Advertisement

ಒಂದೇ ವೇದಿಕೆಗೆ ಎಚ್‌ಡಿಡಿ-ಸಿದ್ದು!

06:00 AM Oct 20, 2018 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತದ್ವಿರುದ್ಧ ದಿಕ್ಕಿನಲ್ಲಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹದಿಮೂರು ವರ್ಷಗಳ ನಂತರ ಚುನಾವಣಾ ಪ್ರಚಾರದ ಒಂದೇ ವೇದಿಕೆಗೆ ಬರುತ್ತಾರಾ? ರಾಜಕೀಯ ಕಹಿತನ ಮರೆತು ಮತ್ತೆ ಹಳೇ ಗೆಳೆತನದೊಂದಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಗಳ ಪರ ಕೈ ಕೈ ಹಿಡಿದು ಪ್ರಚಾರ ಮಾಡುತ್ತಾರಾ?

Advertisement

ರಾಜ್ಯ ರಾಜಕಾರಣದ ದಿಗ್ಗಜರು ಎಂದೇ ಬಿಂಬಿತರಾಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಟ್ಟುಗೂಡಿವಿಕೆಗೆ ವೇದಿಕೆಯೊಂದು ಸಜ್ಜಾಗುತ್ತಿದೆ. ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆ ಉಪ ಚುನಾವಣೆಗೆ ಇಬ್ಬರೂ ನಾಯಕರು ಜತೆಗೂಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಸಹ ಜೆಡಿಎಸ್‌ ನಾಯಕರ ಜತೆಯಾಗಿ ಒಟ್ಟಾಗಿಯೇ ಪ್ರಚಾರ ಮಾಡುವಂತೆ ನಾಯಕರಿಗೆ ಫ‌ರ್ಮಾನು ಹೊರಡಿಸಿದೆ.

ಖುದ್ದು ಎಚ್‌.ಡಿ.ದೇವೇಗೌಡರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜತೆ ಜಂಟಿ ಪ್ರಚಾರ ಮಾಡುವ ಸಂಬಂಧ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಅವರು ಪ್ರತಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ರಾಜಕೀಯದ ಮಟ್ಟಿಗೆ ಇದು ಕುತೂಹಲ ಹಾಗೂ ಮಹತ್ವದ ಸಂಗತಿಯೂ ಆಗಿದೆ.ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಮಹಾಘಟಬಂಧನ್‌ ರಚನೆಯ ಪ್ರಯತ್ನದಲ್ಲಿರುವ ಕಾಂಗ್ರೆಸ್‌ಗಂತೂ ಉಪ ಚುನಾವಣೆಯೂ ಅಗ್ನಿಪರೀಕ್ಷೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‌ಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಹೀಗಾಗಿ, ಈವರೆಗೆ ವಿರುದ್ಧ ದಿಕ್ಕಿನಲ್ಲಿದ್ದ ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ವಿಶ್ವನಾಥ್‌, ಸಿ.ಎಂ.ಇಬ್ರಾಹಿಂ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್‌, ದಿನೇಶ್‌ಗುಂಡೂರಾವ್‌, ಶಾಮನೂರು ಶಿವಶಂಕರಪ್ಪ, ಈಶ್ವರ್‌ ಖಂಡ್ರೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಪ್ರಚಾರ ಮಾಡದಿದ್ದರೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದು ಎಂಬ ಆತಂಕವೂ ಇರುವುದರಿಂದ ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಕ್ಷೇತ್ರದ ಮಟ್ಟಿಗೆ ಜಂಟಿ ಪ್ರಚಾರ ಮಾಡಬಹುದು. ಶನಿವಾರ ಈ ಕುರಿತು ಅಂತಿಮ ರೂಪು-ರೇಷೆ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.

Advertisement

ಅದೇ ಕೊನೆಯಾಗಿತ್ತು!
ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿದ್ದ ಸಿದ್ದರಾಮಯ್ಯ, 2004ರ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡರ ಜತೆಗೂಡಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ 79, ಕಾಂಗ್ರೆಸ್‌ 65 ಹಾಗೂ ಜೆಡಿಎಸ್‌ 58 ಸ್ಥಾನ ಗಳಿಸಿತ್ತು. ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು.

ಆ ಸಂದರ್ಭದಲ್ಲಿ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಕೇಳಬೇಕಿತ್ತು ಎಂದು ಸಿದ್ದರಾಮಯ್ಯ ಮುನಿಸಿಕೊಂಡಿದ್ದರು. ಅಲ್ಲಿಂದ ದೇವೇಗೌಡರು ಹಾಗೂ ಸಿದ್ದರಾಮಯ್ಯನವರ ನಡುವೆ ಉಂಟಾದ ಅಸಮಾಧಾನ ಸಿದ್ದರಾಮಯ್ಯ ಜೆಡಿಎಸ್‌ನಿಂದ ನಿರ್ಗಮಿಸುವ ವಾತಾವರಣಕ್ಕೂ ಕಾರಣವಾಯಿತು. 2005 ಸೆಪ್ಟೆಂಬರ್‌ 22 ರಂದು ಸಿದ್ದರಾಮಯ್ಯ, ಜೆಡಿಎಸ್‌ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್‌ನಿಂದ ಆಮಾನತು ಸಹ ಮಾಡಲಾಯಿತು.

ಅನಿವಾರ್ಯತೆ, ಸಂದಿಗ್ಧತೆ
ಜೆಡಿಎಸ್‌ನಿಂದ ನಿರ್ಗಮಿಸಿದ ನಂತರ ಸಿದ್ದರಾಮಯ್ಯ ಆವರು ಕಾಂಗ್ರೆಸ್‌ ಸೇರ್ಪಡೆಯಾಗುವಲ್ಲಿ ಆಗ ಕಾಂಗ್ರೆಸ್‌ನಲ್ಲಿ ಎಚ್‌.ವಿಶ್ವನಾಥ್‌ ಹಿರಿತನ ಬಿಟ್ಟು ಸಹಕರಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ವಿರುದ್ಧವೇ ಸಿಡಿದು ಜೆಡಿಎಸ್‌ನತ್ತ ಹೆಜ್ಜೆ ಹಾಕಿ ಇದೀಗ ರಾಜ್ಯಾಧ್ಯಕ್ಷರೂ ಹೌದು. ಆದರೆ, ರಾಜಕೀಯದ ಸ್ಥಿತ್ಯಂತರದಲ್ಲಿ ಈಗ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಮಾತು ಸರ್ವಕಾಲಿಕ.

– ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next