ಹಾವೇರಿ: ಸರ್ಕಾರ ಜನರಿಗೆ ಸೌಲಭ್ಯ ಕಲ್ಪಿಸಲು ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಅದು ಸೌಲಭ್ಯ ಸದ್ಭಳಕೆಯಾಗದಿದ್ದರೆ?ಹೌದು. ಇಲ್ಲಿ ಆಗಿದ್ದೂ ಇದೆಯೇ. ಕುರಿ ಮಾರಾಟದಲ್ಲಿ ಕುರಿಗಾಹಿಗಳು ಮೋಸವಾಗಬಾರದು ಎಂಬ ಉದ್ದೇಶದಿಂದ ಕಳೆದ ಒಂದು ವರ್ಷದ ಹಿಂದೆಯೇ ಸ್ಥಳೀಯ ಶ್ರೀ ಶಿವಲಿಂಗೇಶ್ವರ ಜಾನುವಾರು ಮಾರುಕಟ್ಟೆಯ ಆವರಣದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 50 ಲಕ್ಷ ವೆಚ್ಚ ಮಾಡಿ ಸುಸಚ್ಚಿತ ಕುರಿ ಮಾರಾಟ ಕೇಂದ್ರ ಕಟ್ಟಡ ನಿರ್ಮಿಸಲಾಗಿತ್ತು. ಇಲ್ಲಿ ಕುರಿ ತೂಕ ಮಾಡುವ ಯಂತ್ರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸರ್ಕಾರ ಒದಗಿಸಲಾಗಿತ್ತು. ಆದರೆ ಈ ಕುರಿ ಮಾರುಕಟ್ಟೆ ಕೇಂದ್ರದ ಉಪಯೋಗವನ್ನು ಯಾರೂ ಪಡೆದಿಲ್ಲ. ಒಂದು ದಿನವೂ ಇಲ್ಲಿ ಕುರಿ ತೂಕ ಮಾಡಿ ಮಾರಾಟ ಮಾಡುವ ಕೆಲಸ ಆಗಿಲ್ಲ. ಹೀಗಾಗಿ ಇದಕ್ಕಾಗಿ ಕಟ್ಟಿದ ಕಟ್ಟಡ ಹಂದಿ, ನಾಯಿ, ಬಿಡಾಡಿ ದನಗಳ ವಾಸಸ್ಥಳವಾಗಿ ಮಾರ್ಪಟ್ಟಿದೆ.
ಹಳೆ ಪದ್ಧತಿಯಲ್ಲೇ ವ್ಯಾಪಾರ: ಪ್ರತಿ ಗುರುವಾರ ಬೆಳಗ್ಗೆ ಕುರಿ, ಮೇಕೆಗಳ ವ್ಯಾಪಾರ ನಡೆಯುತ್ತಿದೆ. ಕುರಿ, ಮೇಕೆಗಳ ವ್ಯಾಪಾರ ಅತಿ ಹಳೆಯ ಪದ್ಧತಿಯಾದ ಕುರಿಯ ನಡವನ್ನು ಕೈಯಿಂದ ಹಿಡಿದು ದರ ನಿಗದಿಪಡಿಸುವ ಪದ್ಧತಿ ಇದೆ. ಈ ಪದ್ಧ‚ತಿಯಲ್ಲಿ ದಲ್ಲಾಳಿಗಳಿಂದ ಕುರಿ ಮಾರಾಟಗಾರರಿಗೆ ಮೋಸವಾಗುವ ಸಾಧ್ಯತೆ ಇರುವುದರಿಂದ ಎಪಿಎಂಸಿ ಆಧುನಿಕ ಯಂತ್ರೋಪಕರಣ, ನೀರು, ನೆರಳು ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿದೆಯಾದರೂ ಅದನ್ನು ಅಧಿಕಾರಿಗಳು ಈವರೆಗೂ ಕಡ್ಡಾಯವಾಗಿ ಬಳಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಕುರಿಯ ನಡವನ್ನು ಹಿಡಿದು ದರ ನಿಗದಿಪಡಿಸುವ ಪದ್ಧತಿ ಇಲ್ಲಿ ಇನ್ನೂ ಜೀವಂತವಾಗಿದೆ. ಸರ್ಕಾರ ಲಕ್ಷಾಂತರ ರೂ. ವ್ಯಯಿಸಿ ಕುರಿ ಮಾರುಕಟ್ಟೆಗೆ ಆಧುನಿಕ ವ್ಯವಸ್ಥೆ ಕಲ್ಪಿಸಿದ್ದರೂ ಅಧಿಕಾರಿಗಳು ಮಾತ್ರ ಅದನ್ನು ಕಟ್ಟುನಿಟ್ಟಾಗಿ ಬಳಸಿಕೊಳ್ಳುವಂತೆ ಮಾಡಿ ಕುರಿ ಮಾರಾಟಗಾರರಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಆಸಕ್ತಿ ವಹಿಸದೆ ಇರುವುದು ಖೇದಕರ ಸಂಗತಿ.
