Advertisement
ಕಾಂಗ್ರೆಸ್ ಅಥವಾ ಬಿಜೆಪಿಗೆ ಅತೀ ಹೆಚ್ಚು ಸ್ಥಾನಗಳು ಬಂದು ಸ್ವಷ್ಪ ಬಹುಮತ ಬರದಿದ್ದರೆ ನೀವು ಯಾರ ಜತೆ ಹೋಗುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಜಾತ್ಯತೀತ ತತ್ತÌದಲ್ಲಿ ನಂಬಿಕೆಯಿರಿಸಿಕೊಂಡು ಬಂದವರು. ರಾಷ್ಟ್ರ ಮಟ್ಟದಲ್ಲೂ ಜಾತ್ಯತೀತ ಪಕ್ಷಗಳ ಜತೆ ಸೇರಿ ಆಡಳಿತ ನಡೆಸಿದ್ದೇವೆ ಎಂದು ದೇವೇಗೌಡ ಅವರು ತಿಳಿಸಿದರು.
Related Articles
Advertisement
ಒಗ್ಗಟ್ಟಿನ ಕೊರತೆ ರಾಜ್ಯದ ಹಿತಕ್ಕೆ ಮಾರಕ :
ತಮಿಳುನಾಡಿನ ನೀರಾವರಿ ಯೋಜನೆಗಳು ಸೇರಿದಂತೆ ಅಲ್ಲಿನ ಅಭಿವೃದ್ಧಿ ಯೋಜನೆಗಳ ವಿಚಾರಕ್ಕೆ ಬಂದಾಗ ಅಲ್ಲಿನ ಸಂಸದರೆಲ್ಲರೂ ಪಕ್ಷ ಭೇದ ಮರೆತು ತತ್‌ಕ್ಷಣ ಒಗ್ಗಟ್ಟಾಗುತ್ತಾರೆ ಮತ್ತು ಸಂಸತ್‌ನಲ್ಲಿ ಪ್ರತಿಪಾದನೆ ಮಾಡುತ್ತಾರೆ. ಆದರೆ ನಮ್ಮ ರಾಜ್ಯದ ವಿಚಾರಕ್ಕೆ ಬಂದಾಗ ನಮ್ಮ ಸಂಸದರಲ್ಲಿ ಈ ರೀತಿಯ ಒಗ್ಗಟ್ಟು ಕಂಡುಬರುತ್ತಿಲ್ಲ. ಇದರಿಂದಾಗಿ ನಮ್ಮ ನೀರಾವರಿ ಯೋಜನೆಗಳು ವಿಳಂಬವಾಗುತ್ತಿವೆ. ಒಗ್ಗಟ್ಟಿನ ಕೊರತೆ ರಾಜ್ಯದ ಹಿತಕ್ಕೆ ಮಾರಕವಾದುದು ಎಂದು ದೇವೇ ಗೌಡ ಹೇಳಿದರು.
ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‌ಗೆ ಬರುವ ವಿಚಾರದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ಇಬ್ರಾಹಿಂ ಅವರು ನಮ್ಮ ಜತೆಯಲ್ಲೇ ಇದ್ದವರು. ಈಗ ಕಾಂಗ್ರೆಸ್‌ನಲ್ಲಿ ಎಂಎಲ್ಸಿ ಆಗಿದ್ದಾರೆ. ಜೆಡಿಎಸ್ ಸೇರುವುದಾದರೆ ಅವರ ಮನಸ್ಸಿನಲ್ಲಿ ಏನು ಇದೆ ಎಂಬುದು ಗೊತ್ತಾಗಬೇಕಲ್ಲ. ಅಲ್ಲಿ ಅವರನ್ನು ಲಘುವಾಗಿ ಪರಿಗಣಿಸಲು ಆರಂಭಿದ್ದು ಈಗ ಮತ್ತೆ ಸರಿಪಡಿಸಲು ಪ್ರಯತ್ನ ಅಲ್ಲೇ ನಡೆಯುತ್ತಿದೆ ಎಂದು ಕೇಳಿದ್ದೇನೆ ಅಂತಿಮವಾಗಿ ಏನಾಗುತ್ತದೋ ಗೊತ್ತಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಮಹಮ್ಮದ್ ಕುಂಞಿ, ವಸಂತ ಪೂಜಾರಿ, ಧನ್‌ರಾಜ್ ಉಪಸ್ಥಿತರಿದ್ದರು.
