Advertisement

ಹಳ್ಳೂರು ಹಿಂದಿತ್ತು ಸಿಂಧರ ರಾಜಧಾನಿ

04:28 PM May 30, 2019 | Naveen |

ಎಚ್.ಕೆ. ನಟರಾಜ
ಶಿಲಾಯುಗ ಕಾಲದ ಪಳೆಯುಳಿಕೆಗಳು, ರಾಷ್ಟ್ರಕೂಟರ ಕಾಲದ ಶಾಸನ ಸೇರಿದಂತೆ ಅತ್ಯಮೂಲ್ಯ ಐತಿಹ್ಯಯುಳ್ಳ ಗ್ರಾಮ ಪ್ರಾಚ್ಯವಸ್ತು ಇಲಾಖೆ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿದ್ದು, ಇತಿಹಾಸ ಮಹತ್ವ ಸಾರುವ ಪಳೆಯುಳಿಕೆಗಳು ನಾಶವಾಗುತ್ತಿರುವುದು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹಾವೇರಿ: ಹಿರೇಕೆರೂರು ತಾಲೂಕಿನ ಹಳ್ಳೂರು ಎಂಬ ಗ್ರಾಮ ಹಿಂದೆ ಚಾಲುಕ್ಯರ ಸಂಬಂಧಿಗಳಾಗಿದ್ದ ಸಿಂಧರ ‘ರಾಜಧಾನಿ’ಯಾಗಿತ್ತು. ಹಲವು ರಾಜರುಗಳು ಸತತ ಆಕ್ರಮಣನಡೆಸಿದ್ದರಿಂದ ಈ ಗ್ರಾಮ ಯುದ್ಧಭೂಮಿಯಾಗಿತ್ತು.

ಹೌದು. ಇಲ್ಲಿಯ ಹಾಳಾದ ಕೋಟೆಯ ಕಲ್ಲುಗಳು, ಭಗ್ನಗೊಂಡ ವಿಗ್ರಹಗಳು, ಮಣ್ಣಿನಲ್ಲಿ ಹುದುಗಿ ಹೋಗಿರುವ ಶಿಲಾಯುಧಗಳು, ಮಡಿಕೆಗಳು ಕಳೆದು ಹೋದ ಇತಿಹಾಸ ಪುಟಗಳನ್ನು ತೆರೆದಿಡುತ್ತವೆ. ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಕಬ್ಬಿಣದ ಆಯುಧಗಳನ್ನು ಉಪಯೋಗಿಸಿದ ಮನುಜ ಕುಲದ ನೆಲೆ ಎಂಬ ಹೆಮ್ಮೆ ಈ ಗ್ರಾಮಕ್ಕಿದೆ. ಹಳ್ಳೂರಿನ ಶ್ರೀಲಕ್ಷ್ಮೀ ರಂಗನಾಥ ದೇವಸ್ಥಾನ ಮುಂಭಾಗದಲ್ಲಿರುವ ‘ಗೋಸಾಸು’ ಶಿಲಾಶಾಸನ ಇಲ್ಲಿಯ ರಾಷ್ಟ್ರಕೂಟರ ಆಡಳಿತವನ್ನು ಖಚಿತಪಡಿಸುತ್ತದೆ. ತದನಂತರ ಬೆಳಗುತ್ತಿಯ ಸಿಂಧರು ಹಳ್ಳೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರು. ಅವರ ಆಡಳಿತಕ್ಕೆ ಮಾಸೂರು, ಉಡವಟ್ಟಿ ಹಾಗೂ ಕುಂದೂರು ವಿಭಾಗಗಳು ಒಳಪಟ್ಟಿದ್ದವು. ಬೆಳಗುತ್ತಿಯ ಸಿಂಧರು ಚಾಲುಕ್ಯರ ಸಂಬಂಧಿಕರಾಗಿದ್ದರು. ಈ ಮನೆತನದ ಈಶ್ವರದೇವ (ಸು:1155-1185), ಇವನ ಮಕ್ಕಳಾಗಿದ್ದ ಪಾಂಡ್ಯದೇವ, ಮಲ್ಲಿದೇವ ಹಾಗೂ ಮೊಮ್ಮಕ್ಕಳಾದ ಕೇಶವದೇವ ಮತ್ತು ಬೀರದೇವ ಕ್ರಮವಾಗಿ ಹಳ್ಳೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರು ಎಂಬುದನ್ನು ರಟ್ಟಿಹಳ್ಳಿಯ ಶಾಸನ ಖಚಿತಪಡಿಸುತ್ತದೆ.

