Advertisement

ಜೆಡಿಎಸ್‌ಗೆ ಸರಳ ಬಹುಮತ ಖಚಿತ: ಎಚ್‌.ಡಿ. ದೇವೇಗೌಡ

12:59 AM May 03, 2023 | Team Udayavani |

ಬೆಂಗಳೂರು: “ಚುನಾವಣೆಯಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿವೆ ಎನ್ನುವುದಾದರೆ ಆ ಪಕ್ಷಗಳು ಗೆಲ್ಲುವ ಕ್ಷೇತ್ರಗಳು ಯಾವುವು ಬಹಿರಂಗಪಡಿಸಲಿ ನೋಡೋಣ…’
-ಇದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ನೇರ ಸವಾಲು. “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಸಮೀಕ್ಷೆಗಳ ಭವಿಷ್ಯ ಸುಳ್ಳಾಗಲಿದ್ದು, ಜೆಡಿಎಸ್‌ ಸರಳ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ ಎಂದರು.

Advertisement

 ಜೆಡಿಎಸ್‌ ಚುನಾವಣೆ ಪ್ರಚಾರ ಹೇಗಿದೆ?
ರಾಜ್ಯದಲ್ಲಿ ನಮ್ಮದೇ ಆದ ಶಕ್ತಿ ಉಳಿಸಿ ಕೊಂಡಿ ದ್ದೇವೆ. ಕುಮಾರಸ್ವಾಮಿ ನುಡಿದಂತೆ ನಡೆದು ತೋರಿಸಿ ದ್ದಾರೆ. ರಾಜ್ಯದ ಜನತೆ ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳ ಸಹವಾಸ ಬೇಡ ಎಂದು ಬದ ಲಾವಣೆ ಬಯಸಿದ್ದಾರೆ. ಜೆಡಿಎಸ್‌ಗೆ ಉತ್ತಮ ಸ್ಪಂದನೆ ಸಿಗುತ್ತಿದೆ.

 ಕಾಂಗ್ರೆಸ್‌ ಮತ್ತು ಬಿಜೆಪಿ ಸಹವಾಸ ಇಲ್ಲದೆ ಸ್ವತಂತ್ರವಾಗಿ ಸರಕಾರ ಮಾಡುತ್ತೀರಾ?
ಖಂಡಿತ ಮಾಡುತ್ತೇವೆ. ಇದರಲ್ಲಿ ಅನು ಮಾನ ಬೇಡ. ಕುಮಾರಸ್ವಾಮಿ ಯವರ ಜಲಧಾರೆ ಯಾತ್ರೆ, ಪಂಚಾಯತ್‌ಗೊಂದು ಹೈಟೆಕ್‌ ಶಾಲೆ ಮತ್ತು ಆಸ್ಪತ್ರೆ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ರೈತರಿಗೆ ಪಿಂಚಣಿ ಸೇರಿದಂತೆ ಪಂಚರತ್ನ ಕಾರ್ಯಕ್ರಮಗಳು ಜನರ ಹೃದಯ ತಲುಪಿವೆ. ಹೀಗಾಗಿ ಸ್ವತಂತ್ರ ಸರಕಾರ ಮಾಡುವುದರಲ್ಲಿ ಅನುಮಾನವಿಲ್ಲ.

 ಈ ಬಾರಿಯೂ ಸಮ್ಮಿಶ್ರ ಸರಕಾರ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲೇ ಕೆಲವರು ಹೇಳುತ್ತಿದ್ದಾರಲ್ಲ?
ಅದು ಅವರ ಭಾವನೆ ಇರಬಹುದು. ಅದಕ್ಕೆಲ್ಲ ನಾನು ಔಷಧ ಕೊಡಲು ಸಾಧ್ಯವೇ? ಆದರೆ ನನಗೆ ನಮ್ಮ ಶಕ್ತಿ ಮೇಲೆ ನಂಬಿಕೆ ಇದೆ. ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ, ಜೆಡಿಎಸ್‌ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಎಚ್‌.ಡಿ. ಕುಮಾರಸ್ವಾಮಿ ಮೂರನೇ ಬಾರಿ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

 ಬಿಜೆಪಿಯವರು ನಿಮ್ಮನ್ನು ಕಾಂಗ್ರೆಸ್‌ ಬಿ ಟೀಂ ಅನ್ನುತ್ತಾರೆ, ಕಾಂಗ್ರೆಸ್‌ನವರು ಬಿಜೆಪಿ ಬಿ ಟೀಂ ಅನ್ನುತ್ತಾರಲ್ಲ?
ಕಳೆದ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಮೂಲಕ ಬಿ ಟೀಂ ಎಂದು ಹೇಳಿಸಲಿಲ್ಲವಾ? ಈ ಬಾರಿ ಬಿಜೆಪಿಯವರೂ ಹೇಳು ತ್ತಿದ್ದಾರೆ. ಇದರಲ್ಲಿ ವಿಶೇಷ ಏನಿದೆ? ಎರಡೂ ಪಕ್ಷಗಳ ನಾಯಕರಿಗೆ ಮಾತನಾಡಲು ಬೇರೆ ಯಾವ ವಿಷಯ ಇದೆ? ದೇವೇಗೌಡರು ಭ್ರಷ್ಟರು ಎಂದು ಹೇಳಲು ಸಾಧ್ಯವಾ, ಹೇಳಲಿ ನೋಡೋಣ. ಮಾತನಾಡಲು ಏನೂ ಇಲ್ಲದಾಗ ಇಂತಹ ಅಪಪ್ರಚಾರ ಆರಂಭವಾಗುತ್ತದೆ. ಮತದಾರರಿಗೆ ಇವರ ಆಟವೆಲ್ಲ ಗೊತ್ತಿದೆ.

Advertisement

ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಜೆಡಿಎಸ್‌ ಹಳೇ ಮೈಸೂರಿಗೆ ಸೀಮಿತ ಅನ್ನುತ್ತಾರಲ್ಲ?
ವಾಕ್‌ ಸ್ವಾತಂತ್ರ್ಯ ಇದೆ, ಹೇಳಿಕೊಳ್ಳಲಿ ಬಿಡಿ. ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಬೀದರ್‌ನಿಂದ ಚಾಮರಾಜನಗರದವರೆಗೆ ಎಚ್‌.ಡಿ. ಕುಮಾರಸ್ವಾಮಿ ಪಂಚರತ್ನ ಯಾತ್ರೆಗೆ ದೊರೆಯುತ್ತಿರುವ ಸ್ಪಂದನೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ರಾತ್ರಿ 11 ಗಂಟೆವರೆಗೂ ಸೇರುವ ಜನಪ್ರವಾಹ ನೋಡಿದ ಮೇಲೂ ನಿಮಗೆ ಹಾಗೆ ಅನಿಸುತ್ತದೆಯೇ?

ರಾಜ್ಯದಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ಎದುರಾದರೆ?
ಆ ರೀತಿಯ ಪರಿಸ್ಥಿತಿ ಸಾಧ್ಯವೇ ಇಲ್ಲ. ಅತಂತ್ರಕ್ಕೆ ಅವಕಾಶ ಇಲ್ಲ. ಜೆಡಿಎಸ್‌ಗೆ ಬಹುಮತ ಬಂದೇ ಬರುತ್ತದೆ.

ಹಾಗಲ್ಲ ಸರ್‌, ಒಂದೊಮ್ಮೆ ಬಂದರೆ?
ಅಯ್ಯೋ ರಾಮ, ನಾನು ಹೇಳುತ್ತಿದ್ದೇನಲ್ಲ, ಆ ರೀತಿ ಆಗುವುದಿಲ್ಲ ಅಂತ. ಆ ವಿಷಯ ಬಿಟ್ಟು ಬಿಡಿ. ಕಳೆದ ಬಾರಿಯೂ ನಾವೇನೂ ಕಾಂಗ್ರೆಸ್‌ ಮನೆ ಬಾಗಿಲಿಗೆ ಹೋಗಿರಲಿಲ್ಲ, ಅವರೇ ಬಂದಿದ್ದರು. ಆಮೇಲೆ ಸರಕಾರ ಬೀಳಿಸಿದ್ದು ಯಾರು ಅಂತ ಗೊತ್ತಿದೆ. ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಕಾರಣ.

