Advertisement
ವಾಜಪೇಯಿ ಕನಸಿನ ಯೋಜನೆ ಕೈಬಿಟ್ಟ ಕೇಂದ್ರ ಸರ್ಕಾರ ರಾಜಕೀಯ ಹಿತಾಸಕ್ತಿಯ ಹಾವೇರಿ-ಶಿರಸಿ ರೈಲು ಮಾರ್ಗಕ್ಕೆ ಪರೋಕ್ಷ ಆಸಕ್ತಿ ತೋರಿರುವುದಕ್ಕೆ ಹಾಲಿ ಸಚಿವ, ಕೆನರಾ ಸಂಸದ ಅನಂತಕುಮಾರ್ ಹೆಗಡೆ ಚುನಾವಣಾ ಭವಿಷ್ಯದ ಮೇಲೆ ಕರಿನೆರಳು ಬೀರುವ ಸಾಧ್ಯತೆಗಳಿವೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವನ್ನು ಪರಿಸರ ನೆಪದಲ್ಲಿ ವಿರೋಧಿಸುವ ಪರಿಸರವಾದಿಗಳು, ಶಿರಸಿ-ಹಾವೇರಿ ರೈಲು ಮಾರ್ಗಕ್ಕೆ ಮಾತ್ರ ಜಾಣ ಮೌನವಹಿಸಿರುವುದು ಕರಾವಳಿ ತಾಲೂಕುಗಳ ಹಲವು ಸಂಘಟನೆಗಳಲ್ಲಿ, ರಾಜಕೀಯ ಪಕ್ಷಗಳ ಮುಖಂಡರಲ್ಲಿ ಚರ್ಚೆ ಹುಟ್ಟುಹಾಕಿದೆ. ಸುಪ್ರೀಂ ಕೋರ್ಟ್ ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್ ತೋರಿದ ನಂತರವೂ ಕೇಂದ್ರ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಲಿಲ್ಲ. ಸಂಸದ ಅನಂತಕುಮಾರ್ ಹೆಗಡೆ ಮೌನ ವಹಿಸಿದ್ದಾರೆ.
ಉತ್ತರ ಕನ್ನಡ ರೈಲ್ವೆ ಬಳಕೆದಾರರ ಕ್ರಿಯಾಸಮಿತಿ ಅಧ್ಯಕ್ಷ ಜಗದೀಶ್ ಬಿರ್ಕೋಡಿಕರ್ ಹಾವೇರಿ-ಶಿರಸಿ ರೈಲ್ವೆ ಮಾರ್ಗ ಜಿಂಕೆಗಳ, ಆನೆಗಳ ಕಾರಿಡಾರ್‌ನಲ್ಲಿ ಹಾದು ಹೋಗಲಿದೆ. ಇದು ಪಶ್ಚಿಮ ಘಟ್ಟದ ಪರಿಸರದಲ್ಲಿದೆ. ಒಂದು ಲಕ್ಷ ಮರಗಳ ಮಾರಣ ಹೋಮವಾಗಲಿದ್ದು, ಯೋಜನೆ ವ್ಯಾವಹಾರಿಕ ವಾಗಿ ಸಹ ಅನುಷ್ಠಾನ ಯೋಗ್ಯವಲ್ಲ. ಹಾಗಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಬರುವ ಬಜೆಟ್‌ನಲ್ಲಿ ಸೇರಿಸಿದ್ದೇ ಆದರೆ ಚೆನ್ನೈ ನಲ್ಲಿರುವ ಗ್ರೀನ್ ಟ್ರಿಬ್ಯುನಲ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವುದಾಗಿ ಹೇಳಿದ್ದಾರೆ.
