Advertisement

ಬಿಸಿಯೂಟ ತಯಾರಕರ ಕಡೆಗಣೆಸಿದ ಸರ್ಕಾರ

11:22 AM Feb 15, 2019 | |

ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಂಬಳ ಹೆಚ್ಚಿಸದೇ ಇರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ (ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಕಾಗಿನೆಲೆ ರಸ್ತೆಯಲ್ಲಿರುವ ಮುರುಘರಾಜೇಂದ್ರ ಮಠದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹಾವೇರಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ನೇತೃತ್ವದಲ್ಲಿ 19-11-2018 ರಂದು ದೆಹಲಿಯ ಸಂಸತ್‌ ಭವನದ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಬಿಸಿಯೂಟ ತಯಾರಕರ ಸಂಬಳ ಹೆಚ್ಚಿಸಬೇಕು ಎಂದು ಒತ್ತಾಯ ಮಾಡಲಾಗಿತ್ತು. ಆದರೆ, ಪ್ರತಿಭಟನೆಗೆ ಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ, ದುಡಿಯುವ ಮಹಿಳೆಯರ ಸಂಬಳ ಹೆಚ್ಚಿಸದೆ ಅನ್ಯಾಯ ಮಾಡಿದೆ ಎಂದು ದೂರಿದರು.

ಬೆಂಗಳೂರಿನಲ್ಲಿ 2-12-2018ರಂದು ಪ್ರತಿಭಟನೆ ನಡೆಸಿ ಪ್ರೀಡ್‌ಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿತ್ತು. ಆ ಸಮಯದಲ್ಲಿ ಮುಖ್ಯಮಂತ್ರಿಗಳು 3-12-2018 ರಂದು ಸಂಘಟನೆ ಪದಾ ಧಿಕಾರಿಗಳೊಂದಿಗೆ ಸಭೆ ನಡೆಸಿ, 2019-2020 ಬಜೆಟ್‌ನಲ್ಲಿ ವೇತನ ಹೆಚ್ಚಿಸುವ ಭರವಸೆ ನೀಡಿದ್ದರು. ಅವರ ಭರವಸೆ ಮಾತುಗಳನ್ನು ನಂಬಿ ಅಂದು ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಪಡೆದುಕೊಂಡಿದ್ದೇವು. ಆದರೆ, ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ ನಲ್ಲಿ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಬಜೆಟ್‌ನಲ್ಲಿ ಸಂಬಳ ಹೆಚ್ಚಳ ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿಯವರು ಅದನ್ನು ಮಾಡದೇ, ಅಂದಿನ ಅಹೋರಾತ್ರಿ ಧರಣಿಯನ್ನು ಹತ್ತಿಕ್ಕಲು ಸುಳ್ಳು ಭರಸವೆ ನೀಡಿದರು ಎಂಬ ಅನುಮಾನ ಮೂಡುತ್ತಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ನುಡಿದಂತೆ ನಡೆಯುವುದಿಲ್ಲ ಎಂಬ ಬಲವಾದ ಆರೋಪವಿತ್ತು. ಬಜೆಟ್‌ ಅಧಿ ವೇಶನ ಬಳಿಕ ಅದು ಮತ್ತೊಮ್ಮೆ ನಿಜ ಎಂಬುದು ಸಾಬೀತಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈಗಲಾದರೂ ಬಿಸಿಯೂಟ ತಯಾರಕರ ಸಂಬಳ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಜಿಲ್ಲಾಧ್ಯಕ್ಷ ಜಿ.ಡಿ. ಪೂಜಾರ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ, ಬಿಸಿಯೂಟ ತಯಾರಕರನ್ನು ಕಾಯಂಗೊಳಿಸುತ್ತೇನೆ ಎಂಬ ಭರವಸೇ ನೀಡಿದ್ದರು. ಕಾಯಂಗೊಳಿಸುವುದಿರಲಿ, ಸಂಬಳ ಹೆಚ್ಚಳ ಮಾಡದೇ, ಮೋಸ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಿಸಿಯೂಟ ನೌಕರರು ತುಂಬಾ ನಂಬಿಕೆ ಇಟ್ಟಿದ್ದರು. ಆ ನಂಬಿಕೆ ಉಳಿಸಿಕೊಳ್ಳುವಂಥ ಕೆಲಸವನ್ನು ಮುಖ್ಯಮಂತ್ರಿಯವರು ಮಾಡಬೇಕು ಎಂದರು.

Advertisement

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರೇಖಮ್ಮಾ ದನ್ನೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುನಾಥ ಲಕ್ಮಾಪೂರ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಸರೋಜಮ್ಮಾ ಹಿರೇಮಠ, ಲಲಿತಾ ಬುಶೇಟ್ಟಿ, ರಾಜೇಶ್ವರಿ ದೊಡ್ಡಮನಿ, ಲತಾ ಹಿರೇಮಠ, ನಿರ್ಮಲಾ ಬಂಕಾಪುರಮಠ, ಪ್ರೇಮಾ ತಡಸ, ತಾಲೂಕು ಸಂಚಾಲಕರಾದ ವಿದ್ಯಾ ಸಿದ್ದಪ್ಪನವರ, ಲಲಿತಾ ಕಾಯಕದ ಸೇರಿದಂತೆ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next