Advertisement

ಅಗತ್ಯ ವೈದ್ಯಕೀಯ ಉಪಕರಣ ಖರೀದಿಸಿ

03:30 PM Apr 15, 2020 | Naveen |

ಹಾವೇರಿ: ಕೋವಿಡ್‌ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ವೈದ್ಯಕೀಯ ಉಪಕರಣಗಳನ್ನು ವಿಪತ್ತು ನಿರ್ವಹಣಾ ಅನುದಾನದಲ್ಲಿ ಖರೀದಿಸಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಮಾಸ್ಕ್, ವೆಂಟಿಲೇಟರ್‌, ಕೇಂದ್ರೀಕೃತ ಆ್ಯಕ್ಸಿಜನ್‌ ವ್ಯವಸ್ಥೆಗೆ ಯಾವುದೇ ತರಹದ ಹಿಂಜರಿಕೆ ಬೇಡ. ಮುಂದಿನ ಎರಡು ವಾರಗಳ ಕಾಲ ಅತ್ಯಂತ ಗಂಭೀರವಾಗಿ ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಕೋವಿಡ್‌ ಸೋಂಕು ಪತ್ತೆಯಾದ ತಕ್ಷಣ ಅವರನ್ನು ಸಾಗಾಣಿಕೆಗೆ ಪ್ರತ್ಯೇಕವಾದ ಆಂಬ್ಯುಲನ್ಸ್‌ ಗಳನ್ನು ಕಾಯ್ದಿರಿಸಿಕೊಳ್ಳಬೇಕು. ಜಿಲ್ಲೆಯ ಯಾವುದೇ ಮೂಲೆಯಿಂದ ಕರೆ ಬಂದರೂ ಅರ್ಧತಾಸಿನೊಳಗೆ ಆಂಬ್ಯುಲನ್ಸ್‌ಗಳು ಧಾವಿಸಬೇಕು ಎಂದರು.

ಗಡಿ ಪ್ರದೇಶದಲ್ಲಿ ತುರ್ತು ಆರೋಗ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗಬಾರದು. ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳನ್ನು ಕಡ್ಡಾಯ ತಪಾಸಣೆ ಮಾಡಿ ಮೂರು ಜನರಿಗಿಂತ ಹೆಚ್ಚು ಜನರು ಪ್ರಯಾಣಿಸದಂತೆ ಕ್ರಮ ವಹಿಸಬೇಕು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಿಸಬೇಕು. ಯಾವುದೇ ಸಂದರ್ಭದಲ್ಲೂ ಮಾಹಿತಿ ಇಲ್ಲದೆ ಗಡಿಯೊಳಗೆ ನುಸುಳಬಾರದು. ಸಂಶಯಾತ್ಮಕ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಿ ಎಂದು ಸೂಚನೆ ನೀಡಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಮಾತನಾಡಿ, ಲಾಕ್‌ಡೌನ್‌ ವ್ಯವಸ್ಥೆ, ಗಡಿಭಾಗದಲ್ಲಿ ತಪಾಸಣೆ ಮತ್ತಷ್ಟು ಬಿಗಿಗೊಳಿಸಬೇಕು. ಹಳ್ಳಿಗಳಿಗೆ ಹೊರ ರಾಜ್ಯದಿಂದ ವ್ಯಕ್ತಿಗಳು ಆಗಮಿಸುತ್ತಿದ್ದಾರೆ. ಇವರ ಯಾವುದೇ ತಪಾಸಣೆ ನಡೆದಿಲ್ಲ. ಜನರು ಅನಗತ್ಯ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಮದ್ಯ ಮಾರಾಟ ನಿಷೇಧದಿಂದ ಗ್ರಾಮೀಣ ಭಾಗದಲ್ಲಿ ಕಳ್ಳಭಟಿ ಮಾರಾಟ ಹೆಚ್ಚಾಗಿದೆ. ಅಬಕಾರಿ ಇಲಾಖೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಉಚಿತ ಹಾಲು ವಿತರಣೆ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಜಿಪಂ ಸಿಇಒ ರಮೇಶ ದೇಸಾಯಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಎಸ್ಪಿ ಕೆ.ಜಿ. ದೇವರಾಜು, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಡಿಎಚ್‌ಒ ಡಾ| ರಾಜೇಂದ್ರ ದೊಡ್ಮನಿ ಇನ್ನಿತರರಿದ್ದರು. ಆರೋಗ್ಯ ಸಚಿವರು ಕೋವಿಡ್‌ ಆಸ್ಪತ್ರೆಯನ್ನಾಗಿಸಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿಶೇಷ ವಾರ್ಡ್‌ ಹಾಗೂ ಐಸೋಲೇಷನ್‌ ವಾರ್ಡ್‌ಗಳನ್ನು ಪರಿಶೀಲಿಸಿದರು.

Advertisement

ಕ್ಯಾನ್ಸರ್‌, ಡಯಾಲಿಸಿಸ್‌, ಹೆರಿಗೆ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆ, ರೋಗಿಗಳಿಗೆ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ವೈದ್ಯಾಧಿ ಕಾರಿಗಳಿಗೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳನ್ನು ತೆರೆಯದಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಿ ಲೈಸನ್ಸ್‌ ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಬಿ. ಶ್ರೀರಾಮುಲು, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next