Advertisement
ಹಾವೇರಿ: ಸಂಘಟನಾ ಚತುರ, ಪಕ್ಷ ನಿಷ್ಠ ನಾಯಕ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ನಾಡಿನ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಸಿಎಂ ತವರು ಕ್ಷೇತ್ರದ ಜನರಲ್ಲಿ ಹರ್ಷ ಮೂಡಿಸಿದೆ. ಇದರ ಜತೆ ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವ ಹೊಸ ಯೋಜನೆಗಳನ್ನು ಕೊಡುಗೆಯಾಗಿ ನೀಡಲಿದ್ದಾರೆಂಬ ನೀರಿಕ್ಷೆಯನ್ನು ಹುಟ್ಟು ಹಾಕಿದೆ.
Related Articles
Advertisement
ಹೊಸ ತಾಲೂಕು ರಚನೆ: ಜಿಲ್ಲೆಯಲ್ಲಿ ಈಗಾಗಲೇ ರಟ್ಟಿಹಳ್ಳಿ ಹೊಸ ತಾಲೂಕಾಗಿದೆ. ಆದರೆ ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ತಾಲೂಕಾಗಿ ಕಾರ್ಯ ನಿರ್ವಹಿಸುವಷ್ಟು ಸಮರ್ಥವಾಗಿಲ್ಲ. ರಟ್ಟಿಹಳ್ಳಿಯಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣ ಹಾಗೂ ವಿವಿಧ ಕಚೇರಿ ಕಟ್ಟಡಗಳಿಗೆ ವಿಶೇಷ ಅನುದಾನ ನೀಡಬಹುದು. ಇದರ ಜತೆಗೆ ಅಕ್ಕಿಆಲೂರು, ಗುತ್ತಲ, ಬಂಕಾಪುರಗಳನ್ನು ತಾಲೂಕಾಗಿ ಘೋಷಿಸಬಹುದು ಎಂಬ ನಿರೀಕ್ಷೆ ಹೆಚ್ಚಿದೆ.
ವೈದ್ಯಕೀಯ ಕಾಲೇಜು-ಮೆಗಾ ಡೇರಿ ಘಟಕ: ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ 478.75 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ. ಆದರೆ ಕಟ್ಟಡದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ನಿರೀಕ್ಷಿಸಿದಂತೆ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಸದ್ಯ ಬೊಮ್ಮಾಯಿ ಅವರೇ ಮುಖ್ಯಮಂತ್ರಿಗಳಾಗಿದ್ದು, ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿ ವೇಗ ಪಡೆಯುವ ನಿರೀಕ್ಷೆ ಹುಟ್ಟಿಸಿದೆ. ಅದೇ ರೀತಿ ಜಿಲ್ಲೆಗೆ ಮಂಜೂರಾಗಿರುವ 90 ಕೋಟಿ ವೆಚ್ಚದ ಹಾಲು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಅನುಮತಿ ದೊರಕಿದ್ದು, ಈ ಯೋಜನೆಗೆ ಸರ್ಕಾರದ ವತಿಯಿಂದ 15 ಕೋಟಿ ರೂ.ಅನುದಾನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮೆಗಾ ಡೇರಿ ಘಟಕದ ನಿರ್ಮಾಣ ವೇಗ ಪಡೆಯುವ ನೀರಿಕ್ಷೆ ಮೂಡಿಸಿದೆ.
ಇತರೆ ನಿರೀಕ್ಷೆಗಳು: ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಶಿಗ್ಗಾವಿ, ಸವಣೂರು ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿ ಪೂರ್ಣಗೊಳಿಸುವುದು, ಹಾನಗಲ್ಲ ಭಾಗದಲ್ಲಿ ಮಾವು ಸಂಸ್ಕರಣಾ ಘಟಕ, ಉದ್ಯೋಗ ಸೃಜನೆಗಾಗಿ ಮಂಜೂರಾಗಿರುವ ಜಿಟಿಡಿಸಿ ತರಬೇತಿ ಕಟ್ಟಡಕ್ಕೆ ಅನುದಾನ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆ ಹುಟ್ಟು ಹಾಕಿದೆ.