Advertisement

ನಮ್ಮಿಂದ ತಪ್ಪಾಗಿದೆ: ದೇವೇಗೌಡ

02:43 PM Mar 08, 2020 | Suhan S |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಭದ್ರ ಬುನಾದಿಯಿದೆ. ಆದರೆ ಈಗ ಪಕ್ಷವನ್ನು ಸಕ್ರಿಯಗೊಳಿಸುವುದು ಅವಶ್ಯಕವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

Advertisement

ನಗರದ ವಾಸವಿ ಮಹಲ್‌ನಲ್ಲಿ ಕರ್ನಾಟಕ ಪ್ರದೇಶ ಜನತಾದಳ ಶನಿವಾರ ಆಯೋಜಿಸಿದ್ದ ಮುಂಬೈ ಕರ್ನಾಟಕದ 7 ಜಿಲ್ಲೆಗಳ ಬೆಳಗಾವಿ ವಿಭಾಗ ಮಟ್ಟದ ತರಬೇತಿ ಶಿಬಿರ ಹಾಗೂ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಲ್ಲಿ ಕಾರ್ಯಕರ್ತರ ಪಡೆಯಿದೆ. ಹಲವು ಕಾರಣಗಳಿಂದಾಗಿ ಪಕ್ಷ ಈಗ ನಿಸ್ತೇಜವಾಗಿದ್ದು, ಪಕ್ಷವನ್ನು ಕ್ರಿಯಾಶೀಲಗೊಳಿಸುವುದು ಅಗತ್ಯವಾಗಿದೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಜನತಾ ಪರಿವಾರ ಸಾಕಷ್ಟು ಏಳು ಬೀಳನ್ನು ಕಂಡಿದೆ. ರಾಮಕೃಷ್ಣ ಹೆಗಡೆ, ಎಸ್‌.ಆರ್‌. ಬೊಮ್ಮಾಯಿ, ಜೆ.ಎಚ್‌. ಪಟೇಲ್‌ ಅವರಿಲ್ಲ. ನಾನೊಬ್ಬನೇ ಉಳಿದುಕೊಂಡಿದ್ದೇನೆ. ಜನತಾ ಪಕ್ಷ ಜನತಾ ದಳವಾಗಿ, ಜನತಾದಳ ಜೆಡಿಎಸ್‌ ಹಾಗೂ ಜೆಡಿಯು ಎಂದು ಹೋಳಲಾಗಿದೆ. ಆದರೂ ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಬೇಕು. ಜೆಡಿಎಸ್‌ಗೆ ಉತ್ತಮ ಭವಿಷ್ಯವಿದೆ ಎಂದರು.

ನಮಗೇಕೆ ಮತ ಬರುತ್ತಿಲ್ಲ?: ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷಿತ ಮಟ್ಟದಲ್ಲಿ ಯಾಕೆ ಮತಗಳು ಬರುತ್ತಿಲ್ಲ ಎಂಬ ಬಗ್ಗೆ ಚಿಂತನ-ಮಂಥನ ನಡೆಯಬೇಕು. ನಮ್ಮ ಪಕ್ಷ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಕಾರಣವೋ? ಜಾತಿ ಕಾರಣವೋ? ನಮ್ಮಿಂದ ಕೂಡ ತಪ್ಪಾಗಿರಬಹುದು. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅವಲೋಕಿಸಬೇಕಿದೆ. ನಾನು ಪ್ರಧಾನಿಯಾಗಿದ್ದಾಗ, ಸಿಎಂ ಆಗಿದ್ದಾಗ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೇನೆ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ಹಲವರು ರಾಜಕೀಯದಲ್ಲಿ ಬೆಳೆಯಲು ಜೆಡಿಎಸ್‌ ವೇದಿಕೆ ಕಲ್ಪಿಸಿದೆ. ಕೆಲವರು ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್‌, ಬಿಜೆಪಿಗೆ ಹೋಗಿ ಬೆಳೆದರು. ಅವರ ಬಗ್ಗೆ ನಾವು ಮಾತನಾಡುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರಿದ್ದರೆ ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸಬಹುದಾಗಿದೆ ಎಂದರು. ಪಕ್ಷ ಕಟ್ಟುವುದು ಸರಳವಲ್ಲ: ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಜೆಡಿಎಸ್‌ ಪಕ್ಷವನ್ನು ಮತ್ತೆ ಕಟ್ಟುವ ಕೆಲಸ ಹುಬ್ಬಳ್ಳಿಯಿಂದ ಆರಂಭಗೊಂಡಿದೆ. ಪಕ್ಷ ಕಟ್ಟುವುದು ಸರಳವಲ್ಲ. ಬೇರು ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಬೇಕು. 86 ವರ್ಷಗಳ ಇಳಿ ವಯಸ್ಸಿನಲ್ಲಿ ದೇವೇಗೌಡರು ಪಕ್ಷಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಪಕ್ಷವನ್ನು ಕಟ್ಟಿ ತೋರಿಸಬೇಕಿದೆ. ನಾವು ಮನಸು ಮಾಡಿದರೆ ಖಂಡಿತವಾಗಿಯೂ ಪಕ್ಷವನ್ನು ಅಧಿಕಾರಕ್ಕೆ ತರಬಹುದಾಗಿದೆ ಎಂದರು.

Advertisement

ವೈ.ಎಸ್‌.ವಿ. ದತ್ತಾ ಮಾತನಾಡಿ, ಪಕ್ಷದ ಕಾರ್ಯಕರ್ತರಲ್ಲಿ ಶಿಸ್ತು ಬೆಳೆಸುವ ಉದ್ದೇಶದಿಂದ ಕಾರ್ಯಾಗಾರ ನಡೆಸಲಾಗುವುದು. ಜೆಡಿಎಸ್‌ ಅನೇಕರಿಗೆ ಅನ್ನ, ನೀರು ನೀಡಿದ ಪಕ್ಷ. ಪಕ್ಷ ಸದ್ಯ ಸಂಕಷ್ಟದಲ್ಲಿದ್ದು, ಅದನ್ನು ಆಶ್ರಯ ತಾಣವನ್ನಾಗಿ ಮಾಡುವ ಜವಾಬ್ದಾರಿ ಎಲ್ಲ ಕಾರ್ಯಕರ್ತರ ಮೇಲಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಗುರುರಾಜ ಹುಣಶಿಮರದ, ಶಿವಾನಂದ ಅಂಬಡಗಟ್ಟಿ, ರಾಜಣ್ಣ ಕೊರವಿ ಇದ್ದರು.

ಕಾರ್ಯಕರ್ತರಿಂದಲೇ ಕಾರ್ಯಾಗಾರವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು “ಎಚ್‌.ಡಿ. ದೇವೇಗೌಡರು ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆ’ ಹಾಗೂ ದೇವನೂರ ಮಹಾದೇವ ಬರೆದ “ಈಗ ಭಾರತ ಮಾತನಾಡುತ್ತಿದೆ’ ಕೃತಿಗಳನ್ನು ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next