ಇತಿಹಾಸ ಹೇಳುವ ಶಾಸನಗಳು: ರಾಜಧಾನಿ ಹಳ್ಳೂರು ಮೇಲೆ ಸೇವಣರು, ಹೊಯ್ಸಳರು ಹಾಗೂ ಕಲಚೂರಿಗಳು ಪದೇ ಪದೇ ದಂಡೆತ್ತಿ ಬರುತ್ತಿದ್ದರಿಂದ ಅವರ ವಿರುದ್ಧ ಯುದ್ಧ ಮಾಡುವುದರಲ್ಲೇ ಕಾಲಹರಣ ಮಾಡಬೇಕಾಯಿತು. ಅವರ ಸತತ ಆಕ್ರಮಣದಿಂದ ಈ ಗ್ರಾಮ ಯುದ್ಧ ಭೂಮಿಯಾಗಿತ್ತು. ಹೊಯ್ಸಳರ ರಾಣಿಯಾದ ಉಮಾದೇವಿ (ಬಲ್ಲಾಳನ ಹೆಂಡತಿ) ಸಹ ಸಿಂಧರ ಮೇಲೆ ಯುದ್ಧ ಮಾಡಿ ಜಯ ಗಳಿಸಿದ್ದಳು. ಕ್ರಿಶ 1198ರಲ್ಲಿ ಎರಡನೇ ಬಲ್ಲಾಳ ಹಳ್ಳೂರಿನಲ್ಲಿದ್ದನು. ತದನಂತರ ಈ ಗ್ರಾಮ ಟಿಪ್ಪು ಸುಲ್ತಾನ್‌, ಮರಾಠರು ಹಾಗೂ ಹಾವನೂರು ಹನುಮಂತಗೌಡ ಸೇರಿದಂತೆ ಅನೇಕರ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷರ ಆಡಳಿತದಲ್ಲಿ ಮುಂಬಯಿ ಇಲಾಖೆಗೆ ಒಳಪಡುವ ಕೋಡ ತಾಲೂಕಿನ ಕಸಬಾವಾಗಿತ್ತು ಎಂಬ ಕುತೂಹಲಕಾರಿಯಾದ ಇತಿಹಾಸವನ್ನು ಈ ಗ್ರಾಮದಲ್ಲಿರುವ‌ ಶಾಸನಗಳು ಹೇಳುತ್ತವೆ.

ಹಳ್ಳೂರಿನ ಬೆಟ್ಟದ ಮೇಲೆ ಪುರಾತನವಾದ ಉದ್ಭವ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಭೂತಪ್ಪಸ್ವಾಮಿ, ವರಹಸ್ವಾಮಿ, ಆಂಜನೇಯ ಸ್ವಾಮಿ ಎಂಬ ನಾಲ್ಕು ದೇವಾಲಯಗಳಿವೆ. ಕಾಡಿನಲ್ಲಿ ವಾಸಿಸುತ್ತಿದ್ದ ಜನರ ಆರಾಧ್ಯ ದೈವ ಉದ್ಭವಮೂರ್ತಿಯು ಬಹುಶಃ ಹೊಯ್ಸಳರ ಕಾಲದಲ್ಲಿ ಶ್ರೀಲಕ್ಷ್ಮೀ ರಂಗನಾಥ ಎಂಬ ಹೆಸರಿನೊಂದಿಗೆ ಪ್ರಸಿದ್ಧಿ ಪಡೆದಿರುವ ಸಾಧ್ಯತೆ ಇದೆ. ಇವರ ಕಾಲದಲ್ಲಿಯೇ ಈ ಉದ್ಭವಮೂರ್ತಿಗೆ ದೇವಸ್ಥಾನ ನಿರ್ಮಾಣವಾಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

