ಬೆಂಗಳೂರು: ನನ್ನ ಪತಿಯು ಅಮೆರಿಕದಲ್ಲಿ ಹೊಂದಿರುವ ಸಾಫ್ಟ್ವೇರ್ ಕಂಪನಿಯ ಬ್ಯಾಂಕ್ ಖಾತೆ, ಆದಾಯ ತೆರಿಗೆ ಪಾವತಿ ಮತ್ತು ಹಣಕಾಸು ವಹಿವಾಟಿನ ದಾಖಲೆಗಳನ್ನು ಒದಗಿಸುವಂತೆ ವಿದೇಶಾಂಗ ಇಲಾಖೆಗೆ ನಿರ್ದೇಶಿಸಬೇಕು ಎಂದು ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ದಾವೆ ಹೂಡಿರುವ ಮಹಿಳೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆಲೋಕ್ ಆರಾಧೆ, ಈ ಕುರಿತು ಕೌಟುಂಬಿಕ ನ್ಯಾಯಾಲಯದಲ್ಲೇ ಪರಿಹಾರ ಕಂಡುಕೊಳ್ಳಿ’ ಎಂದು ಹೇಳಿತು.
2001ರಲ್ಲಿ ಕಾನ್ಪುರದಲ್ಲಿ ಮದುವೆಯಾದ ದಂಪತಿ ಗಂಡು ಮಗುವಿನ ಸಮೇತ 2007ರಲ್ಲಿ ಅಮೆರಿಕಕ್ಕೆ ತೆರಳಿದರು. ಅಲ್ಲಿ ತನ್ನ ಪತಿ ನನ್ನ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಮಗನೊಂದಿಗೆ ಭಾರತಕ್ಕೆ ವಾಪಸ್ ಬಂದು ಬೆಂಗಳೂರಿನಲ್ಲಿ ನೆಲೆಸಿದರು. ಇದೇ ವೇಳೆ ಕೌಟುಂಬಿಕ ನ್ಯಾಯಾಲಯದಲಿ ದಾವೆ ಹೂಡಿದರು.
ಈ ಮಧ್ಯೆ, ತನ್ನ ಪತಿ ಅಮೆರಿಕದಲ್ಲಿ ಸಾಫ್ಟ್ವೇರ್ ಕಂಪೆನಿ ಹೊಂದಿದ್ದು, ಆ ಕಂಪೆನಿಯ ಆದಾಯ, ಆರ್ಥಿಕ ವಹಿವಾಟಿನ ವಿವರಗಳನ್ನು ನನಗೆ ಬೇಕು. ಅದನ್ನು ತರಿಸಿಕೊಳ್ಳಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಕೋರಿ 2018ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿ, ಕ್ರಿಮಿನಲ್ ಪ್ರಕರಣಗಳಲ್ಲಿ ಮಾತ್ರವೇ ಇಂತಹ ದಾಖಲೆಗಳ ವಿನಿಮಯ ಸಾಧ್ಯ. ವೈಯಕ್ತಿಕ ಮತ್ತು ಖಾಸಗಿ ಪ್ರಕರಣಗಳಲ್ಲಿ ಈ ರೀತಿ ಹೈಕೋರ್ಟ್‌ನಿಂದ ನಿರ್ದೇಶನ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಇದೇ ವೇಳೆ ಸಿಬಿಐ ಪರ ವಕೀಲರು ವಾದ ಮಂಡಿಸಿ, ಇದೊಂದು ವೈಯಕ್ತಿಕ ಮತ್ತು ಕೌಟುಂಬಿಕ ವ್ಯಾಜ್ಯ. ಇಂತಹ ಪ್ರಕರಣಗಳಲ್ಲಿ ಸಿಬಿಐಅನ್ನು ಬಳಸಿಕೊಳ್ಳುವುದು ದುರುಪಯೋಗವಾಗುತ್ತದೆ. ಈ ರೀತಿಯ ದಾಖಲೆಗಳನ್ನು ತರಿಸಿಕೊಳ್ಳಲು ಅವಕಾಶ ನೀಡಬಾರದು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಈ ವಾದ ಮಾನ್ಯ ಮಾಡಿದ ನ್ಯಾಯಪೀಠ, ಕೌಟುಂಬಕ ನ್ಯಾಯಾಲಯದಲ್ಲೇ ಪರಿಹಾರ ಪಡೆಯಿರಿ’ ಎಂದು ಅರ್ಜಿದಾರರಿಗೆ ಸೂಚಿಸಿತು.