ಹಾವೇರಿ: ನಗರದಲ್ಲಿ ಬೀದಿಬದಿ ವ್ಯಾಪಾರಸ್ಥರು ಫುಟ್‌ಪಾತ್ ಸೇರಿದಂತೆ ರಸ್ತೆಗಳನ್ನೆಲ್ಲ ಆಕ್ರಮಿಸಿಕೊಂಡಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ನಾಗರಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ನಗರದಲ್ಲಿ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಬೀದಿಬದಿ ವ್ಯಾಪಾರಸ್ಥರು ತಮ್ಮ ಮಳಿಗೆ ಸೇರಿದಂತೆ ಬೋರ್ಡ್‌ಗಳನ್ನು ರಸ್ತೆಗಳಿಗೆ ವಿಸ್ತರಿಸುತ್ತಿದ್ದು, ವಾಹನ ಮತ್ತು ಜನರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಆದರೆ, ನಗರಸಭೆ ಅಧಿಕಾರಿಗಳು ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲದಂತೆ ವರ್ತಿಸುವ ಮೂಲಕ ಜಾಣ ಮೌನ ವಹಿಸುತ್ತಿದ್ದಾರೆ.
ನಗರದ ಪಿ.ಬಿ.ರಸ್ತೆ, ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ, ಹಾನಗಲ್ಲ ರಸ್ತೆ, ಗುತ್ತಲ ರಸ್ತೆ, ಜಿಲ್ಲಾಸ್ಪತ್ರೆಯ ಮುಂಭಾಗ ಸೇರಿದಂತೆ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಗೂಡಂಗಡಿಗಳು, ಹಣ್ಣು, ಹಂಪಲ, ಬಟ್ಟೆ ಮಾರಾಟ, ಬೈಕ್‌ಗಳ ಸೀಟ್ ಕವರ್ ಮಾರಾಟ ಮುಂತಾದ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ಅನೇಕ ಅಂಗಡಿಗಳ ಪ್ರಚಾರದ ಬೋರ್ಡ್ ಹಾಗೂ ಸ್ಟ್ಯಾಂಡ್‌ಗಳನ್ನು ಫುಟ್‌ಪಾತ್ ನಡುವೆ ಇಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಒಂದೊಂದೇ ತಳ್ಳು ಗಾಡಿ ಅಂಗಡಿಗಳು ಬಂದವು. ಈಗ ಅವೆಲ್ಲ ಅನಧಿಕೃತವಾಗಿಯೇ ಜಾಗ ಭದ್ರಪಡಿಸಿಕೊಂಡಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಸದ್ಯ ಮಳೆಗಾಲ ಪ್ರಾರಂಭವಾಗಿರುವುದರಿಂದ ಫುಟ್ ಪಾತ್‌ಗಳಲ್ಲಿ ತಲೆಎತ್ತಿರುವ ಗೂಡಗಂಡಿಗಳ ಮೇಲೆ ಪ್ಲಾಸ್ಟಿಕ್, ತಾಡಪಾಲ್ ಹೊದಿಸಲಾಗಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ನಗರದ ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಗುತ್ತಲ ರಸ್ತೆಯ ಎಲ್‌ಬಿಎಸ್ ಮಾರುಕಟ್ಟೆ ಸಮೀಪ ಫುಟ್‌ಪಾತ್ ಮೇಲೆಯೇ ಗೂಡಗಂಡಿಗಳು ತೆಲೆಎತ್ತಿವೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ವಾಹನಗಳು ಬಂದಾಗ ಪಕ್ಕದ ಫುಟ್‌ಪಾತ್ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ, ಸಾರ್ವಜನಿಕರು ನಿತ್ಯ ಜೀವ ಭಯದಲ್ಲಿಯೇ ಸಂಚರಿಸುವಂತಾಗಿದೆ. ಗ್ರಾಮೀಣ ಭಾಗದಿಂದ ಆಗಮಿಸುವ ಹಲವಾರು ಜನರು ನಗರದ ಮಾರುಕಟ್ಟೆ, ತಾಲೂಕು ಪಂಚಾಯಿತಿ, ಜಿಲ್ಲಾಸ್ಪತ್ರೆ, ಪಶು ಆಸ್ಪತ್ರೆ, ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವಾರು ಕಚೇರಿಗಳಿಗೆ ಸದಾ ಓಡಾಡುತ್ತಾರೆ. ನಗರದ ಬಸ್ ನಿಲ್ದಾಣದ ಸುತ್ತಮುತ್ತ ಪ್ರತಿನಿತ್ಯ ಹೆಚ್ಚು ವಾಹನ-ಜನಸಂದಣಿಯಿಂದ ಕೂಡಿರುತ್ತದೆ. ಕಳೆದ ವರ್ಷ ನಗರದಲ್ಲಿ ತಲೆಎತ್ತಿದ್ದ ಕೆಲವು ಗೂಡಂಡಿಗಳನ್ನು ತೆರವುಗೊಳಿಸಲು ನಗರಸಭೆ ಮುಂದಾಗಿತ್ತು. ನಂತರದ ದಿನಗಳಲ್ಲಿ ಅದೇ ಸ್ಥಳಗಳಲ್ಲಿ ಗೂಡಂಗಡಿಗಳು ಮತ್ತೇ ತಲೆಎತ್ತಿ ನಿಂತಿವೆ. ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಫುಟ್ ಪಾತ್ ಆಕ್ರಮಿಸಿಕೊಂಡಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸದ್ಯ ಮಳೆಗಾಲ ಆರಂಭಗೊಂಡಿರುವುದರಿಂದ ರಸ್ತೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ವಾಹನಗಳ ರಾಡಿ ಸಿಡಿದು ಪಾದಚಾರಿಗಳು ತೊಂದರೆ ಎದುರಿಸುವಂತಾ ಗಿದೆ. ಫುಟ್‌ಪಾತ್‌ಗಳ ಮೇಲಿನ ಗೂಡಂಗಡಿ ಹಾಗೂ ಬೋಡ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅಲ್ಲದೇ, ಬೀದಿ ಬದಿ ವ್ಯಾಪಾಸ್ಥರಿಗೆ ನಗರಸಭೆ ವತಿಯಿಂದ ನಿರ್ಧಿಷ್ಟ ಸ್ಥಳ ಗುರುತಿಸಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
ನಗರದ ಫುಟ್‌ಪಾತ್ ಹಾಗೂ ಅಂಗಡಿಗಳ ಮುಂಭಾಗದಲ್ಲಿ ಬೋರ್ಡ್‌ಗಳನ್ನು ಇಟ್ಟು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಕೆಲವು ಅಂಗಡಿಕಾರರಿಗೆ ನೋಟಿಸ್ ನೀಡಲಾಗಿದೆ. ಫುಟ್‌ಪಾತ್ ಆಕ್ರಮಿಸಿಗೊಂಡಿರುವ ಗೂಡಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. –
ಸಂಜೀವ ಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ
ನಗರದ ಫುಟ್‌ಪಾತ್‌ಗಳಲ್ಲಿ ತೆರೆದಿರುವ ಗೂಡಂಗಡಿಗಳಿಂದ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಸುಸಜ್ಜಿತ ಫುಟ್‌ಬಾತ್‌ಗಳಿದ್ದರೂ ವಿದ್ಯಾರ್ಥಿಗಳು, ವಯೋವೃದ್ಧರು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುವಂತಾಗಿದೆ. ಇದರಿಂದ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಕೂಡಲೇ ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿರುವ ಗೂಡಂಗಡಿಗಳ ತೆರವಿಗೆ ನಗರಸಭೆ ಕ್ರಮ ಕೈಗೊಳ್ಳಬೇಕು. –
ಪ್ರಭು ಹಿಟ್ನಳ್ಳಿ, ಸ್ಥಳೀಯರು
-ವಿಶೇಷ ವರದಿ