ಹಾವೇರಿ: ಜಿಲ್ಲೆಯಲ್ಲಿ ಹರಿದಿರುವ ವರದಾ ನದಿಯ ದಂಡೆಯಲ್ಲಾಗುವ ಕೊರೆತ ತಡೆದು ದಡದ ಮಣ್ಣಿನ ರಕ್ಷಣೆಗೆ ಜಿಪಂ “ವರದಾ ಕರೆ’ ಎಂಬ ವಿಶಿಷ್ಟ ಯೋಜನೆ ರೂಪಿಸಿದೆ. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಉಂಟಾಗಿ ಸಂಭವಿಸಬಹುದಾದ ಭೂಸವೆತ ಹಾಗೂ ಭೂಕೊರೆತ ತಡೆಗಟ್ಟಲು ಈ ಯೋಜನೆ ರೂಪಿಸಲಾಗಿದೆ.
ಜಿಲ್ಲೆಯಲ್ಲಿ ವರದಾ ನದಿ ಹಾನಗಲ್ಲ, ಹಾವೇರಿ, ಸವಣೂರು ತಾಲೂಕುಗಳ ಮೂಲಕ ಸುಮಾರು 129 ಕಿಮೀ ಹರಿಯುತ್ತದೆ. ನದಿಪಾತ್ರದ 300ರಿಂದ 500 ಮೀಟರ್ ಅಂತರದಲ್ಲಿ ಭೂ ಸಂರಕ್ಷಣಾ ಮತ್ತು ಅರಣ್ಯೀಕರಣ ಕಾಮಗಾರಿ ಅನುಷ್ಠಾನಗೊಳಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ. ನದಿ ಪಾತ್ರದ ಬಫರ್ ಝೋನ್‌ನಲ್ಲಿ ಬರುವ ರೈತರ ಜಮೀನುಗಳಲ್ಲಾಗುವ ಭೂ ಸವಕಳಿ, ಬಾಂದಾರು, ಚೆಕ್‌ಡ್ಯಾಂ, ಅರಣ್ಯೀಕರಣ ಮತ್ತು ಹಲವಾರು ಭೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ವರದಾ ಕೆರೆ ವಿಶೇಷ ಕಾರ್ಯಕ್ರಮದಡಿ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಅರಣ್ಯ ಇಲಾಖೆಗಳ ತಾಂತ್ರಿಕ ಒಗ್ಗೂಡುವಿಕೆಯಿಂದ ಯೋಜನೆ ಅನುಷ್ಠಾನಗೊಳ್ಳಲಿದೆ.
ಜಲಾಮೃತ ಯೋಜನೆ: “ವರದಾ ಕರೆ’ ಕಾರ್ಯಕ್ರಮದ ಜತೆಗೆ ಜಿಪಂ ಜಲಮೂಲಗಳ ಸಂರಕ್ಷಣೆಗೂ ಮುಂದಾಗಿದ್ದು ನರೇಗಾ ಯೋಜನೆ ಮೂಲಕ ಈ ಕಾರ್ಯ ಅನುಷ್ಠಾನಕ್ಕೆ ಮುಂದಾಗಿದೆ. ಜಿಲ್ಲೆಯ 22,082 ಹೆಕ್ಟೇರ್ ಜಲಾನಯ ಪ್ರದೇಶ ಅಭಿವೃದ್ಧಿಗೊಳಿಸಲು 104 ಕೋಟಿ ರೂ.ಗಳ ಕ್ರಿಯಾಯೋಜನೆ ತಯಾರಿಸಿದೆ. ಒಟ್ಟಾರೆ ಜಿಪಂ ನೈಸರ್ಗಿಕ ಸಂಪತ್ತು ರಕ್ಷಣೆಗೆ ಆದ್ಯತೆ ನೀಡುವ ಮೂಲಕ ಅದಕ್ಕೆ ಪೂರಕ ಕಾರ್ಯಕ್ರಮ ರೂಪಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ವರದಾ ನದಿ ದಂಡೆಯಲ್ಲಾಗುವ ಭೂ ಸವಕಳಿ ತಡೆಯಲು “ವರದಾ ಕರೆ’ ಎಂಬ ವಿಶೇಷ ಕಾರ್ಯಕ್ರಮವನ್ನು2020-21ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ. ಜಲಮೂಲಗಳ ರಕ್ಷಣೆಗೆ ಜಲಾಮೃತ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟಾರೆ ಶೇ. 65 ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ವ್ಯಯಿಸಲು ನಿರ್ಧರಿಸಲಾಗಿದೆ.
ರಮೇಶ ದೇಸಾಯಿ,
ಜಿಪಂ ಸಿಇಒ
ಎಚ್.ಕೆ. ನಟರಾಜ