ಹಾಸನ ಟಿಕೆಟ್‌ ವಿಚಾರದಲ್ಲಿ ಗೊಂದಲ ಯಾಕೆ ಉಂಟಾಯಿತು?
ಈಗ ಅದು ಮುಗಿದ ಅಧ್ಯಾಯ. ಭವಾನಿ ರೇವಣ್ಣ ಅವರೇ ಸ್ವರೂಪ್‌ ನನ್ನ ಮಗನಂತೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಗೆಲ್ಲಿಸಿಕೊಂಡು ಬರಲು ಪಣ ತೊಟ್ಟಿದ್ದಾರೆ. ಇದಕ್ಕಿಂತ ಬೇರೆ ಏನು ಬೇಕು?

ಮುಸ್ಲಿಂ ಸಮುದಾಯ ಜೆಡಿಎಸ್‌ ಜತೆ ನಿಲ್ಲಲಿದೆಯೇ?
ನಾವು ಸಿ.ಎಂ. ಇಬ್ರಾಹಿಂ ಅವರನ್ನೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇವೆ. 27 ಕಡೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿದ್ದೇವೆ. ನಾನು, ಇಬ್ರಾಹಿಂ, ಕುಮಾರಸ್ವಾಮಿ, ಬಿ.ಎಂ. ಫಾರೂಕ್‌ ಎಲ್ಲರೂ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾಕ ಸಮುದಾಯಕ್ಕೆ ಮಾಡಿದ ಕಾರ್ಯಕ್ರಮಗಳು ನಮ್ಮ ಕೈ ಹಿಡಿಯಲಿವೆ. ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಪುನರ್‌ಸ್ಥಾಪನೆ ಮಾಡುತ್ತೇವೆ ಎಂಬುದಾಗಿಯೂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ಮುಸ್ಲಿಂ ಅಭ್ಯರ್ಥಿಗಳಿಗೇ ಟಿಕೆಟ್‌ ಕೊಡಲಾಗಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸುತ್ತಾರಲ್ಲ?
ಕಾಂಗ್ರೆಸ್‌ಗಿಂತ ಮೊದಲು ಪಟ್ಟಿ ಬಿಡುಗಡೆ ಮಾಡಿದ್ದು ನಾವು. ಅನಂತರ ಮಾಡಿದ್ದು ಅವರು. ಉಳಿದದ್ದು ನಿಮಗೇ ಬಿಡುತ್ತೇನೆ. ನಾವು ಗೆಲ್ಲುವ ಕಡೆಯೇ ಕೊಟ್ಟಿದ್ದೇವೆ.
ವರುಣಾದಲ್ಲಿ ಬಿಜೆಪಿ-ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ. ದಲಿತ ಮತ ವಿಭಜನೆಗಾಗಿ ಜೆಡಿಎಸ್‌ ಅದೇ ಸಮುದಾಯದ ಅಭ್ಯರ್ಥಿ ಹಾಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ?
ಹೌದಾ, ನನಗೆ ಗೊತ್ತಿಲ್ಲಪ್ಪ. ನಾನು ವರುಣಾಗೆ ಹೋಗಿಲ್ಲ, ಅಲ್ಲಿನ ಪರಿಸ್ಥಿತಿ ನನಗೆ ಗೊತ್ತಿಲ್ಲ. ಅಲ್ಲಿ ಯಾವ್ಯಾವ ಸಮುದಾಯ ಎಷ್ಟಿದೆ ಗೊತ್ತಿಲ್ಲ. ಅಲ್ಲಿ ಬಿಜೆಪಿಯವರು ಮೊದಲು ಏನು ತೀರ್ಮಾನ ಮಾಡಿದ್ದರು, ಆಮೇಲೆ ಏನು ನಿರ್ಧಾರ ಕೈಗೊಂಡರು ಗೊತ್ತಿಲ್ಲವೇ? ಅದು ಅವರ ವರಿಷ್ಠರ ವಿಚಾರ. ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ.

