Advertisement

ಅಡ್ಕಸ್ಥಳ -ಒಡ್ಯ ರಸ್ತೆಯಲ್ಲಿ ಅಪಾಯಕಾರಿ ಹೊಂಡ

11:15 PM Jun 24, 2019 | Sriram |

ಪೆರ್ಲ: ಅಡ್ಕಸ್ಥಳದಿಂದ ಒಡ್ಯ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಮರಣಗುಂಡಿ ಸೃಷ್ಟಿಯಾಗಿ ಅಪಾಯ ಕೈ ಬೀಸಿ ಕರೆಯುತ್ತಿದೆ.ಅಡ್ಕಸ್ಥಳದಿಂದ ಸೂಮಾರು ಒಂದು ಕಿ.ಮೀ. ದೂರದ ತಿರುವಿನಲ್ಲಿ ಈ ಹೊಂಡ ಇದ್ದೂ ಅದೇ ಭಾಗದಿಂದ ಬರುವ ವಾಹನಗಳಿಗೆ ಹತ್ತಿರ ತಲುಪಿದಾಗ ಮಾತ್ರ ತಿಳಿಯುವುದು.

Advertisement

ತಿರುವು ಕೂಡ ಇದ್ದ ಕಾರಣ ರಾತ್ರಿ ಕಾಲದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎದುರಾದೀತು.ಖಾಸಗಿ ದೂರವಾಣಿ ಸಂಸ್ಥೆಯವರು ಕೇಬಲ್‌ ಹಾಕಲು ತೆಗೆದ ಹೊಂಡದಲ್ಲಿ ಮಳೆ ನೀರು ಹರಿದು ಹೋಗಿ ಉದ್ದಕ್ಕೆ ಹೊಂಡ ಸೃಷ್ಟಿಯಾಗಿದೆ.ಈ ರಸ್ತೆಯು ಕರ್ನಾಟಕದ ಒಡ್ಯ,ಆರ್ಲಪದವು,ಪುತ್ತೂರು ಹಾಗೂ ರೆಂಜ ಭಾಗಕ್ಕೂ ಸಂಪರ್ಕ ಸಾಧಿಸುತ್ತದೆ.ಪ್ರತಿ ದಿನವು ಈ ರಸ್ತೆಯಲ್ಲಿ ಪಾದಚಾರಿಗಳು,ಶಾಲಾ ವಾಹನಗಳು,ಇತರ ವಾಹನಗಳು ಬಹಳಷ್ಟು ಸಂಚರಿಸುತ್ತಿದ್ದು ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಅಡ್ಕಸ್ಥಳದ ರಿಕ್ಷಾ ಚಾಲಕ ವಿಶ್ವನಾಥ ಪೈಸಾರಿ ಹೇಳುತ್ತಾರೆ.

ಇದೇ ರಸ್ತೆಯ ಕೆಲವು ಕಡೆ ಸ್ಥಳೀಯ ವ್ಯಕ್ತಿಗಳು ತಮ್ಮ ನಿವಾಸಗಳಿಗೆ ಹೋಗಲು ಮಾರ್ಗ ನಿರ್ಮಿಸಿದ್ದು ನೀರು ಹರಿದು ಹೋಗುವ ಚರಂಡಿಗಳನ್ನು ಮಣ್ಣು ಹಾಕಿ ಮುಚ್ಚಿದ್ದಾರೆ. ಚರಂಡಿಯಲ್ಲಿ ಮಳೆನೀರು ಹೋಗಲು ಪೈಪ್‌ ಅಥವಾ ಸಿಮೆಂಟ್‌ ಹಲಗೆಗಳನ್ನು ಹಾಕದೆ ರಸ್ತೆ ನಿರ್ಮಿಸಿದ ಕಾರಣ ಮಳೆ ನೀರು ಮಣ್ಣು ಸಮೇತ ರಸ್ತೆಯಲ್ಲಿಯೇ ಹರಿದು ಕೆಸರಿನಿಂದ ಮುಳುಗಿದೆ. ಪಾದಚಾರಿಗಳು ಹಾಗೂ ಕಿರುವಾಹನಗಳು ಇಲ್ಲಿ ಹೋಗಲು ಕಷ್ಟ ಪಡುತ್ತಾರೆ.ರಸ್ತೆಗೆ ಸಂಬಂಧ ಪಟ್ಟ ಅಧಿಕೃತರು ಅಪಾಯ ಸಂಭವಿಸುವ ಮೊದಲು ಹೊಂಡಗಳನ್ನು ಮುಚ್ಚುವ ವ್ಯವಸ್ಥೆ ಮಾಡಬೇಕು ಎಂದು ಎಣ್ಮಕಜೆ ಪಂಚಾಯತ್‌ ಸದಸ್ಯೆ ಮಮತಾ ಯು. ರೈ. ತಿಳಿಸಿದರು.ಈ ರಸ್ತೆಯು ರಾಜ್ಯ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದು ಇದರ ಬಗ್ಗೆ ಬದಿಯಡ್ಕದ ಲೋಕೋಪಯೋಗಿ ಉಪ ಕಚೇರಿಯ ಅಧಿಕೃತರನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ, ಖಾಸಗಿ ದೂರವಾಣಿ ಸಂಸ್ಥೆಯವರಿಂದ ಉಂಟಾಗಿರುವ ಹೊಂಡವನ್ನು ಅವರಿಂದಲೇ ಮುಚ್ಚಿಸುವ ಕ್ರಮ ಕೈಗೊಳ್ಳುತ್ತೇವೆ ಎಂದು ಸಹಾಯಕ ಎಂಜಿನಿಯರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next