ಲಂಚದ ಆಮಿಷವೊಡ್ಡಿದ ಟೆಂಡರ್‌ದಾರರೊಬ್ಬರನ್ನು ಸ್ವತಃ ಅಧಿಕಾರಿಯೇ ಲೋಕಾಯುಕ್ತ ಬಲೆಗೆ ಬೀಳಿಸಿದ ಘಟನೆ ಗುರುವಾರ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕು ಪಂಚಾಯತ್ ಸಾಮಗ್ರಿಗಳ ಪೂರೈಕೆಗಾಗಿ ಕರೆದ ಟೆಂಡರ್ ಅನ್ನು ತನಗೆ ಕೊಡಿಸಿದ್ದೇ ಆದಲ್ಲಿ ಟೆಂಡರ್ ಮೊತ್ತದ ಶೇ.20ರಷ್ಟು ಹಣವನ್ನು ನೀಡುವುದಾಗಿ ಆಮಿಷವೊಡ್ಡಿದ್ದ ಟೆಂಡರ್‌ದಾರನನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬೀಳಿಸುವಲ್ಲಿ ಹಾವೇರಿ ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿಯಾಗಿರುವ ಭರತ್ ಹೆಗಡೆ ಯಶಸ್ವಿಯಾಗಿದ್ದಾರೆ.
ಲಂಚದ ಆಮಿಷವೊಡ್ಡಿ ಭ್ರಷ್ಟ ಸರಕಾರಿ ಅಧಿಕಾರಿಗಳು ಅಥವಾ ನೌಕರರನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬೀಳಿಸುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲಿ ಲಂಚ ನೀಡಲು ಮುಂದಾದವನನ್ನೇ ಸರಕಾರಿ ಅಧಿಕಾರಿ ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿರುವುದರಿಂದ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ ಇದೊಂದು “ರಿವರ್ಸ್ ಟ್ರ್ಯಾಪ್’ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ವಾಸ್ತವವಾಗಿ ಇದೊಂದು ಸಾಮಾನ್ಯ ಘಟನೆ. ತನಗೆ ಲಂಚ ಒಡ್ಡುವ ಮತ್ತು ಲಂಚ ನೀಡಲು ಮುಂದಾಗುವವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವುದಷ್ಟೇ ಅಲ್ಲದೆ ಅಂಥವರ ವಿರುದ್ಧ ಕಾನೂನು ಕ್ರಮ ಜರಗಿಸಲು ನೆರವಾಗುವುದು ಪ್ರತಿಯೊಬ್ಬ ಸರಕಾರಿ ನೌಕರನ ಕರ್ತವ್ಯವೂ ಕೂಡ. ಹೀಗಿರುವಾಗ ಹಾವೇರಿ ಇಒ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದು ಹೇಳಬಹುದು. ಓರ್ವ ಸರಕಾರಿ ಅಧಿಕಾರಿ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದುದೂ ಒಂದು ಸುದ್ದಿಯಾಗುತ್ತದೆ ಎಂದಾದರೆ ಅದು ಒಂದಿಷ್ಟು ಅತಿಶಯ ಎನಿಸುವುದು ಸಹಜ. ಆದರೆ ಇಂದಿನ ಸಮಾಜ ಮತ್ತು ವ್ಯವಸ್ಥೆಯಲ್ಲಿ ಲಂಚಗುಳಿತನ, ಭ್ರಷ್ಟಾಚಾರ, ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿರುವಾಗ ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಇಂತಹ ಪ್ರಾಮಾಣಿಕತೆಯ ವರ್ತನೆ ಯನ್ನು ನಿರೀಕ್ಷಿಸುವುದು ಸಹ ಅಸಹಜ ಎಂದೆನಿಸೀತು. ಈ ಕಾರಣದಿಂದಾಗಿಯೇ ಹಾವೇರಿ ತಾ.ಪಂ. ಇಒ ಅವರ ಪ್ರಾಮಾಣಿಕತೆ ಇಷ್ಟೊಂದು ಮಹತ್ವ ಮತ್ತು ಪ್ರಾಮುಖ್ಯ ಪಡೆದಿದೆ.
“ಸರಕಾರಿ ಕೆಲಸ ದೇವರ ಕೆಲಸ’, “ಸರಕಾರಿ ನೌಕರ ಅಥವಾ ಅಧಿಕಾರಿ ಜನಸೇವೆಗಾಗಿ ಇರುವವರು’ ಎಂಬೆಲ್ಲ ಮಾತುಗಳು ಈಗ ಸವಕಲಾಗಿವೆ. ಜನಸಾಮಾನ್ಯ ತನ್ನ ಯಾವುದಾದರೂ ಅಹವಾಲು, ಅರ್ಜಿಗಳನ್ನು ಹಿಡಿದು ಸರಕಾರಿ ಕಚೇರಿಗಳಿಗೆ ತೆರಳಿದರೆ ಲಂಚವಿಲ್ಲದೆ ಕೇಳುವವರೇ ಇಲ್ಲ ಎಂಬ ಪರಿಸ್ಥಿತಿ ಇಂದಿಗೂ ಇದೆ. ಸರಕಾರಿ ಅಧಿಕಾರಿಗಳ ಈ ಧೋರಣೆಯಿಂದಾಗಿ ಜನಸಾಮಾನ್ಯರು ಕೂಡ ರೋಸಿ ಹೋಗಿ ಭ್ರಷ್ಟ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ಹೀಗಾಗಿ ಸರಕಾರಿ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ.
ನಮ್ಮ ಸರಕಾರಿ ಆಡಳಿತ ವ್ಯವಸ್ಥೆಯ ವಾಸ್ತವ ಸ್ಥಿತಿ ಹೀಗಿರುವಾಗ ಹಾವೇರಿ ತಾ.ಪಂ.ನ ಇಒ ಅವರ ಪ್ರಾಮಾಣಿಕತೆಗೆ ಶಹಭಾಸ್ ಹೇಳಲೇಬೇಕು. ಇದು ಎಲ್ಲ ಸರಕಾರಿ ಅಧಿಕಾರಿಗಳು ಮತ್ತು ನೌಕರರಿಗೂ ಮಾದರಿಯಾದುದು. ಅಷ್ಟು ಮಾತ್ರವಲ್ಲದೆ ಸರಕಾರಿ ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡುವುದನ್ನೇ ತಮ್ಮ ಚಾಳಿಯನ್ನಾಗಿಸಿಕೊಂಡವರಿಗೂ ಇದು ಎಚ್ಚರಿಕೆಯ ಘಂಟೆಯೇ ಸರಿ. ಸರಕಾರಿ ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ತೋರುವ ಅಧಿಕಾರಿಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ಸರಕಾರ ಮತ್ತು ಸಮಾಜದಿಂದಾಗಬೇಕು. ಹೀಗಾದಾಗ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯವನ್ನು ಇನ್ನಷ್ಟು ಶ್ರದ್ಧೆ ಮತ್ತು ಸೇವಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ.