Advertisement

ಗಂಗೆ ಧರೆಗೆ ತಂದಿದ್ದು ಭಗೀರಥ

04:21 PM May 03, 2017 | Team Udayavani |

ಕಲಬುರಗಿ: ಭಗೀರಥ ಮಹರ್ಷಿ ತಪಸ್ಸು ಮಾಡಿ ಪರಶಿವನನ್ನು ಗೆದ್ದು ಗಂಗೆಯನ್ನು ಭೂಮಿಗೆ ತರದೇ ಹೋಗಿದ್ದರೆ  ಭೂಮಿಯಲ್ಲಿನ ನಮ್ಮ ಕಥೆ ಏನಾಗಿರುತ್ತಿತ್ತು ಎಂದು ಶಾಸಕದತ್ತಾತ್ರೇಯ ಸಿ.ಪಾಟೀಲ ರೇವೂರ ಪ್ರಶ್ನಿಸಿದರು.  

Advertisement

ಇಲ್ಲಿನ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶ್ರೀ ಭಗೀರಥ ಮಹರ್ಷಿ ಜಯಂತ್ಯುತ್ಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಗೀರಥ ಮಹರ್ಷಿಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಒಂದು ವೇಳೆ ಭೂಮಿಗೆ ಗಂಗೆಯನ್ನು ತರದೆ ಹೋಗಿದ್ದರೆ ಭೂಮಿಯಲ್ಲಿ ಜನವಸತಿ ಇರುತ್ತಿತ್ತೆ? ಮನುಷ್ಯರಾಗಿ, ಪ್ರಾಣಿ, ಪಕ್ಷಿಗಳಿಗೆ ನೀರೇ ಇರುತ್ತಿರಲಿಲ್ಲ ಎಂದ ಮೇಲೆ ಭೂಮಿಯಲ್ಲಿ ಜೀವರಾಶಿಯ ಉಳಿವೇ ಇರುತ್ತಿರಲಿಲ್ಲ. ಆದರೆ, ಮಹಾನ್‌ ತಪಸ್ವಿ ಭಗೀರಥ ತಮ್ಮ ತಪಸ್ಸಿನ ಶಕ್ತಿಯಿಂದ ಭೂಮಿಗೆ ಗಂಗೆಯನ್ನು ತಂದಿದ್ದಾರೆ.

ಆದ್ದರಿಂದ ನಾವಿವತ್ತು ಈ ಸಮಾಜದ ಋಣದಲ್ಲಿದ್ದೇವೆ ಎಂದರು. ಗಂಗಾ ನದಿಯು ದೇಶದ ಜೀವ ನದಿಯಾಗಿದೆ. ರೈತರಿಗೆ ಹಾಗೂ ಉದ್ಯೋಗಕ್ಕೆ ಸಹಾಯಕವಾಗಿದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿರುವಂತೆ ಉಪ್ಪಾರ ಸಮಾಜದ ಬಾಂಧವರು ಕಾಯಕದಲ್ಲಿ ತೊಡಗಿ ಆರ್ಥಿಕ ಸಬಲರಾಗಬೇಕು.

ಸರ್ಕಾರ ರೂಪಿಸಿರುವ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ಭೂಲೋಕಕ್ಕೆ ವರದಾನವಾಗಿರುವ ಗಂಗಾ ಮಾತೆಯನ್ನು ಎಲ್ಲರೂ ಆರಾಧಿಧಿಸುವ ಮೂಲಕ ನೀರನ್ನು ಸಮರ್ಪಕವಾಗಿ ಮತ್ತು ಮಿತವಾಗಿ ಬಳಸಿ ಕಾಲಾಂತರದ ವರೆಗೆ ಭೂಮಿಯಲ್ಲಿನ ಜೀವರಾಶಿಗೆ ನೀರು ದಕ್ಕುವಂತೆ ಮಾಡಬೇಕಿದೆ ಎಂದು ಹೇಳಿದರು. 

Advertisement

ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಮಾತನಾಡಿದರು. ಜೇವರ್ಗಿ ಕಾಲೋನಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ| ಗೀತಾಂಜಲಿ ಜಿ. ಉಪ್ಪಾರ ಉಪನ್ಯಾಸ ನೀಡಿ, ಭಗೀರಥ ಎಂದಾಕ್ಷಣ ಸ್ವರ್ಗದಿಂದ ಗಂಗೆಯನ್ನು ಪಾತಾಳಕ್ಕೆ ಕರೆದೊಯ್ದದ್ದು ಹಾಗೂ ಅಚಲ ಪ್ರಯತ್ನ ನೆನಪಿಗೆ ಬರುತ್ತದೆ. 

ಕಷ್ಟಪಟ್ಟು ಪ್ರಯತ್ನಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ ಸಂದೇಶವನ್ನು ಭಗೀರಥ ಮಹರ್ಷಿಗಳು ಮನುಕುಲಕ್ಕೆ ನೀಡಿದ್ದಾರೆ. ಉಪ್ಪರ ಸಮಾಜದವರು ಎಲ್ಲರೂ ಒಗ್ಗಟ್ಟಾಗಿ ಪ್ರಾಮಾಣಿಕವಾಗಿ ಒಳ್ಳೆಯ ಸಮಾಜ ನಿರ್ಮಾಣದಲ್ಲಿ ತೊಡಗಬೇಕು ಎಂದರು. ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಶ್ರೀನಿವಾಸ ಸಗರ, ಜಿಲ್ಲಾ ಪಂಚಾಯತಿ ಸದಸ್ಯ ಅಶೋಕ ಸಗರ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು. ರಂಗನಾಥ ಜಡಿ ರಾವೂರ ವಂದಿಸಿದರು. ಇದೇ ಸಂದರ್ಭದಲ್ಲಿ ಕಲಾವಿದೆ ರೇಣುಕಾ ಹಾಗರಗುಂಡಗಿ ಮತ್ತು ತಂಡದವರು ವಚನ ಗಾಯನ, ನಾಡಗೀತೆ ಹಾಡಿದರು. 

ಆಕರ್ಷಕ ಮೆರವಣಿಗೆ: ಸಮಾರಂಭಕ್ಕೂ ಮುನ್ನ ಜಯಂತ್ಯುತ್ಸವ ಅಂಗವಾಗಿ ಕಲಬುರಗಿ ಮಕ್ತಂಪುರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಸರಾಫ್‌ಬಜಾರ್‌, ಚೌಕ್‌ ಪೊಲೀಸ್‌ ಸ್ಟೇಶನ್‌, ಸೂಪರ್‌ ಮಾರ್ಕೆಟ್‌, ಜಗತ್‌ ವೃತ್ತದ ಮೂಲಕ ಡಾ| ಎಸ್‌.ಎಂ. ಪಂಡಿತ ರಂಗಮಂದಿರದ ವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಭಗೀರಥ ಮಹರ್ಷಿಗಳ ಭಾವಚಿತ್ರದ ಭವ್ಯ ಮತ್ತು ಆಕರ್ಷಕ ಮೆರವಣಿಗೆ ಜರುಗಿತು.  

Advertisement

Udayavani is now on Telegram. Click here to join our channel and stay updated with the latest news.

Next