Advertisement
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಜಿಲ್ಲೆಗೆ ಎರಡು ಸಚಿವ ಸ್ಥಾನ, ವಿಧಾನ ಪರಿಷತ್ ಸದಸ್ಯ ಸ್ಥಾನ, ಮೂರು ನಿಗಮ-ಮಂಡಳಿ ಸೇರಿ ಜಿಲ್ಲೆಗೆ ಭರಪೂರ ಸ್ಥಾನಮಾನ ಸಿಕ್ಕಿತ್ತು. ಆ ಕಾಲ ಈಗ ಮರುಕಳಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. ಪಕ್ಷದ ಹಿರಿಯ ಮುಖಂಡ ಸಿ.ಎಂ. ಉದಾಸಿ ಹಾಗೂ ಪ್ರಭಾವಿ ನಾಯಕ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂಬ ಲೆಕ್ಕಾಚಾರ ಸಹಜವಾಗಿದೆ. ಆದರೆ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ಸ್ಥಿತ್ಯಂತರದ ಸುಳಿಯಲ್ಲಿರುವ ಬಿ.ಸಿ. ಪಾಟೀಲ ಮತ್ತು ವಿಶ್ವಾಸಮತದ ಸಭೆಗೆ ಗೈರಾಗಿ ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದ ಆರ್. ಶಂಕರ್ ಇಬ್ಬರೂ ಬಿಜೆಪಿಗೆ ಬಂದರೆ ಅವರಿಗೆ ಪಕ್ಷ ಯಾವ ಸ್ಥಾನ ನೀಡುತ್ತದೆ ಎಂಬುದು ಹೆಚ್ಚು ಕುತೂಹಲ ಕೆರಳಿಸಿದೆ.
Related Articles
Advertisement
‘ಕೈ’ ಅವಧಿಯಲ್ಲಿ ಸ್ಥಾನಮಾನ ಕಡಿಮೆ: ಈ ಹಿಂದಿನ ಅವಧಿಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡಲು ಸಹ ಭಾರಿ ಮೀನಾಮೇಷ ಎಣಿಸಿ ಕೊನೆಗೆ ಒಂದೂವರೆ ವರ್ಷದ ಬಳಿಕ ಹಾನಗಲ್ಲ ಶಾಸಕ ಮನೋಹರ ತಹಸೀಲ್ದಾರ್ ಅವರಿಗೆ ಸಚಿವ (ಅಬಕಾರಿ)ಸ್ಥಾನ ಕೊಟ್ಟು ವರ್ಷದೊಳಗೇ ಅವರಿಂದ ಸಚಿವ ಸ್ಥಾನ ವಾಪಸ್ ಪಡೆಯಲಾಗಿತ್ತು. ಬಳಿಕ ನಡೆದ ರಾಜಕೀಯ ತಲ್ಲಣಗಳ ನಡುವೆ (ಸಚಿವ ಪರಮೇಶ ನಾಯ್ಕ ರಾಜೀನಾಮೆ)ಲಂಬಾಣಿ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ಸಂದರ್ಭ ನಿರ್ಮಾಣವಾಗಿ ನಿರಾಯಾಸವಾಗಿ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿಯವರಿಗೆ ಸಚಿವ ಸ್ಥಾನ ಒಲಿದಿತ್ತು.
ಒಟ್ಟಾರೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇತ್ತು ಎಂಬುದು ಇಲ್ಲಿ ಸ್ಮರಣೀಯ. ಈ ಅವಧಿಯಲ್ಲಿಯೇ ಬಹಳ ವಿಳಂಬವಾಗಿ ಬ್ಯಾಡಗಿಯ ಎಸ್.ಆರ್ ಪಾಟೀಲರಿಗೆ ಜೈವಿಕ ಇಂಧನ ಅಭಿವೃದ್ಧಿ ನಿಗಮ ಹಾಗೂ ಎ.ಎಂ. ಪಠಾಣ ಅವರಿಗೆ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಸ್ಥಾನ ಜಿಲ್ಲೆಯವರಿಗೆ ನೀಡಲಾಗಿತ್ತು.
2018ರಲ್ಲಿ ಬಂದ ಕಾಂಗ್ರೆಸ್-ಜೆಡಿಎಸ್ ಮೃತ್ರಿ ಸರ್ಕಾರದ ಅವಧಿಯಲ್ಲಂತೂ ಜಿಲ್ಲೆಗೆ ಹೆಚ್ಚಿನ ಸ್ಥಾನಮಾನ ಮರೀಚಿಕೆಯಾಗಿತ್ತು. ಆರ್. ಶಂಕರ್‌ಗೆ ಬಿಟ್ಟರೆ ಬೇರೆ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ. ಆರಂಭದಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿ.ಸಿ. ಪಾಟೀಲ ಇದೇ ಕಾರಣಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದು ಈಗ ಇತಿಹಾಸ.
ಒಟ್ಟಾರೆ ಈ ಬಾರಿ ಬಿಜೆಪಿ ಸರ್ಕಾರ ರಚನೆಗೂ ಮೊದಲೇ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಹಾಗೂ ಇತರೆ ಸ್ಥಾನಮಾನ ಲಭಿಸುವ ನಿರೀಕ್ಷೆ ಹೆಚ್ಚಾಗಿದ್ದು, ಇದಕ್ಕಾಗಿ ಎಲ್ಲ ಹಂತದ ಮುಖಂಡರು ಪ್ರಮುಖರ ಗಮನಸೆಳೆಯಲು ಮುಂದಾಗಿದ್ದಾರೆ.