂಕು ಬರಪೀಡಿತ ತಾಲೂಕಾಗಿ ಘೋಷಣೆಯಾಗಲಿದೆ.
●ಜಯರಾಮಯ್ಯ, ಸಹಾಯಕ ಕೃಷಿ ಅಧಿಕಾರಿ, ಕೃಷಿ ಇಲಾಖೆ ಎಚ್.ಡಿ.ಕೋಟೆ
-ಬಿ.ನಿಂಗಣ್ಣಕೋಟೆ