ಧರ್ಮದ ಹೆಸರಿನಲ್ಲಿ ವೈಷಮ್ಯ ದೊಡ್ಡ ದುರಂತ :
ಇಂದು ಧರ್ಮದ ಹೆಸರಿನಲ್ಲಿ ವೈಷಮ್ಯ ಸೃಷ್ಟಿಸಿ, ಸಮಾಜದ ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಇದೊಂದು ದೊಡ್ಡ ದುರಂತವಾಗಿದೆ. ಇದು ಆಗಬಾರದು. ಕರಾವಳಿಯಲ್ಲಿ ದಕ್ಷಿಣ ಕನ್ನಡದಿಂದ ಉತ್ತರ ಕನ್ನಡದವರೆಗೆ ಒಂದಲ್ಲ ಒಂದು ಸಮಸ್ಯೆಗಳನ್ನು ಸೃಷ್ಟಿಸಿ ಇದರ ರಾಜಕೀಯ ಪಡೆಯಲು ಎರಡು ಪ್ರಮುಖ ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಾ ಬಂದಿರುವುದನ್ನು ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಕಂಡಿದ್ದೇನೆ. ಇದರ ಜತೆಗೆ ಇದೀಗ ಈ ಭಾಗದ ಒಂದು ಸಣ್ಣ ರಾಜಕೀಯ ಪಕ್ಷವೂ ಸೇರಿಕೊಂಡಿದೆ ಎಂದು ದೇವೇಗೌಡ ಅವರು ಹಿಜಾಬ್ ವಿವಾದ ಕುರಿತಂತೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಭೇಟಿಯ ಸಂಕಲ್ಪ :
ನನಗೆ ಕೊರೊನಾ ಸೋಂಕು ಬಂದ ಸಂದರ್ಭದಲ್ಲಿ ಚೇತರಿಸಿಕೊಂಡ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ಸೇವೆ ಮಾಡುವುದಾಗಿ ಸಂಕಲ್ಪ ಮಾಡಿದ್ದೆ. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ದೇವರ ದರುಶನಕ್ಕೆ ಬಂದಿದ್ದೇನೆ. ಇದೇ ಸಂದರ್ಭದಲ್ಲಿ ಪಕ್ಷದ ಸಂಘಟನೆಗಾಗಿ ಜಿಲ್ಲಾ ಪ್ರವಾಸ
ಆರಂಭಿಸಿದ್ದು ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡುತ್ತಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಕುಕ್ಕೆ: ಗೌಡರಿಂದ ತುಲಾಭಾರ ಸೇವೆ :
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ದೇವೇಗೌಡ ಶನಿವಾರ ಭೇಟಿ ನೀಡಿದರು.
ಮೊದಲಿಗೆ ಕ್ಷೇತ್ರದ ಬಳಿ ಗಿಡ ನೆಟ್ಟು ನೀರೆರೆದ ಅವರು ಬಳಿಕ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಸುಬ್ರಹ್ಮಣ್ಯನ ದರ್ಶನ ಪಡೆದು ಮಹಾಪೂಜೆ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ ಅವರು ಮಾಜಿ ಪ್ರಧಾನಿಯನ್ನು ಬರಮಾಡಿಕೊಂಡರು. ಶುಕ್ರವಾರ ರಾತ್ರಿ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ದೇವೇಗೌಡ ದಂಪತಿ ಕ್ಷೇತ್ರದ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು.