ಹೊಸದಿಲ್ಲಿ : ಭಾರತ ಸರಕಾರ ಟಂಕಿಸಿರುವ, ಧಾರ್ಮಿಕ ಚಿಹ್ನೆಗಳಿರುವ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಬೇಕು ಎಂದು ಕೋರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ. ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆ ಇದ್ದ ಮಾತ್ರಕ್ಕೆ ಅದರಿಂದ ದೇಶದ ಜಾತ್ಯತೀತ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ದಿಲ್ಲಿಯ ನಿವಾಸಿಗಳಾದ ನಫೀಸ್ ಕಾಜಿ ಮತ್ತು ಅಬು ಸಯೀದ್ ಎಂಬವರು ಈ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸಿದ್ದರು.
2010 ಮತ್ತು 2013ರಲ್ಲಿ ಭಾರತ ಸರಕಾರ ಟಂಕಿಸಿದ್ದ ಬೃಹದೇಶ್ವರ ದೇವಸ್ಥಾನ ಮತ್ತು ಮಾತಾ ವೈಷ್ಣೋದೇವಿ ಚಿತ್ರ ಇರುವ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ನಿರ್ದೇಶ ನೀಡಬೇಕೆಂದು ಈ ಪಿಐಎಲ್‌ನಲ್ಲಿ ಕೋರಲಾಗಿತ್ತು.
ಈ ಅರ್ಜಿಯನ್ನು ವಜಾ ಮಾಡಿದ ದಿಲ್ಲಿ ಹೈಕೋರ್ಟಿನ ಪ್ರಭಾರ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ಜಸ್ಟಿಸ್ ಸಿ ಹರಿ ಶಂಕರ ಅವರು, “ಧಾರ್ಮಿಕ ಚಿಹ್ನೆ ಇರುವ ನಾಣ್ಯಗಳಿಂದ ದೇಶದ ಜಾತ್ಯತೀತ ಸ್ವರೂಪಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ; ಯಾವುದೇ ಮಹತ್ವದ ಘಟನೆಗೆ ಸಂಬಂಧಿಸಿದಂತೆ ಸಂಸ್ಮರಣ ನಾಣ್ಯಗಳನ್ನು ಜಾರಿ ಮಾಡಬಾರದೆಂಬ ನಿಷೇಧವನ್ನು ನಾವು ಸರಕಾರದ ಮೇಲೆ ಹೇರಲಾರೆವು’ ಎಂದು ತಮ್ಮ ತೀರ್ಪಿನಲ್ಲಿ ಹೇಳಿದರು.
”ಧಾರ್ಮಿಕ ಚಿಹ್ನೆಯ ನಾಣ್ಯ ಜನರ ಧರ್ಮಾನುಸರಣೆಯ ಮೇಲೆ ಪ್ರಭಾವ ಬೀರುತ್ತದೆ” ಎಂಬ ತಮ್ಮ ವಾದವನ್ನು ಸಮರ್ಥಿಸುವುದು ಅರ್ಜಿದಾರರಿಗೆ ಸಾಧ್ಯವಾಗಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿತು. ಧಾರ್ಮಿಕ ಚಿಹ್ನೆಯ ನಾಣ್ಯಗಳಿಂದ ದೇಶದ ಜಾತ್ಯತೀತ ಸ್ವರೂಪ ಹೇಗೆ ನಾಶವಾಗುತ್ತದೆ ಎಂದು ಹೈಕೋರ್ಟ್ ಅರ್ಜಿದಾರರಿಗೆ ಪ್ರಶ್ನಿಸಿತ್ತು.
2010ರಲ್ಲಿ ಭಾರತ ಸರಕಾರ ತಂಜಾವೂರಿನ ಬೃಹದೇಶ್ವರ ದೇವಸ್ಥಾನಕ್ಕೆ 1,000 ವರ್ಷ ತುಂಬಿದುದರ ಸ್ಮರಣೆಗಾಗಿ ಅದರ ಚಿತ್ರವಿರುವ ಐದು ರೂಪಾಯಿ ನಾಣ್ಯವನ್ನು ಹೊರ ತಂದಿತ್ತು. ಹಾಗೆಯೇ 2013ರಲ್ಲಿ ಶ್ರೀ ಮಾತಾ ವೈಷ್ಣೋದೇವಿ ದೇವಸ್ಥಾನದ ಚಿತ್ರವಿರುವ ನಾಣ್ಯವನ್ನು ಹೊರತಂದಿತ್ತು.