ಹೊಸದಿಲ್ಲಿ: ಖ್ಯಾತ ಕುಸ್ತಿ ಪಟುಗಳಾದ ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯ ಅವರನ್ನು ನೇರವಾಗಿ ಏಷ್ಯನ್ ಗೇಮ್ಸ್‌ಗೆ ಆಯ್ಕೆ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹಲವಾರು ಹಿರಿಯ ಕುಸ್ತಿ ಪಟುಗಳು, ಅವರ ಪೋಷಕರು ಹಾಗೂ ತರಬೇತುದಾರರು ಹೋರಾಟ ಮುಂದುವರಿಸಿದ್ದಾರೆ. ಗುರುವಾರ ಇವರ ಹೋರಾಟ ಹರಿಯಾಣದಿಂದ ದಿಲ್ಲಿಗೆ ತಲುಪಿದ್ದು, ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೊದಲು ನಿರ್ಧಾರವಾಗಿದ್ದಂತೆ, ಪೋಗಟ್, ಪೂನಿಯ ಏಷ್ಯನ್ ಗೇಮ್ಸ್‌ನ ಅರ್ಹತಾ ಪಂದ್ಯಗಳಲ್ಲಿ ಆಡಬೇಕಾಗಿತ್ತು. ಆದಕೆ ಆಯ್ಕೆ ಸಮಿತಿ ಇವರಿಬ್ಬರನ್ನು ನೇರವಾಗಿ ಆಯ್ಕೆ ಮಾಡಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಸುಮಾರು 150ಕ್ಕೂ ಹೆಚ್ಚು ಮಂದಿ ದಿಲ್ಲಿಗೆ ಬಂದಿದ್ದು, ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷ ಭೂಪೇಂದರ್ ಸಿಂಗ್ ಬಾಜ್ವಾ ಅವರ ಭೇಟಿಗಾಗಿ ಆಗ್ರಹಿಸಿದರು. ಆದರೆ ಇವರಿಬ್ಬರೂ ಕಚೇರಿಯಲ್ಲಿ ಇರಲಿಲ್ಲ.
ಪ್ರತಿಭಟನೆ ವೇಳೆ ಮಾತನಾಡಿದ ಅಂತಿಮ್ ಪಂಘಲ್ ಅವರ ಕೋಚ್ ವಿಕಾಸ್ ಭಾರಧ್ವಾಜ್, ಬಜರಂಗ್ ಮತ್ತು ವಿನೇಶ್‌ಗೆ ವಿನಾಯಿತಿ ಕೊಟ್ಟದ್ದು ಸರಿಯಲ್ಲ ಎಂದರು. 20 ವರ್ಷದೊಳಗಿನ ವಿಶ್ವ ಚಾಂಪಿಯನ್ ಪಂಘಲ್ ಮತ್ತು 23 ವರ್ಷದೊಳಗಿನ ಏಷ್ಯಾ ಚಾಂಪಿಯನ್ ಸುಜೀತ್ ಕಲ್ಕಲ್ ಅವರು ಆಯ್ಕೆ ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವಕಾಶ ಸಿಕ್ಕರೆ ಬಜರಂಗ್ ಮತ್ತು ವಿನೇಶ್ ಅವರನ್ನು ಸೋಲಿಸುವುದಾಗಿ ಹೇಳಿದರು. ಮಂಗಳವಾರವಷ್ಟೇ ಅರ್ಹತಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಬಾಜ್ವಾ, ಪುರುಷರ 65ಕೆಜಿ ಫ್ರೀ ಸ್ಟೈಲ್ ಮತ್ತು ಮಹಿಳೆಯರ 53 ಕೆಜಿ ವೇಟ್ ಕ್ಲಾಸ್ ವಿಭಾಗಕ್ಕೆ ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದಿದ್ದರು. ಉಳಿದ ವಿಭಾಗಗಳಿಗೆ ಆಯ್ಕೆ ಸುತ್ತು ನಡೆಯಲಿದೆ ಎಂಬ ಮಾಹಿತಿ ನೀಡಿದ್ದರು.
ಅಂದ ಹಾಗೆ, ಬಜರಂಗ್ ಪೂನಿಯ ಮತ್ತು ವಿನೇಶ್ ಪೊಗಟ್ ಇವರಿಬ್ಬರೂ, ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬೃಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದವರಲ್ಲಿ ಪ್ರಮುಖರು.