Advertisement

ಆನಂದ್‌ ಸಿಂಗ್‌-ಕಂಪ್ಲಿ ಗಣೇಶ್‌ ಹಾಜರಿಗೆ ಹೈಕೋರ್ಟ್‌ ಸೂಚನೆ

11:05 PM Jan 21, 2020 | Lakshmi GovindaRaj |

ಬೆಂಗಳೂರು: ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಪರಸ್ಪರ ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇಬ್ಬರು ಶಾಸಕರು ಮುಂದಾಗಿರುವ ಹಿನ್ನೆಲೆಯಲ್ಲಿ ಶಾಸಕರಾದ ಆನಂದ್‌ ಸಿಂಗ್‌ ಮತ್ತು ಜೆ.ಎನ್‌.ಗಣೇಶ್‌ಗೆ ಖುದ್ದು ಹಾಜರಾಗಬೇಕೆಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಪ್ರಕರಣ ರದ್ದು ಕೋರಿ ಗಣೇಶ್‌ ಸಲ್ಲಿಸಿದ್ದ ಅರ್ಜಿ ನ್ಯಾ. ಬಿ.ಎ.ಪಾಟೀಲ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು. ಆಗ ಆನಂದ್‌ ಸಿಂಗ್‌ ಪರ ವಕೀಲರು, ಪ್ರಮಾಣಪತ್ರ ಸಲ್ಲಿಸಿದರು. ಅಲ್ಲದೆ, ಮಾತುಕತೆ ಮೂಲಕ ಜಗಳ ಪರಿಹರಿಸಿಕೊಳ್ಳಲಾಗುವುದು, ದೂರು ಮುಂದುವರಿಸಲು ಬಯಸುವುದಿಲ್ಲ ಎಂದು ದೂರುದಾರರು ಅಫಿಡವಿಟ್‌ನಲ್ಲಿ ಹೇಳಿದ್ದಾರೆ ಎಂದರು.

ಆಗ ನ್ಯಾಯಪೀಠ, ದೂರುದಾರರು ಹಾಗೂ ಪ್ರತಿವಾದಿ ಇಬ್ಬರೂ ಹಾಜರಿದ್ದಾರೆಯೇ ಎಂದು ಕೇಳಿತು. ಗಣೇಶ್‌ ಪರ ವಕೀಲರು, ಇಲ್ಲ, ಆದರೆ ದೂರುದಾರರೇ ಅಫಿಡವಿಟ್‌ ಸಲ್ಲಿಸಿದ್ದಾರೆ ಎಂದರು. ಆದನ್ನು ಒಪ್ಪದ ನ್ಯಾಯಪೀಠ, ಅಫಿಡವಿಟ್‌ ಒಪ್ಪಲು ಸಾಧ್ಯವಿಲ್ಲ, ಇಬ್ಬರೂ ಖುದ್ದು ಹಾಜರಾಗಲೇಬೇಕು, ಅಫಿಡವಿಟ್‌ಗೆ ಅವರೇ ಸಹಿ ಹಾಕಿದ್ದಾರೆನ್ನುವುದಕ್ಕೆ ಖಾತ್ರಿ ಏನು ಎಂದು ಕೇಳಿದರು.

ಗಣೇಶ್‌ ಪರ ವಕೀಲ ಶ್ಯಾಮ್‌ ಸುಂದರ್‌, ಶಾಸಕರೇ ಖುದ್ದು ಸಹಿ ಹಾಕಿದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಈ ಕಾಲದಲ್ಲಿ ಏನು ಬೇಕಾದರೂ ಆಗಬಹುದು? ಯಾವುದನ್ನೂ ನಂಬಲು ಸಾಧ್ಯವಿಲ್ಲ , ಹಾಗಾಗಿ ಸೋಮವಾರವೇ ನಾನು ಇಬ್ಬರನ್ನೂ ಖುದ್ದು ಹಾಜರುಪಡಿಸಬೇಕು ಎಂದು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತಿದ್ದೇನೆ ಮತ್ತು ಜಂಟಿ ಮೆಮೋ ಸಲ್ಲಿಸಬೇಕು, ಆಗ ಮಾತ್ರ ರಾಜಿಗೆ ಒಪ್ಪಿಗೆ ನೀಡಲಾಗುವುದು’ಎಂದು ಹೇಳಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next