ಗಜೇಂದ್ರಗಡ: ಭಾತೃತ್ವದ ಮಧುರ ಬಾಂಧವ್ಯ ಗಟ್ಟಿಗೊಳಿಸುವ ಅಪರೂಪದ ತಾಣಗಳಲ್ಲೊಂದಾದ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್ ಸೈಯ್ಯದ್ ಶಹಾ ಮೆಹಬೂಬ ಸುಬ್ಹಾನಿ ಅವರ ಉರೂಸ್ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಗಜೇಂದ್ರಗಡ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅಲ್ಲದೇ, ಭಾತೃತ್ವದ ಕೇಂದ್ರ ಸ್ಥಳವಾಗಿದೆ. ಈ ಪುಣ್ಯಭೂಮಿಯಲ್ಲಿ ಆಡಳಿತ ನಡೆಸಿದ ಮರಾಠ ಸಾಮಂತರು ಸರ್ವ ಧರ್ಮೀಯರೂ ಒಟ್ಟಾಗಿ, ಸಮನಾಗಿ ಬದುಕು ನಡೆಸಬೇಕೆಂಬ ಉದ್ದೇಶದಿಂದ 18 ಮಠ, 18 ಮಸೀದಿ, 18 ಬಾವಿಗಳನ್ನು ನಿರ್ಮಿಸಿದ್ದರು. ಅಂತೆಯೇ, ಬೆಟ್ಟದ ಮೇಲ್ಭಾಗದಲ್ಲೂ ಹಿಂದೂ ಮತ್ತು ಮುಸ್ಲಿಂ ದೇವಾಲಯ ನಿರ್ಮಾಣ ಮಾಡುವ ಮೂಲಕ ಭಾವೈಕ್ಯತೆಗೆ ಮುನ್ನುಡಿ ಬರೆದಿದ್ದಾರೆ.
ಉರೂಸ್ ಎಂಬುದು ಸಾಧುಗಳ ಪುಣ್ಯತಿಥಿ. ಹೀಗಾಗಿ, ಜಾತ್ರೆಯಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗು ವುದು. ಪ್ರಸ್ತುತ ದಿನಗಳಲ್ಲಿ ಜಾತೀಯತೆಯ ವಾದ ಪ್ರತಿವಾದಗಳ ಮಧ್ಯೆಯೇ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿ ನಡೆಯುವ ಮೆಹಬೂಬ ಸುಬ್ಹಾನಿ ಉರೂಸ್ ವಿಶೇಷತೆಗಳಿಗೆ ಕಾರಣವಾಗಿದೆ. ಇಲ್ಲಿ ಹಿಂದೂ-ಮುಸ್ಲಿಮರು ಭೇಟಿ ನೀಡಿ ಶರಣರ ಸಮಾಧಿ ಸ್ಥಳಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ.
ಹಿಂದೂ-ಮುಸ್ಲಿಂ ಭೇದಭಾವವಿಲ್ಲದೆ ಸರ್ವ ಧರ್ಮೀಯರು ಶ್ರದ್ಧಾ-ಭಕ್ತಿಯಿಂದ ಪೂಜಿಸಿ ಆರಾ ಧಿಸುವುದರ ಜೊತೆ ಭಾವೈಕ್ಯ ತೆಗೆ ಹೆಸರಾದ ಮೆಹಬೂಬ ಸುಬ್ಹಾನಿ ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮಾ ವಾಸ್ಯೆಯಂದು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ, ಪೂಜೆ ಸಲ್ಲಿಸುತ್ತಾರೆ. ಸೂಫಿ ಪಂಥದ ಹಜರತ್ ಸೈಯ್ಯದ ಶಹಾ ಮೆಹಬೂಬ ಸುಬ್ಹಾನಿ ಅವರು ಹಲವು ದಶಕಗಳ ಹಿಂದೆ ಗಜೇಂದ್ರಗಡಕ್ಕೆ ಭೇಟಿ ನೀಡಿದ್ದರು. ಧರ್ಮ ಪ್ರಚಾರಕ್ಕಿಂತ ಸೌಹಾರ್ದತೆ, ಸಹಬಾಳ್ವೆಗೆ ಒತ್ತು ನೀಡಿ, ಸತ್ಯ ನಿಷ್ಠೆಗೆ ಹೆಸರಾಗಿ ಸಮಾನತೆ ಸಂದೇಶ ಸಾರಿದ್ದಾರೆ ಎಂಬುದು ಪ್ರತೀತಿ.
ಹಜರತ್ ಸೈಯ್ಯದ್ ಶಹಾ ಮೆಹಬೂಬ ಸುಬ್ಹಾನಿ ಅವರು ಈ ಭಾಗದ ಹಳ್ಳಿಗಳಲ್ಲಿ ಭಾವೈಕ್ಯತೆಯ ಸಂದೇಶ ಪಸರಿಸಿದ ಕೀರ್ತಿವಂತರಾದ್ದಾಗಿದೆ. ನಂತರ ಅವರು ಗಜೇಂದ್ರಗಡ ಬೆಟ್ಟದ ಮೇಲೆ ನೆಲೆ ನಿಂತರು. ಅವರ ಕಾಲಾ ನಂತರ ಅಲ್ಲಿಯೇ ಅವರ ಗದ್ದುಗೆ ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸರ್ವ ಸಮುದಾಯದ ಜನರು ಉರೂಸ್ ದಿನದಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಪ್ರತಿ ವರ್ಷ ಹಜರತ್ ಮೆಹಬೂಬ ಸುಬ್ಹಾನಿ ಅವರ ಹೆಸರಿನಲ್ಲಿ ಉರೂಸ್ ಜರುಗುತ್ತದೆ. ಆದರೆ, ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೇ ಎಲ್ಲ ಧರ್ಮೀಯರು ಒಟ್ಟುಗೂಡಿ ಹತ್ತಾರು ದಶಕಗಳಿಂದ ಉರೂಸ್ ಆಚರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನ, ಯಾವ ಜಾತಿ ಭೇದಗಳಿಲ್ಲದೇ ಸಂಬಂಧಿ ಗಳಂತೆ ಜೀವನ ನಡೆಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಗಜೇಂದ್ರಗಡ ಬೆಟ್ಟದ ಮೇಲಿರುವ ಮೆಹಬೂಬ ಸುಬ್ಹಾನಿ ದರ್ಗಾ.
ಉರೂಸ್: ನ.7ರಂದು ಬೆಟ್ಟದ ಮೇಲಿನ ಮೆಹಬೂಬ ಸುಬ್ಹಾನಿ ಅವರ ಭಾವೈಕ್ಯತಾ ಉರೂಸ್, ನ.8 ರಂದು ಜಿಯಾರತ್ ನಡೆಯಲಿದೆ.
ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಗಜೇಂದ್ರಗಡದಲ್ಲಿ ಎಲ್ಲ ಧರ್ಮೀಯರು ಭಾವ್ಯಕ್ಯತೆಯಿಂದ ಜಾತ್ರೆ, ಉರೂಸ್ ಆಚರಿಸುತ್ತಾರೆ. ಅಂತೆಯೇ, ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್ ಮೆಹಬೂಬ ಸುಬ್ಹಾನಿ ಅವರ ಉರೂಸ್ ಸೌಹಾರ್ದತೆಯ ಪ್ರತೀಕವಾಗಿದೆ.
-ರಾಜು ಸಾಂಗ್ಲಿಕಾರ, ಪುರಸಭೆ ಸದಸ್ಯ
ಡಿ.ಜಿ. ಮೋಮಿನ್