ಯಲಹಂಕ: ಮನುಕುಲವನ್ನೇ ನಾಶಪಡಿಸಬಲ್ಲ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳ್ಳಂದೂರು ಕೆರೆಯಲ್ಲಿವೆ ಎಂದು ಅಧ್ಯಯನ ಒಂದರಿಂದ ತಿಳಿದುಬಂದಿದೆ ಎಂದು ಪರಿಸರ ತಜ್ಞ ಎ.ಎನ್.ಯಲ್ಲಪ್ಪ ರೆಡ್ಡಿ ಹೇಳಿದರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ “ಚಿಗುರು’ ವಿದ್ಯಾರ್ಥಿಗಳ ತಂಡ ಏರ್ಪಡಿಸಿದ್ದ “ನಮ್ಮ ನೆಲ ನಮ್ಮ ಜಲ’ ಎಂಬ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ಔಷಧಕ್ಕೂ ಜಗ್ಗದ ಮಾರಕ ರೋಗಗಳನ್ನು ಹರಡಬಲ್ಲ ಅಪಾಯಕಾರಿ ಬ್ಯಾಕ್ಟೀರಿಯಾಗಳು ನಮ್ಮ ಸುತ್ತ ಮುತ್ತಣ ಕೆರೆಗಳಲ್ಲಿವೆ. ನಾವು ನಗರೀಕರಣ ಹಾಗೂ ಕೈಗಾರಿಕೀಕರಣ ಪ್ರಕ್ರಿಯೆಯಲ್ಲಿ ತೊಡಗಿ ಕೆರೆಕಟ್ಟೆಗಳ ಜೀವಜಲವನ್ನು ಮಲಿನಗೊಳಿಸಿರುವುದು ಇದಕ್ಕೆ ಕಾರಣ ಎಂದರು.
“ಐಷಾರಾಮಿ ಸುಖಕ್ಕೋಸ್ಕರ ಪರಿಸರವನ್ನು ನಾವು ಕಲುಷಿತಗೊಳಿಸುತ್ತಿದ್ದೇವೆ. ನಿಸರ್ಗದ ಬಗ್ಗೆ ನಾವು ಪ್ರಾಮಾಣಿಕ, ಸ್ಪಷ್ಟ ಹಾಗೂ ಪವಿತ್ರ ಧೋರಣೆ ಬೆಳೆಸಿಕೊಳ್ಳದಿದ್ದರೆ ನಿಸರ್ಗ ನಮ್ಮ ಮೇಲೆ ಮುನಿಸಿಕೊಳ್ಳುತ್ತದೆ. ನಿಸರ್ಗ ಮುನಿದರೆ ನಾವು ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ಪರಿಸರ ತಜ್ಞ ಎ.ಎಸ್.ಚಂದ್ರಮೌಳಿ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಮಾಧ್ಯಮಗಳು ಕಾಳಜಿ ತೋರಬೇಕು. ಕ್ಷುಲ್ಲಕ ರಾಜಕಾರಣ ಹಾಗೂ ಚಿತ್ರ ನಟ, ನಟಿಯರ ಕುಟುಂಬದ ಕಾದಾಟಗಳನ್ನು ಪ್ರಸಾರ ಮಾಡುತ್ತ ವೀಕ್ಷಕರ ಸಮಯ ವ್ಯರ್ಥಮಾಡುವ ಬದಲು ಯುವ ಜನತೆಯಲ್ಲಿ ಪರಿಸರ ಪ್ರಜ್ಞೆ ಹಾಗೂ ಮಾಲಿನ್ಯದ ದುಷ್ಪರಿಣಾಮಗಳ ಅರಿವು ಮೂಡಿಸುವತ್ತ ಗಮನ ಹರಿಸಬೇಕು ಎಂದರು.
ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಎನ್‌ಎಂಐಟಿ ಡೀನ್ ಡಾ.ಶ್ರೀಧರ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ.ಎಚ್.ಸಿ.ನಾಗರಾಜ್, ಚಿಗುರು ತಂಡದ ಶಿಕ್ಷಕ ಸಂಯೋಜಕಿ ಡಾ.ಎನ್. ನಳಿನಿ ಹಾಜರಿದ್ದರು.