Advertisement

ತೆರೆದ ವಾಹನಗಳಲ್ಲಿ ಅಪಾಯಕಾರಿ ವಸ್ತು ಸಾಗಾಟ

10:15 AM Apr 02, 2019 | pallavi |
ಮಂಗಳೂರು : ನಗರದಲ್ಲಿ ಮಿನಿ ಲಾರಿಗಳು, ತೆರೆದ ಪಿಕ್‌ಅಪ್‌ ವಾಹನಗಳಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಕೈಗೊಳ್ಳದೆ ವಿದ್ಯುತ್‌ ಕಂಬ, ಜಲ್ಲಿ, ಮಣ್ಣು, ಸರಳು, ಕಲ್ಲುಗಳು ಸಹಿತ ಇನ್ನಿತರ ವಸ್ತುಗಳನ್ನು ಸಾಗಿಸಲಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮ ವಹಿಸದೆ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದರಿಂದ ನಗರದಲ್ಲಿ ಆಗಾಗ ದುರ್ಘ‌ಟನೆಗಳು ನಡೆಯುತ್ತಿವೆ. ಈ ಹಿಂದೆ ಕುದ್ರೋಳಿ ಬಳಿ ತೆರೆದ ಟಿಪ್ಪರ್‌ನಲ್ಲಿ ವಿದ್ಯುತ್‌ ಕಂಬ ತೆಗೆದುಕೊಂಡು ಹೋಗುವ ಸಮಯದಲ್ಲಿ ಆಟೋ ರಿಕ್ಷಾಕ್ಕೆ ಹಾನಿಯಾಗಿತ್ತು. ಇನ್ನು, ಇತ್ತೀಚೆಗೆ ನಗರದ ಬಿಜೈಯಲ್ಲಿ ಗೂಡ್ಸ್‌ ರಿಕ್ಷಾದಲ್ಲಿ ಕಬ್ಬಿಣದ ಸರಳು ಕೊಂಡೊಯ್ಯುತ್ತಿದ್ದಾಗ ರಿಕ್ಷಾ ಚಾಲಕ ತತ್‌ಕ್ಷಣ ಬ್ರೇಕ್‌ ಹಾಕಿದ್ದರಿಂದ ರಾಡ್‌ ಹಿಂಬದಿಯ ಕಾರಿನ ಗ್ಲಾಸ್‌ ಒಳ ಭಾಗಕ್ಕೆ ನುಗ್ಗಿತ್ತು. ಕೆಲ ಸಮಯಗಳ ಹಿಂದೆ ಬಂಟ್ವಾಳದ ಬಳಿ ಬಳಿ ತೆರೆದ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕಬ್ಬಿಣದ ರಾಡ್‌ ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನೊಳಗೆ ನುಗ್ಗಿತ್ತು. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಲಿಲ್ಲ.
ನಗರದಲ್ಲಿ ಈ ರೀತಿಯ ಘಟನೆಗಳು ಪದೇಪದೇ ಸಂಭವಿಸಿದರೂ ಟ್ರಾಫಿಕ್‌ ಪೊಲೀಸರು ಕೇವಲ ದಂಡ ಹಾಕಿ ಕಳುಹಿಸುತ್ತಾರೆ. ಇದರಿಂದಾಗಿ ಮತ್ತೂಮ್ಮೆ ಇದೇ ರೀತಿಯ ಘಟನೆಗಳು ಮರುಕಳಿಸುತ್ತಿದೆ. ಈ ರೀತಿಯಾಗಿ ಅಪಾಯಕಾರಿ ವಸ್ತುಗಳನ್ನು ಮುನ್ನೆಚ್ಚರಿಕೆ ಕ್ರಮವಿಲ್ಲದೆ ತೆಗೆದುಕೊಂಡು ಹೋಗುವುದು ಮೋಟಾರ್‌ ವಾಹನ ಕಾಯ್ದೆಗೆ ವಿರುದ್ಧವಾಗಿದೆ. ಪ್ರತಿಯೊಬ್ಬ ಚಾಲಕರು ಕೂಡ ನಿಯಮವನ್ನು ಪಾಲನೆ ಮಾಡಬೇಕು. ನಿಯಮ ಉಲ್ಲಂಘಿಸಿದರೆ, ಚಾಲಕನ ಪರವಾನಗಿಯನ್ನು ಅಮಾನತ್ತಿನಲ್ಲಿಡಬಹುದು. ಆದರೂ ದಂಡ ಕಟ್ಟಿದ ಬಳಿಕವೂ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಶಾಶ್ವತವಾಗಿ ಪರವಾನಗಿಯನ್ನು ರದ್ದುಗೊಳಿಸಬಹುದಾಗಿದೆ.
ಟಾರ್ಪಲ್‌ ಮುಚ್ಚದೆ ಮರಳು ಸಾಗಾಟ
ನಗರದಲ್ಲಿ ಟಾರ್ಪಲ್‌ ಮುಚ್ಚದ ಲಾರಿಗಳಲ್ಲಿ ಮರಳು ಸಾಗಾಟ ಮಾಡ ಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸುತ್ತಿಲ್ಲ. ಕಳೆದ ಬಾರಿ ಪೊಲೀಸ್‌ ಫೋನ್‌-ಇನ್‌ ಕಾರ್ಯಕ್ರಮದಲ್ಲಿಯೂ ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ್ದು, ಇನ್ನೂ, ಈ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ನಗರದ ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್‌ ಸಹಿತ ಇನ್ನಿತರ ಕಡೆಗಳಲ್ಲಿ ಲಾರಿಯಿಂದ ರಸ್ತೆಗೆ ಬಿದ್ದ ಮರಳುಗಳಿಂದಾಗಿ ವಾಹನ ಸವಾರರು ಅಪಘಾತಕ್ಕೊಳಗಾಗುವ ಸಾಧ್ಯತೆ ಇದೆ.
ಕಾನೂನಿನ ಪ್ರಕಾರ ದಂಡ
ತೆರೆದ ವಾಹನಗಳಲ್ಲಿ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಇದು ಕಾನೂನಿನ ಪ್ರಕಾರ ಅಪರಾಧ. ನಗರದಲ್ಲಿ ಈ ಬಗ್ಗೆ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ನಡೆದರೆ ಕಾನೂನಿನ ಮುಖೇನ ಕ್ರಮಕೈಗೊಳ್ಳುತ್ತೇವೆ.
  -ಜಿ.ಎಸ್‌. ಹೆಗ್ಡೆ, ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ-ಮಂಗಳೂರು
Advertisement

Udayavani is now on Telegram. Click here to join our channel and stay updated with the latest news.

Next