Advertisement

Havyaka Mahasabha: ಭಯವಿಲ್ಲದೇ ಮುನ್ನುಗ್ಗಿದರೆ ಯಶಸ್ಸು ಸಾಧ್ಯ: ಸಂಸದ ತೇಜಸ್ವಿ ಸೂರ್ಯ

11:47 PM Aug 06, 2024 | Team Udayavani |

ಬೆಂಗಳೂರು:  ಹೆದರುವುದೇ ನಮ್ಮೆಲ್ಲರ ದೌರ್ಬಲ್ಯವಾಗಿದ್ದು, ಹೆದರದೇ ಮುನ್ನುಗ್ಗಿದಾಗ ಯಶಸ್ಸು ಸಾಧ್ಯ. ನಾವು ಸಶಕ್ತವಾಗಿದ್ದಾಗ ಮಾತ್ರ ಜಗತ್ತಿನಲ್ಲಿ ಗೌರವ ಪ್ರಾಪ್ತವಾಗುತ್ತದೆ. ಉದ್ಯಮಗಳನ್ನು ಹುಟ್ಟುಹಾಕಲು ಈಗ ಪೂರಕ ವಾತಾವರಣವಿದ್ದು, ಈ ದಿಸೆಯಲ್ಲಿ ಯುವ ಸಮುದಾಯ ಆಲೋಚಿಸಬೇಕಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ಹವ್ಯಕ ಮಹಾಸಭೆಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿಸಿದ್ದ ‘ಪ್ರತಿಬಿಂಬ ಗ್ರ್ಯಾಂಡ್‌ ಫಿನಾಲೆ  ಹಾಗೂ ‘ಯುವಜನೋತ್ಸವ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಭಾಷೆ ನಮ್ಮ ಸಂಸ್ಕೃತಿಯ ಸಂವಹನ ಮಾಧ್ಯಮವೂ ಹೌದು. ನಾವು ನಮ್ಮ ಮಾತೃಭಾಷೆಯನ್ನೇ ಮನೆಯಲ್ಲಿ ಬಳಸುವುದರಿಂದ ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ. ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಇರುವವರು ಉದ್ಯಮ ಜಗತ್ತಿನಲ್ಲಿ ಯಶಸ್ಸು ಗಳಿಸಲು ಅಸಾಧ್ಯ ಎಂಬ ವಾತಾವರಣ ಕಲ್ಪಿಸಲಾಗಿದೆ. ಇದನ್ನು ಮೀರಿ ನಾವು ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ಜೊತೆ ಜೊತೆಗೆ ಉದ್ಯಮದಲ್ಲೂ ಯಶಸ್ಸುಗಳಿಸಬೇಕು ಎಂದು ಕಿವಿಮಾತು ಹೇಳಿದರು.

ಹವ್ಯಕ ಸಮಾಜ ಜನಸಂಖ್ಯಾ ದೃಷ್ಟಿಯಿಂದ ಅತಿ ಚಿಕ್ಕ ಸಮುದಾಯವಾದರೂ, ಸಮಷ್ಟಿ ಸಮಾಜದ ಮೇಲೆ ಈ ಪುಟ್ಟ ಸಮುದಾಯದ ಪ್ರಭಾವ ಅಚ್ಚಳಿಯದಂತಿದೆ ಎಂದು ಹವ್ಯಕ ಸಮಾಜವನ್ನು ಶ್ಲಾಘಿಸಿದರು.

ಭಾಷೆ, ಸಂಸ್ಕೃತಿ ಉಳಿಸಿ: 
“ಉದಯವಾಣಿ” ದಿನಪತ್ರಿಕೆ ಪ್ರಧಾನ ಸಂಪಾದಕ ರವಿಶಂಕರ್ ಭಟ್ ಮಾತನಾಡಿ, ಸಂಸ್ಕೃತಿ ಎಂಬುದು ಇಂಜಿನ್ ಇದ್ದಂತೆ. ನಾವು ಬಳಸಿದಂತೆ ನಮ್ಮ ಸಂಸ್ಕೃತಿಯು ಉಳಿದು ಬೆಳೆಯುತ್ತದೆ. ವೈವಿಧ್ಯಮಯವಾದ ನಮ್ಮ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇಂದು ಸಂಬಂಧಗಳು ವಾಟ್ಸಪ್  ಫೇಸ್‌ಬುಕ್‌’ಗೇ ಮಾತ್ರ ಸೀಮಿತವಾಗುತ್ತರುವುದು ವಿಷಾದನೀಯ ಎಂದರು.

Advertisement

ಹವ್ಯಕ ಜನಾಂಗವು ತನ್ನದೇ ಆದ ಭಾಷಾ ಸೊಗಡು ಹೊಂದಿದೆ. ಪ್ರಾಂತ್ಯವಾರು ವಿಭಿನ್ನವಾದ ಭಾಷಾ ಸೊಗಡು ಹವಿಗನ್ನಡದ ಹಿರಿಮೆ. ಮನೆಯಲ್ಲಿ ನಮ್ಮ ಭಾಷೆ ಬಳಸುವ ಮೂಲಕ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕಿದೆ  ಎಂದು ಅಭಿಪ್ರಾಯಪಟ್ಟರು.

ಡಿಸೆಂಬರ್‌ನಲ್ಲಿ 3ನೇ ವಿಶ್ವ ಹವ್ಯಕ ಸಮ್ಮೇಳನ: 
ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಯಾವುದೇ ಬೇಡಿಕೆ ಇಲ್ಲದ ಸಮಾಜ ಹವ್ಯಕ ಸಮಾಜ. ನಾವು ಸರ್ಕಾರಗಳಿಗೆ ಎಂದಿಗೂ ಬೇಡಿಕೊಳ್ಳುವುದಿಲ್ಲ. ಹವ್ಯಕ ಸಮಾಜ ನೀಡುವ ಸಮಾಜವಾಗಿದ್ದು, ನಮ್ಮಲ್ಲಿರುವ ಪ್ರತಿಭೆಯಿಂದ ಸಮಷ್ಠಿ ಸಮಾಜದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದೇವೆ ಎಂದರು.

ಹವಿಗನ್ನಡ ಭಾಷೆ  ಶ್ರೀಮಂತಿಕೆಯನ್ನು ಹೊಂದಿದೆ. ಕನ್ನಡದ ಮೊದಲ ನಾಟಕ ಯಾವುದು ಎಂದು ಕೇಳಿದರೆ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಎಂಬ ಉತ್ತರ ಬರುತ್ತದೆ. ಈ ನಾಟಕ ಇರುವುದು ಹವಿಗನ್ನಡದಲ್ಲಿ ಎಂಬುದು ಹವ್ಯಕ ಕನ್ನಡದ ಭಾಷಾ ಶ್ರೀಮಂತಿಕೆ ತಿಳಿಸುತ್ತದೆ ಎಂದರು.

ಡಿಸೆಂಬರ್ 27,28 ಹಾಗೂ 29 ರಂದು ಮೂರನೇ ವಿಶ್ವಹವ್ಯಕ ಸಮ್ಮೇಳನ ನಡೆಯಲಿದೆ. ಇದು ಜಾತಿಯ ಸಮ್ಮೇಳನವಾಗಿರದೇ, ಹವ್ಯಕ ಸಂಸ್ಕೃತಿಯ ಜಗತ್ತಿನ ಮುಂದೆ ತೆರದಿಡುವ ಕಾರ್ಯವಾಗಿರಲಿದೆ. ಈ ಬೃಹತ್ ಕಾರ್ಯಕ್ರಮಕ್ಕೆ ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು‌.

