Advertisement

ಹೆಝಲ್‌ ದೇಹ ಸ್ವದೇಶಕ್ಕೆ: ಕೇಂದ್ರ ಸರಕಾರದ ಯತ್ನ

09:34 AM Jul 29, 2018 | Team Udayavani |

ಶಿರ್ವ: ಸೌದಿ ಅರೇಬಿಯಾದಲ್ಲಿ ಮೃತರಾದ ಕುತ್ಯಾರಿನ ನರ್ಸ್‌ ಹೆಝಲ್‌ ಮೃತದೇಹವನ್ನು ಶೀಘ್ರ ಹುಟ್ಟೂರಿಗೆ ತರಿಸಲು ಕೇಂದ್ರ ಸರಕಾರ ರಾಜತಾಂತ್ರಿಕ ಯತ್ನ ಆರಂಭಿಸಿದೆ. ಇತ್ತ ರಾಜ್ಯ ಎನ್‌ಆರ್‌ಐ ಫೋರಂ ಕೂಡ ತನ್ನದೇ ಯತ್ನಗಳನ್ನು ಆರಂಭಿಸಿದೆ. 
ಅನಂತ್‌, ಸುಷ್ಮಾಗೆ ಮನವಿ ಹೆಝಲ್‌ ಕುಟುಂಬಿಕರು ಈಗಾಗಲೇ ಬಿಜೆಪಿಯ ನವೀನ್‌ ಶೆಟ್ಟಿಯವರ ಮೂಲಕ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಉಡುಪಿ ಸಂಸದರ ಕಚೇರಿಯಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೂ ಮಾಹಿತಿ ರವಾನಿಸಲಾಗಿದೆ. ಏತನ್ಮಧ್ಯೆ ಜಿಲ್ಲಾ ಬಿಜೆಪಿ ಪ್ರಮುಖರೂ ದಿಲ್ಲಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಅವರ ಗಮನಕ್ಕೆ ತಂದಿದ್ದು ಸುಷ್ಮಾ ಸ್ವರಾಜ್‌ ಅವರನ್ನು ಭೇಟಿ ಮಾಡಿ ಸೌದಿ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ. ಸೌದಿಯಲ್ಲಿ ವಾರಾಂತ್ಯ ರಜೆ ಇರುವುದರಿಂದ ಪ್ರತಿಕ್ರಿಯೆ ಬರಬೇಕಿದೆ.  

Advertisement

ಮಾನವ ಹಕ್ಕು ಮಾಹಿತಿ…
ಉಡುಪಿ ಜಿಲ್ಲಾಧಿಕಾರಿಗಳು ಮಾನವ ಹಕ್ಕು ಹೋರಾಟಗಾರರಾದ ರವೀಂದ್ರನಾಥ ಶ್ಯಾನುಭೋಗ್‌ ಅವರೊಂದಿಗೆ ಪ್ರಕರಣದ ಬಗ್ಗೆ ಚರ್ಚಿಸಿ ಮಾಹಿತಿ ಬಯಸಿದ್ದಾರೆ. ಶಿರ್ವ ಆರೋಗ್ಯ ಮಾತೆ ಚರ್ಚಿನ ಧರ್ಮಗುರು ರೆ|ಫಾ| ಡೆನ್ನಿಸ್‌ ಡೇಸಾ ಅವರೂ ಹೆಝಲ್‌ ಮನೆಗೆ ತೆರಳಿ ಮಾನವ ಹಕ್ಕು ಹೋರಾಟಗಾರರಿಗೆ ಮಾಹಿತಿ ನೀಡಿದ್ದಾರೆ.

ಸಿಎಂ ಸ್ಪಂದನೆ 
ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಘಟನೆಯನ್ನು ಸಿಎಂ ಕುಮಾರಸ್ವಾಮಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಪಂದಿಸಿದ ಅವರು ಕೇಂದ್ರ ಸರಕಾರ, ಎನ್‌ಆರ್‌ಐ ಫೋರಂನ ಅಧಿಕೃತರೊಂದಿಗೆ ವ್ಯವಹರಿಸಿದ್ದಾರೆ ಎಂದು ಐವನ್‌ ಉದಯವಾಣಿಗೆ ತಿಳಿಸಿದ್ದಾರೆ.

ನೆರವಿಗೆ ಬಂದ ಎನ್‌ಆರ್‌ಐ ಫೋರಂ
ಕರ್ನಾಟಕ ಎನ್‌ಆರ್‌ಐ ಫೋರಂ ನರ್ಸ್‌ ಶವ ರವಾನೆ ಪ್ರಕ್ರಿಯೆಯಲ್ಲಿ ನೆರವಿನ ಹಸ್ತ ಚಾಚಿದೆ. ಸೌದಿ ರಾಯಭಾರ ಕಚೇರಿಗೆ ಪತ್ರ ಬರೆದಿರುವ ಫೋರಂನ ಸದಸ್ಯ ಕಾರ್ಯದರ್ಶಿ ಡಾ| ಕೆ. ಮುರಳೀಧರ ಅವರು ಶೀಘ್ರ ಕ್ರಮಕ್ಕೆ ಕೋರಿದ್ದಾರೆ. ಜತೆಗೆ ಸಂತ್ರಸ್ತ ಕುಟುಂಬಕ್ಕೆ 50000 ರೂ. ಪರಿಹಾರ ಧನವನ್ನು ಫೋರಂ ಮಂಜೂರು ಮಾಡಿದೆ.

ಮುಚ್ಚಿಹೋಗದಿರಲಿ ನಿಗೂಢ ಸಾವು
ವಿದೇಶಿ ನೆಲದಲ್ಲಿ  ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು ಆತ್ಮಹತ್ಯೆಯ ತಲೆಬರೆಹ ನೀಡಿ ಮುಚ್ಚಿಹಾಕುವ ಬಗ್ಗೆ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ. ವಿದೇಶಿ ಸರಕಾರಗಳು ತಮ್ಮ ಘನತೆಗೆ ಕುಂದಾಗುವುದನ್ನು ತಪ್ಪಿಸಲು  ಪ್ರಕರಣ ತಿರುಚುವ ಸಾಧ್ಯತೆ ಬಗ್ಗೆ  ಕೇಳಿಬರುತ್ತಿವೆ. ಈ ಸರಕಾರಗಳು ನೀಡಿದ ತನಿಖಾ ವರದಿ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯವೂ ಇದೆ. ಈ ಹಿಂದೆ ಲಂಡನ್‌ನಲ್ಲಿ  ನಡೆದ ನರ್ಸ್‌ ಜೆಸಿಂತಾ ಸಾವು ಕೂಡ ನಿಗೂಢವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next