ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನ ರೇಸ್ ಕುದುರೆ ಕ್ವೀನ್ ಲತೀಫಾಗೆ ಉದ್ದೀಪನಾ ಮದ್ದು ನೀಡಿದ ಆರೋಪ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಕುರಿತು ಟರ್ಫ್ ಕ್ಲಬ್‌ನ ಸಿಇಒ ನಿರ್ಮಲ್ ಪ್ರಸಾದ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದ ತನಿಖೆಗೆ ತಡೆ ನೀಡಲು ನಿರಾಕರಿಸಿತು.
ಅಲ್ಲದೆ ಪ್ರತಿವಾದಿಗಳಾದ ಹೈಗ್ರೌಂಡ್ಸ್ ಪೊಲೀಸ್ ಠಾಣಾಧಿಕಾರಿ ಹಾಗೂ ಎಚ್. ಎಸ್ ಚಂದ್ರೇಗೌಡ ಅವರಿಗೆ ನೋಟಿಸ್ ಜಾರಿಗೊಳಿದ ನ್ಯಾಯಪೀಠ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಶನ್ ಪರ ವಕೀಲರಿಗೆ ತಾಕೀತು ಮಾಡಿತು. ಜೊತೆಗೆ ಪ್ರಕರಣ ಸಂಬಂಧ ಇದುವರೆಗೂ ನಡೆಸಿರುವ ತನಿಖಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಮೌಖೀಕ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣ ಏನು?: ಕಳೆದ ವರ್ಷ ಮಾರ್ಚ್ 5ರಂದು ನಡೆದ ಕುದುರೆ ರೇಸ್‌ನಲ್ಲಿ ಪಾಲ್ಗೊಂಡಿದ್ದ ಕ್ವೀನ್ ಲತೀಫಾಗೆ ಉದ್ದೀಪನಾ ಮದ್ದು ನೀಡಲಾಗಿತ್ತು ಎಂದು ಆರೋಪಿಸಿ ರೇಸ್‌ಕುದುರೆ ಮಾಲೀಕರ ಸಂಘದ ಸದಸ್ಯ ಎಚ್.ಎಸ್ ಚಂದ್ರೇಗೌಡ ಏ. 19,2017ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕ್ವೀನ್ ಲತೀಫಾ ಮಾಲೀಕರು ಆಗಿರುವ ಚಂದ್ರೇಗೌಡ,
ದೂರಿನಲ್ಲಿ ಲತೀಫಾಗೆ ಉದ್ದೀಪನ ಮದ್ದು ನೀಡಲಾಗಿದ್ದು, ಅದರ ಮೂತ್ರ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಉಲ್ಲೇಖೀಸಿದ್ದರು. ಈ ಸಂಬಂಧ ಆರಂಭದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು, ಬಳಿಕ ರಾಜ್ಯಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಈ ನಿಟ್ಟಿನಲ್ಲಿ ಸಿಐಡಿ ಅಧಿಕಾರಿಗಳು ಪ್ರಕರಣ ಸಂಬಂಧ ಟರ್ಫ್ ಕ್ಲಬ್ ಸಿಬ್ಬಂದಿ, ಲತೀಫಾ ಜಾಕಿ, ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದ್ದು ತನಿಖೆ ಮುಂದುವರಿಸಿದ್ದಾರೆ.