Related Articles
Advertisement
ಹೋರಾಟ ಖಚಿತ: ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರ ತನ್ನ ಬದ್ಧತೆ ವ್ಯಕ್ತಪಡಿಸದಿದ್ದರೆ ಹೋರಾಟ ಖಚಿತ ಎಂದು ರೈಲ್ವೆ ಬಳಕೆದಾರರ ಕ್ರಿಯಾಸಮಿತಿ ಕಾರ್ಯದರ್ಶಿ ಮಾಧವ ನಾಯ್ಕ ಸುಳಿವು ನೀಡಿದ್ದಾರೆ. ವ್ಯನ್ಯಜೀವಿ ಮಂಡಳಿಯ ಓರ್ವ ಸದಸ್ಯ ಮಾತ್ರ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ತಕರಾರು ಎತ್ತಿದ್ದು, ಇದು ಟ್ರಾನ್ಸ್ ಪೋರ್ಟ್ ವ್ಯವಹಾರದ ಲಾಬಿ ಸಹ ಇರಬಹುದು. ರಾಜ್ಯ ಸರ್ಕಾರ, ಅರಣ್ಯ ಇಲಾಖೆ, ಅರಣ್ಯ ಸಚಿವಾಲಯ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಅನುಷ್ಠಾನದ ಪರವಾಗಿದೆ. ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿ ಸಹ ಯೋಜನೆ ಅನುಷ್ಠಾನ ಮಾಡಿ ಎನ್ನುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಡಿಗಲ್ಲು ಹಾಕಿದ ಯೋಜನೆ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಬಿಜೆಪಿ ವಕ್ತಾರ ರಾಜೇಶ್ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಯೋಜನೆಯಲ್ಲಿ ಏನೇನಿದೆ?ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಅನುಷ್ಠಾನ ಘೋಷಣೆಯಾದದ್ದು 1997ರಲ್ಲಿ. ಯೋಜನೆಗೆ ಹುಬ್ಬಳ್ಳಿಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರಲ್ಲಿ ಅಡಿಗಲ್ಲು ಹಾಕಿದ್ದರು. ನಂತರ ಈ ಯೋಜನೆಗೆ ಓರ್ವ ಪರಿಸರವಾದಿ ಅಡ್ಡ ಹಾಕಿದರು. ಸುಪ್ರಿಂಕೋರ್ಟ್ ಸೇರಿದಂತೆ ಹಸಿರು ನ್ಯಾಯಾಲಯದ ಮುಖವನ್ನು ಯೋಜನೆ ಕಂಡಿದೆ. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಚ್ಛಾಶಕ್ತಿಯ ಮೇಲೆ ಅನುಷ್ಠಾನ ನಿಂತಿದೆ. ಹುಲಿಗಳೇ ಇಲ್ಲದ ಹುಲಿ ಸಂರಕ್ಷಿತ ಅರಣ್ಯದ ನೆಪವನ್ನು ಮೂವರು ಪರಿಸರವಾದಿಗಳು ಒಡ್ಡುತ್ತಿದ್ದಾರೆ. ಆನೆಗಳ ಕಾರಿಡಾರ್‌ಗೆ ಸಂರಕ್ಷಣೆ ಒದಗಿಸಲು ಬೇಕಾದಷ್ಟು ಆಧುನಿಕ ತಂತ್ರಜ್ಞಾನಗಳಿವೆ. 34 ಸುರಂಗಗಳನ್ನು ನಿರ್ಮಿಸುವ ಮೂಲಕ ಅರಣ್ಯ ಉಳಿಸಿಕೊಳ್ಳಬಹುದಾಗಿದೆ. 1.73 ಲಕ್ಷ ಮರಗಳಿಗೆ ಪರ್ಯಾಯವಾಗಿ ದೇವಕಾರಿನ 150 ಎಕರೆ ಭೂಮಿಯಲ್ಲಿ ಪರ್ಯಾಯ ಅರಣ್ಯ ಬೆಳೆಸಬಹುದಾಗಿದೆ. ಅಲ್ಲದೇ ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರತಿ ರೈತರಿಗೆ ಹತ್ತು ಮರಗಳನ್ನು ಕಡ್ಡಾಯವಾಗಿ ಬೆಳೆಸುವ ಯೋಜನೆ ರೂಪಿಸಿ ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿಸಬಹುದಾಗಿದೆ. 995 ಹೆಕ್ಟೇರ್ ಭೂ ಸ್ವಾಧೀನ ಮಾಡಬೇಕಾಗಿರುವುದು. ಭೂಮಿ ಬಿಟ್ಟುಕೊಟ್ಟವರಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಬಹುದು. 595.6 ಹೆಕ್ಟೇರ್ ಮಾತ್ರ ಅರಣ್ಯ ಭೂಮಿ ಯೋಜನೆಗೆ ಬೇಕಾಗಿದೆ. 168.289 ಕಿಮೀ. ಉದ್ದದ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಈಗಾಗಲೇ ಕಲಘಟಗಿತನಕ ಅನುಷ್ಠಾನವಾಗಿದೆ. 27 ಮಿಲಿಯನ್ ಟನ್ ಸರಕು ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಅಂಕೋಲಾ ಮೂಲಕ ಕಾರವಾರ ಬಂದರು ತಲುಪಲಿದೆ. ರಫ್ತು ವಹಿವಾಟು ವಿದೇಶಗಳಿಗೆ ಹೆಚ್ಚಲಿದೆ. ಪ್ರಯಾಣಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ತಾಲೂಕಿಗೆ ಬಂದು ಪ್ರವಾಸೋದ್ಯಮ ಚಟುವಟಿಕೆ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ನಾಗರಾಜ ಹರಪನಹಳ್ಳಿ