•ಎಚ್.ಕೆ. ನಟರಾಜ
ಹಾವೇರಿ: ಇವರು ಶಿಕ್ಷಕ ವೃತ್ತಿಯ ಕೋರ್ಸ್ ಕಲಿತವರಲ್ಲ, ಎಲ್ಲಿಯೂ ಶಿಕ್ಷಕಿಯಾಗಿ ಕೆಲಸ ಮಾಡಿದವರಲ್ಲ. ಆದರೆ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಕೈದಿಗಳ ಪಾಲಿಗೆ ನೆಚ್ಚಿನ-ಮೆಚ್ಚಿನ ‘ಟೀಚರ್’ ಆಗಿದ್ದಾರೆ.
ಹಾವೇರಿ: ಇವರು ಶಿಕ್ಷಕ ವೃತ್ತಿಯ ಕೋರ್ಸ್ ಕಲಿತವರಲ್ಲ, ಎಲ್ಲಿಯೂ ಶಿಕ್ಷಕಿಯಾಗಿ ಕೆಲಸ ಮಾಡಿದವರಲ್ಲ. ಆದರೆ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಕೈದಿಗಳ ಪಾಲಿಗೆ ನೆಚ್ಚಿನ-ಮೆಚ್ಚಿನ ‘ಟೀಚರ್’ ಆಗಿದ್ದಾರೆ.
ಹೌದು. ಇಲ್ಲಿಯ ರಾಜೇಶ್ವರಿ ರವಿ ಸಾರಂಗಮಠ ಎಂಬುವರು ಕಲಿತದ್ದು ಪಿಯುಸಿಯಾದರೂ ಇಲ್ಲಿಯ ಕಾರಾಗೃಹದಲ್ಲಿರುವ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಗಮನ ಸೆಳೆದಿದ್ದಾರೆ.
ಬಾಲ್ಯದಿಂದಲೂ ನಾಟಕ, ಹಾಡು, ಏಕಪಾತ್ರಾಭಿನಯ ಹಾಗೂ ಸಮಾಜ ಸೇವೆಯ ಗುಂಗು ಹತ್ತಿಸಿಕೊಂಡ ರಾಜೇಶ್ವರಿ, 1998ರಲ್ಲಿ ‘ಕನ್ನಡ ನಾಡು ಸಾಕ್ಷರರ ನಾಡು’ ಸಾಕ್ಷರತಾ ಆಂದೋಲನ ಮೂಲಕ ಅಕ್ಷರ ಕಲಿಸುವ ಪಯಣ ಆರಂಭಿಸಿದರು. 2001ರಲ್ಲಿ ಹಾನಗಲ್ಲ ತಾಲೂಕಿನ ಗುರುರಾಯ ಪಟ್ಟಣದಲ್ಲಿ (ಆಗಿನ ಬಾಳೂರ ರಾಸ್ತಾ ತಾಂಡಾ) ಮುಂದುವರಿಕೆ ಸಾಕ್ಷರತಾ ಶಿಕ್ಷಣ ಪ್ರೇರಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರಿಗೆ 2005ರಲ್ಲಿ ಅಕ್ಷರಾಭ್ಯಾಸ, 2006ರಲ್ಲಿ ನಿರಂತರ ಮುಂದುವರಿಕೆ ಶಿಕ್ಷಣ ಕೇಂದ್ರ ಬಾಹ್ಯ ಮೌಲ್ಯಮಾಪನದಲ್ಲಿ ರಾಜೇಶ್ವರಿಯವರು ಭಾಗಿಯಾಗಿದ್ದರು. ಇವರ ಈ ಸೇವೆ ಪರಿಗಣಿಸಿದ ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶನಾಲಯದ ಸಾಕ್ಷರತಾ ಮಿಷನ್ 2011ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ವಿಶೇಷವೆಂದರೆ 2009ರಲ್ಲಿ ಗುತ್ತಲ ಗ್ರಾಮದಲ್ಲಿ ಎಂದೂ ಶಾಲೆಗೆ ಹೋಗದ ವಿಕಲಚೇತನೆ ವಿಜಯಾ ಮೈಲಾರ ಕಳ್ಳಿಮಠ ಎಂಬುವರಿಗೆ ಅಕ್ಷರಾಭ್ಯಾಸ ನೀಡಿ, ಎಸ್‌ಎಸ್‌ಎಲ್ಸಿ ಪರೀಕ್ಷೆ ಕಟ್ಟುವ ಮಟ್ಟಿಗೆ ಪ್ರಯತ್ನ ನಡೆಸಿದ್ದು ಇಲ್ಲಿ ಉಲ್ಲೇಖನೀಯ.
Advertisement
ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಅನಕ್ಷರಸ್ಥ 32 ಬಂಧಿಗಳಿಗೆ ಕಳೆದ ವರ್ಷ ಆರು ತಿಂಗಳು ಕಾಲ ಅಕ್ಷರ ಕಲಿಸುವ ಕಾಯಕ ಮಾಡಿದ್ದು, ಇವರಲ್ಲಿ 21 ಜನರು ಮೂಲ ಸಾಕ್ಷರತಾ ಪರೀಕ್ಷೆ ಬರೆದಿದ್ದಾರೆ.
Related Articles
Advertisement
ಕೇವಲ ಸಾಕ್ಷರಾಭ್ಯಾಸ ಮಾಡಿಸುವ ಶಿಕ್ಷಕಿಯಾಗಿ ಅಷ್ಟೇ ಅಲ್ಲ ಲೇಖಕಿಯೂ ಆಗಿದ್ದಾರೆ. ‘ಹೆಣ್ಣು ಪ್ರಣತಿ’, ‘ಹೆಣ್ಣು ಹೃದಯ’, ‘ವಿಕಲಚೇತನ ಗ್ರಾಮೀಣ ಪ್ರತಿಭೆ ವಿಜಯಾ’ ಎಂಬ ಕೃತಿಗಳನ್ನು ರಚಿಸಿದ್ದಾರೆ. ಕಳೆದ ವರ್ಷ ‘ಕಾವ್ಯ ಕಾರಣ’ ಎಂಬ ಪುಸ್ತಕಗಳಲ್ಲಿ ಅವರ ಬಿಡಿ ಲೇಖನಗಳು ಪ್ರಕಟವಾಗಿವೆ.