ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜಾರಿಗೊಳಿಸಿದ್ದ ಡೆತ್ ವಾರಂಟ್ ಗೆ ತಡೆ ನೀಡಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದ್ದು, ಅಲ್ಲದೇ ಅಪರಾಧಿ ಮುಖೇಶ್ ಸಿಂಗ್ ಡೆತ್ ವಾರಂಟ್ ಹೊರಡಿಸಿರುವ ವಿಚಾರಣಾಧೀನ ಕೋರ್ಟ್ ಮೊರೆ ಹೋಗಲು ತಿಳಿಸಿದೆ.
ನಾಲ್ವರು ಅಪರಾಧಿಗಳನ್ನು ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ಪಟಿಯಾಲಾ ಹೌಸ್ ಕೋರ್ಟ್ ಜಾರಿಗೊಳಿಸಿರುವ ಡೆತ್ ವಾರಂಟ್ ನಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಯ ಮಾಹಿತಿಯೊಂದಿಗೆ ವಿಚಾರಣಾ ಕೋರ್ಟ್ ಮೆಟ್ಟಿಲೇರುವುದಾಗಿ ಮುಖೇಶ್ ಪರ ವಕೀಲರಾದ ರೆಬೆಕ್ಕಾ ಜಾನ್ ತಿಳಿಸಿದ್ದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದರು.
ಮುಖೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ ವಿಭಾಗೀಯ ಪೀಠದ ಜಸ್ಟೀಸ್ ಮನಮೋಹನ್ ಹಾಗೂ ಜಸ್ಟೀಸ್ ಸಂಗೀತಾ ಧೀಂಗ್ರಾ ಸೆಹಗಾಲ್ ವಿಚಾರಣೆ ನಡೆಸಿದ್ದರು ಎಂದು ವರದಿ ವಿವರಿಸಿದೆ.
ತಾನು ದಿಲ್ಲಿ ಗವರ್ನರ್ ಹಾಗೂ ರಾಷ್ಟ್ರಪತಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಬಾಕಿ ಇದ್ದಿರುವುದಾಗಿ ಮುಖೇಶ್ ದಿಲ್ಲಿ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದ. ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ ನಂತರ 14 ದಿನಗಳ ಕಾಲಾವಕಾಶ ನೀಡಿ ಗಲ್ಲಿಗೇರಿಸುವ ದಿನಾಂಕ ನಿಗದಿಪಡಿಸಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.