Advertisement

ಕನಕ ಭೇಟಿ: 15ನೇ ಶತಮಾನದ ದಾಸಶ್ರೇಷ್ಠ ಕನಕದಾಸರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು ಎಂಬ ಐತಿಹ್ಯ ಇಲ್ಲಿದೆ. ಟಿಪ್ಪುವಿನ ಕಾಲದದಲ್ಲಿ ಹಾಳಾಗಿದ್ದ ರಂಗನಾಥನ ದೇವಸ್ಥಾನವನ್ನು ಕೂಡಲಗಿಯ ಸ್ವಾಮಿಗಳು ಪುನರ್‌ ನಿರ್ಮಿಸಿದರು. ಆದ್ದರಿಂದ ಹಳ್ಳೂರ ಗ್ರಾಮವನ್ನು ಹಾವನೂರಿನ ಹನುಮಂತಗೌಡನು ಮಠಕ್ಕೆ ದಾನವಾಗಿ ನೀಡಿದನು. ಶ್ರೀಲಕ್ಷ್ಮೀ ರಂಗನಾಥನ ‘ಹೂವಿನ ಅಪ್ಪಣೆ’ ಸುತ್ತಮುತ್ತಲಿನ ಜನರಲ್ಲಿ ಪ್ರಸಿದ್ಧಿ ಪಡೆದಿದೆ. ಗ್ರಾಮದ ಶ್ರೀಲಕ್ಷ್ಮೀ ರಂಗನಾಥನ ಬಳಿ ಪಾಳು ಬಿದ್ದ ಒಂದು ವಿಗ್ರಹವನ್ನು ವಿಜಯನಗರದ ಕಾಲಕ್ಕೆ ಸೇರಿದ ಆನೆಗುಂದಿಯ ಯತಿಗಳ ವಿಗ್ರಹವಾಗಿದ್ದು ಆ ಯತಿಗಳು ಈ ಸ್ಥಳದಲ್ಲಿ ತಪಸ್ಸುಗೈದಿರಬಹುದೆಂದು ಸಂಶೋಧಕ ಡಾ| ರಮೇಶ ತೆವರಿ ಗುರುತಿಸಿದ್ದಾರೆ.

1963ರಲ್ಲಿ ಸಂಶೋಧಕರಾದ ಎಂ.ಎಸ್‌. ನಾಗರಾಜರಾವ್‌ ಹಳ್ಳೂರಿನ ಕೋಟೆ ಭಾಗದಲ್ಲಿ ಉತVನನ ನಡೆಸಿ ನವಶಿಲಾಯುಗದ ಅನೇಕ ಕುರುಹುಗಳನ್ನು ಪತ್ತೆ ಮಾಡಿದ್ದರು. ಇಲ್ಲಿಯ ಆದಿವಾಸಿ ಜನರ ಗುಂಪೊಂದು ಕಬ್ಬಿಣದ ಆಯುಧ ಉಪಯೋಗಿಸಿದ್ದರು ಎನ್ನಲು ಅನೇಕ ಕಬ್ಬಿಣದ ಆಯುಧಗಳು ಇಲ್ಲಿ ದೊರೆತಿದ್ದವು. ಈ ಸಂಶೋಧನೆ ದಕ್ಷಿಣ ಭಾರತದಲ್ಲಿಯ ಸಂಶೋಧಕರಿಗೆ ಸಂಚಲನ ಮೂಡಿಸಿತ್ತು. ಇಂಥ ಐತಿಹಾಸಿಕ ಮಹತ್ವವುಳ್ಳ ಗ್ರಾಮದಲ್ಲಿನ ಪಳೆಯುಳಿಕೆಗಳ ರಕ್ಷಣೆಗೆ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next