Advertisement

ಹಾವೇರಿ: ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

05:41 PM Mar 20, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ನಗರದ ಗಿರಿಜವ್ವ ಹೊಸಮನಿ ಕುಟುಂಬಕ್ಕೆ 5.05 ಕೋಟಿ ಭೂಸ್ವಾಧೀನ ಪರಿಹಾರ ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಹಾವೇರಿಯ ಉಪವಿಭಾಗಾಧಿಕಾರಿ ಕಚೇರಿ ಪೀಠೊಪಕರಣಗಳನ್ನು ಮಂಗಳವಾರ ಜಪ್ತಿ ಮಾಡಲಾಯಿತು.

Advertisement

ಮಾ. 2ರಂದು ಹಾವೇರಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಉಪವಿಭಾಗಾ ಧಿಕಾರಿ ಕಚೇರಿಯ ಚರಾಸ್ತಿಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಮೇರೆಗೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಕಚೇರಿಯ ಕಂಪ್ಯೂಟರ್‌, ಪೀಠೊಪಕರಣಗಳನ್ನು ವಶಕ್ಕೆ ಪಡೆದರು. ಕಚೇರಿಗೆ ಎಂದಿನಂತೆ ಬಂದಿದ್ದ ಸಿಬ್ಬಂದಿಯು ಜಪ್ತಿ ವಿಷಯ ಕೇಳಿದ ತಕ್ಷಣ ಕಂಗಾಲಾಗಿ, ಕಚೇರಿಯ ಹೊರಗಡೆ ಕುಳಿತರು. ಗಿರಿಜವ್ವ ಹೊಸಮನಿ ಕುಟುಂಬಸ್ಥರು ಸ್ವಾತಂತ್ರ್ಯ ಹೋರಾಟಗಾರ ಹೊಸಮನಿ ಸಿದ್ದಪ್ಪ ಅವರ ಸಂಬಂಧಿ ಗಳಾಗಿದ್ದಾರೆ.

ಏನಿದು ಪ್ರಕರಣ?: 1967ರಲ್ಲಿ ಎಪಿಎಂಸಿ ಮತ್ತು ಗಣಜೂರು ರಸ್ತೆ ನಿರ್ಮಾಣಕ್ಕಾಗಿ 7 ಗುಂಟೆ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ 2006ರಲ್ಲಿ ಸರ್ಕಾರ ನೋಟಿಫಿಕೇಷನ್‌ ಹೊರಡಿಸಿತ್ತು. ಆಗ ಪರಿಹಾರ ಕೊಡಿಸುವಂತೆ ಗಿರಿಜವ್ವ ಹೊಸಮನಿ ಕುಟುಂಬದವರು 2006ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 2010ರಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಗುಂಟೆಗೆ 50 ಸಾವಿರದ ಜತೆಗೆ ನಷ್ಟ ಪರಿಹಾರ, ಹೆಚ್ಚುವರಿ ಮಾರುಕಟ್ಟೆ ಮೌಲ್ಯ ನೀಡಲು ಆದೇಶಿಸಿದ್ದರು.

ನಂತರ ಸರ್ಕಾರ 2014ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಪ್ರಕರಣದ ವಿಚಾರಣೆ ನಡೆದು, 2020ರಲ್ಲಿ ಧಾರಾವಾಡದ ಕರ್ನಾಟಕ ಹೈಕೋರ್ಟ್‌ ಪೀಠವು 1967ರಿಂದ 2004ರವರೆಗೆ ಶೇ. 15ರ ಹೆಚ್ಚುವರಿ ಬಡ್ಡಿ ಮತ್ತು ನಷ್ಟ ಪರಿಹಾರದ ಹಣ ತುಂಬಿಕೊಡುವಂತೆ ಆದೇಶಿಸುವ ಮೂಲಕ ಕೆಳಗಿನ ನ್ಯಾಯಾಲಯದ ಆದೇಶ ಎತ್ತಿ ಹಿಡಿಯಿತು.

ಸರ್ಕಾರ ಪರಿಹಾರ ಕೊಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ 2024ರ ಫೆಬ್ರುವರಿ 7ರಂದು ಹೈಕೋರ್ಟ್‌ ಪೀಠ ಒಟ್ಟು 5.05 ಕೋಟಿ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತು. ಹೈಕೋರ್ಟ್‌ ಆದೇಶವಿದ್ದರೂ, ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಭೂಸ್ವಾಧೀನ ಅಧಿಕಾರಿಯೂ ಆದ ಉಪವಿಭಾಗಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ಹಾವೇರಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿತು.

Advertisement

ನ್ಯಾಯಾಲಯದ ಆದೇಶದ ಪ್ರಕಾರ ಪರಿಹಾರದ ಪೂರ್ಣ ಹಣ ಭೂಮಿ ಕಳೆದುಕೊಂಡ ಗಿರಿಜವ್ವ ಹೊಸಮನಿ ಕುಟುಂಬಕ್ಕೆ ಸಿಗದ ಕಾರಣ, ಜಪ್ತಿ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದು ವಕೀಲ ಅಶೋಕ ನೀರಲಗಿ ತಿಳಿಸಿದ್ದಾರೆ.

ಪರಿಹಾರದ ಹಣ ಬಿಡುಗಡೆಗಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಹೆಚ್ಚುವರಿ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದೇವೆ.
ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next