ನಿಮ್ಮ ಪ್ರಕಾರ ಈ ಬಾರಿಯ ಚುನಾವಣೆಯ ವಿಷಯ ಯಾವುದು?
ನಮಗೆ ರಾಜ್ಯದ ಅಭಿವೃದ್ಧಿ, ಎಲ್ಲ ವರ್ಗದ ಜನರ ನೆಮ್ಮದಿಯ ಬದುಕು ಪ್ರಮುಖ ವಿಚಾರ. 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಇಡೀ ದೇಶದಲ್ಲಿ ಯಾರಾದರೂ ಮಾಡಿದ್ದಾರಾ? ಕಾಂಗ್ರೆಸ್‌-ಬಿಜೆಪಿ ಗ್ಯಾರಂಟಿ ಕೊಡುತ್ತಿವೆ, ಆದರೆ ಜೆಡಿಎಸ್‌ ಮಾಡಿ ತೋರಿಸಿದೆ.

ಹಾಸನದ ಪ್ರೀತಂ ಗೌಡ ಅವರು ಬಹಿರಂಗವಾಗಿ ದೇವೇಗೌಡ-ನರೇಂದ್ರ ಮೋದಿ ಅವರ ನಡುವೆ ಮಾತುಕತೆ ಆಗಿದೆ ಅಂದಿದ್ದಾರಲ್ಲ?
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ರಾಜಕೀಯವಾಗಿ ಇಂತಹ ಯಾವುದೇ ಮಾತುಕತೆ ನಡೆದಿಲ್ಲ. ಹಾಸನದಲ್ಲಿ ಈ ಬಾರಿ ನಾವು ಏಳಕ್ಕೆ ಏಳು ಸ್ಥಾನ ಗೆಲ್ಲುತ್ತೇವೆ. ನಾಳೆಯೇ ನಾನು ಹಾಸನಕ್ಕೆ ಹೋಗುತ್ತಿದ್ದೇನೆ.

ನಿಮ್ಮ ಪ್ರಕಾರ ಖಚಿತವಾಗಿ ಜೆಡಿಎಸ್‌ ಎಷ್ಟು ಸ್ಥಾನ ಗೆಲ್ಲಲಿದೆ?
ಕಾಂಗ್ರೆಸ್‌ ಮತ್ತು ಬಿಜೆಪಿಯವರು 20, 30 ಅನ್ನುತ್ತಾರೆ. ಸಮೀಕ್ಷೆಗಳು 37ರ ವರೆಗೂ ಹೇಳುತ್ತವೆ. ನಾನು ದೃಶ್ಯ ಮಾಧ್ಯಮಗಳ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ನಾವು ಗೆಲ್ಲುವ 37 ಯಾವುದು ಅಂತ ಹೇಳಲು ಸಾಧ್ಯವಾ? ಅಷ್ಟೇ ಅಲ್ಲ, ಕಾಂಗ್ರೆಸ್‌ ಮತ್ತು ಬಿಜೆಪಿ ಗೆಲ್ಲುವ ಕ್ಷೇತ್ರಗಳು ಯಾವುವು ಹೇಳಲಿ ನೋಡೋಣ. ರಾಜ್ಯದ ಜನರ ಮೇಲೆ ನನಗೆ ನಂಬಿಕೆ ಇದೆ. ಜೆಡಿಎಸ್‌ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಷ್ಟು ಮಾತ್ರ ಹೇಳಬಲ್ಲೆ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next