ಎಪಿಎಂಸಿ ಸಮಿತಿ ನಿರ್ಲಕ್ಷ್ಯ : ಜಿಲ್ಲೆಯಲ್ಲಿ ಸಾಕಷ್ಟು ಕುರಿಗಾಹಿಗಳು ಕುರಿಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಕುರಿ, ಮೇಕೆಗೆ ಯೋಗ್ಯ ಬೆಲೆ ದೊರಕದೇ ಸಾಕಾಣಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ಲಕ್ಷ್ಯ ತೋರುತ್ತಿದೆ. ಇನ್ನಾದರೂ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ತೂಕದ ಲೆಕ್ಕದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಕುರಿಗಾಹಿಗಳ ಆಗ್ರಹವಾಗಿದೆ.
ಕುರಿ, ಮೇಕೆಗಳ ವ್ಯಾಪಾರಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ. ದಲ್ಲಾಳಿಗಳು, ವ್ಯಾಪಾರಸ್ಥರು ಬಾಯಿಗೆ ಬಂದಂತೆ ದರ ಕೇಳುತ್ತಾರೆ. ಮಾರುಕಟ್ಟೆಯಲ್ಲಿ ತೂಕದ ವ್ಯವಸ್ಥೆ ಎಲ್ಲ ಮಾಡಿದ್ದರೂ ಅಧಿಕಾರಿಗಳು ಅದನ್ನು ಕಡ್ಡಾಯವಾಗಿ ಇದೇ ರೀತಿ ವ್ಯಾಪಾರ ಮಾಡಲು ಮುಂದಾಗಿಲ್ಲ. ದಲ್ಲಾಳಿಗಳು ಈ ಪದ್ಧತಿಯನ್ನು ವಿರೋಧಿಸುತ್ತಾರೆ. ಆದರೆ, ಅ ಧಿಕಾರಿಗಳು ದಲ್ಲಾಳಿಗಳ ಮಾತಿಗೆ ಬೆಲೆ ಕೊಡದೆ ಕಡ್ಡಾಯವಾಗಿ ತೂಕದ ವ್ಯವಸ್ಥೆ ಜಾರಿಗೆ ತರಬೇಕು.
.
ಫಕ್ಕಿರಪ್ಪ, ಕುರಿ ಸಾಕಾಣಿಕೆದಾರ.
ವೈಜ್ಞಾನಿಕ ರೀತಿಯಲ್ಲಿ ಕುರಿ ಮಾರಾಟ ಮಾಡಿದರೆ ರೈತರಿಗೆ ಆಗುವ ನಷ್ಟ ತಪ್ಪಿಸಬಹುದೆಂಬ ಉದ್ದೇಶಕ್ಕಾಗಿಯೇ ಕುರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಮಾರುಕಟ್ಟೆಯಲ್ಲಿ ತೂಕದ ವ್ಯವಸ್ಥೆಯನ್ನು ಜಾರಿಗೆ ತರಬೇಕು ಹಾಗೂ ಮಾರುಕಟ್ಟೆ ಕೇಂದ್ರದ ಸದ್ಬಳಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಜತೆಗೆ ಕುರಿ ಮಾರುಕಟ್ಟೆ ಇರುವಲ್ಲೇ ಅಗತ್ಯವಾದ ವಿಸ್ತಾರ ಜಾಗದ ವ್ಯವಸ್ಥೆ ಮಾಡಿ ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು.
.ರಮೇಶ ಚಾವಡಿ, ಅಧ್ಯಕ್ಷ, ಎಪಿಎಂಸಿ.