ಛಾಪು ಎಲ್ಲೆಡೆ ಮೂಡಿಸಿ: 
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ವಾನ್ ಸೂರ್ಯನಾರಾಯಣ ಭಟ್ ಹಿತ್ಲಳ್ಳಿ, ನಾವು ಅನುಸರಿಸುವ ಅದ್ವೈತ ತತ್ತ್ವದ ಪ್ರತಿಪಾದನೆಯಂತೆ ಈ ಜಗತ್ತೇ ಪ್ರತಿಬಿಂಬವಾಗಿದ್ದು, ಈ ಪ್ರತಿಬಿಂಬ ಕಾರ್ಯಕ್ರಮ ಹವ್ಯಕ ಸಮಾಜದ ಪ್ರತಿಬಿಂಬವಾಗಿದೆ. ಹವ್ಯಕ ಸಮಾಜ ಎಲ್ಲಾ ರಂಗದಲ್ಲೂ ಇದ್ದು, ನಮ್ಮ ಛಾಪು ಎಲ್ಲೆಡೆ ಮೂಡಿಸಬೇಕು ಎಂದರು.

ಮಿಸ್ ಯೂನಿವರ್ಸ್ ಪಿಟೈಟ್ ಡಾ.ಶೃತಿ ಹೆಗಡೆ ಮಾತನಾಡಿ, ಸ್ಪರ್ಧೆಯಲ್ಲಿ ಅಥವಾ ಜೀವನದಲ್ಲಿ ಗೆಲ್ಲಲು ಆತ್ಮವಿಶ್ವಾಸ ಮುಖ್ಯ. ಆತ್ಮವಿಶ್ವಾಸದ ಜೊತೆಗೆ ಪರಿಶ್ರಮ ಸೇರಿಕೊಂಡಾಗ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಯುವಜನತೆಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ಅಭ್ಯಾಗತರಾದ ಅಜಿತ್ ಬೊಪ್ಪನಹಳ್ಳಿ ಮಾತನಾಡಿ, ಇದು ಸಮಾಜ ಮಾಧ್ಯಮದ ಯುಗವಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. ತಾಳ್ಮೆಯಿಂದ ವರ್ತಿಸಬೇಕಾದ್ದು ಸಾಮಾಜಿಕ ಮಾಧ್ಯಮದ ಕುರಿತಾದ ಮೊದಲ ನಿಯಮ ಎಂದು ಕಿವಿಮಾತು ಹೇಳಿದರು.

ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ, ಬೆಂಗಳೂರಿನ ವಿವಿಧ ಪ್ರಾಂತ್ಯಗಳಲ್ಲಿ ಆಯೋಜಿಸಲಾಗಿದ್ದ ‘ಪ್ರತಿಬಿಂಬ’ ಕಾರ್ಯಕ್ರಮದ ಗ್ರ್ಯಾಂಡ್‌ ಫಿನಾಲೆ ನಡೆಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ‘The success story of enterpriserʼ ಎಂಬ ಕಾರ್ಯಕ್ರಮದಲ್ಲಿ ಹವ್ಯಕ ಸಮಾಜದ ಯುವ ಉದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಂಡು, ಉದ್ಯಮವನ್ನು ಆರಂಭಿಸುವ ಕುರಿತು ಯುವ ಜನತೆಗೆ ಮಾರ್ಗದರ್ಶನ ಮಾಡಿದರು.

ಖ್ಯಾತ ಗಾಯಕಿ ಪೃಥ್ವಿ ಭಟ್ ಹಾಗೂ ದಿಯಾ ಹೆಗಡೆ ಅವರ ಭಾವಯಾನ ಸಂಗೀತ ಕಾರ್ಯಕ್ರಮ, ಯಕ್ಷನೃತ್ಯ ವೈಭವ, ಯೋಗನೃತ್ಯ ಮುಂತಾದ ಕಾರ್ಯಕ್ರಮಗಳು ಜನಮನರಂಜಿಸಿತು. ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್, ಆದಿತ್ಯ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ , ಕಾರ್ಯಕ್ರಮದ ಸಂಚಾಲಕ ದಿನೇಶ್ ಎಂ ಭಟ್ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next