ಮೆಲ್ಬರ್ನ್: ಆರ್‌ಸಿಬಿಯ ಪ್ರಧಾನ ವೇಗಿ ಜೋಶ್ ಹೇಝಲ್‌ವುಡ್ ಹಿಮ್ಮಡಿ ನೋವಿನಿಂದಾಗಿ ಮೊದಲ 7 ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಜತೆಗೆ ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ ಸೇವೆಯೂ ಮೊದಲ ಪಂದ್ಯಕ್ಕೆ ಸಿಗುತ್ತಿಲ್ಲ. ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿರುವ ಬೆಂಗಳೂರು ತಂಡಕ್ಕೆ ಇದರಿಂದ ಭಾರೀ ಹಿನ್ನಡೆಯಾಗಿದೆ.
ಜೋಶ್ ಹೇಝಲ್‌ವುಡ್ ಎ. 14ರ ಹೊತ್ತಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಅನಂತರ ಒಂದು ವಾರ “ಮ್ಯಾಚ್ ಫಿಟ್”ಗೋಸ್ಕರ ಕಾಯಬೇಕಾಗುತ್ತದೆ. ಹೀಗಾಗಿ ಅವರು ಕನಿಷ್ಠ 7 ಪಂದ್ಯಗಳಿಂದ ಬೇರ್ಪಡು ವುದು ಅನಿವಾರ್ಯ ಎಂಬುದೊಂದು ಲೆಕ್ಕಾಚಾರ.
“ಮುಂದಿನ ಎರಡು ವಾರಗಳ ಕಾಲ ಹಿಮ್ಮಡಿ ಸ್ಥಿತಿ ಹೇಗಿದ್ದೀತು ಎಂಬುದು ಮುಖ್ಯ. ಹೀಗಾಗಿ ಎ. 14ರ ಹೊತ್ತಿಗೆ ನಾನು ಹೊರಡುತ್ತೇನೆ. ಭಾರತಕ್ಕೆ ಕಾಲಿಟ್ಟೊಡನೆಯೇ ನನಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. ಇದಕ್ಕೆ ಇನ್ನೂ ಒಂದು ವಾರ ಬೇಕಾಗಬಹುದು’ ಎಂಬುದಾಗಿ ಹೇಝಲ್‌ವುಡ್ “ದಿ ಏಜ್”ಪತ್ರಿಕೆಗೆ ತಿಳಿಸಿದ್ದಾರೆ.
ಭಾರತದಲ್ಲಿ ಆಡಲಾದ ಕಳೆದ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಿಂದಲೂ ಹೇಝಲ್‌ವುಡ್ ಹೊರಗುಳಿದಿದ್ದರು. ಮುಂದಿನ ಆ್ಯಶಸ್‌ಗೆ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಸಜ್ಜಾಗು ವುದು ಅವರ ಯೋಜನೆ.
ಮ್ಯಾಕ್ಸ್‌ವೆಲ್ ಗೈರು
ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ”ನಲ್ಲಿ ಆಡಲಿದೆ. ಆಸ್ಟ್ರೇಲಿಯದ ಮತ್ತೋರ್ವ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಆಡುವುದು ಅನುಮಾನ. ಹಾಗೆಯೇ ಶ್ರೀಲಂಕಾದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವನಿಂದು ಹಸರಂಗ ಕೂಡ ಮೊದಲ ಪಂದ್ಯಕ್ಕೆ ಲಭ್ಯವಾಗುತ್ತಿಲ್ಲ.