ಹಾವೇರಿ: ಮಹಾರಾಷ್ಟ್ರದ ಕನ್ನಡ ವಿರೋಧಿ ಜನರಿಗೆ ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಉತ್ತರ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗುವುದು. ಕನ್ನಡ ನಾಡು-ನುಡಿ, ಜಲ, ಸಂಸ್ಕೃತಿ ಪ್ರತಿಬಿಂಬಿಸುವ ಅಭೂತಪೂರ್ವ ಕಾರ್ಯಕ್ರಮ ನಡೆಸಲಾಗುವುದು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಹೇಳಿದರು.
ಸ್ಥಳೀಯ ಜಿಪಂ ಸಭಾಂಗಣದಲ್ಲಿ ರವಿವಾರ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸಭೆಯಲ್ಲಿ ವಿವಿಧ ಸಮಿತಿಗಳನ್ನು ಪ್ರಕಟಿಸಿ ಮಾತನಾಡಿದ ಅವರು, ಹಾವೇರಿಯಲ್ಲಿ ಜ.6,7ಮತ್ತು8ರಂದುಜರುಗಲಿರುವ86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಸರ್ಕಾರ ಮತ್ತುಕನ್ನಡ ಸಾಹಿತ್ಯ ಪರಿಷತ್ ಸಮನ್ವಯದೊಂದಿಗೆ ಪಕ್ಷಾತೀತವಾಗಿ ಎಲ್ಲರೂ ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಬೇಕು. ಸಮ್ಮೇಳನ ಮುಗಿಯುವವರೆಗೂ ಅಧಿಕಾರಿಗಳು ರಜೆ ತೆಗೆದುಕೊಳ್ಳದೇ ತಮ್ಮ ತಮ್ಮ ಸಮಿತಿಗೆ ಸೂಚಿಸಿದ ಕೆಲಸ ನಿರ್ವಹಿಸಬೇಕು. ಕಸಾಪ ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಲಿದೆ. ವಸತಿ, ಊಟ, ಸಾರಿಗೆ ಮುಂತಾದ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ. ಯಾವುದೇ ಕೊರತೆ, ಲೋಪವಿಲ್ಲದಂತೆ ಸಮನ್ವಯದಿಂದ ಸಮ್ಮೇಳನ ನಡೆಸಲಾಗುವುದು ಎಂದರು.
ಸಾಹಿತ್ಯ ಸಮ್ಮೇಳನಕ್ಕೆ ಈ ಹಿಂದೆ ಗುರುತಿಸಲಾದ ಜಾಗವನ್ನು ತಕರಾರು ಕಾರಣದಿಂದ ಬದಲಾಯಿಸಲಾಗಿದೆ. ಹಳೆ ಪಿಬಿ ರಸ್ತೆಗೆ ಹೊಂದಿಕೊಂಡಂತೆ ಹೆದ್ದಾರಿ ಸಮೀಪವಿರುವ ಅಜ್ಜಯ್ಯನ ಗುಡಿ ಎದುರಿನ ವಿಶಾಲವಾದ128 ಎಕರೆ ಜಾಗದಲ್ಲಿ ನಡೆಸಲು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದೆ. 30 ರಿಂದ 40 ಸಾವಿರ ಆಸನ ಸಾಮರ್ಥ್ಯದ ಮುಖ್ಯ ವೇದಿಕೆ ಹಾಗೂ 3000 ಆಸನ ಸಾಮರ್ಥ್ಯದ ತಲಾ ಎರಡು ಸಮನಾಂತರ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ವಸ್ತು ಪ್ರದರ್ಶನ ಮಳಿಗೆ, ಆಹಾರ ಮಳಿಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಒಂದೇ ಆವರಣದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಕಸಾಪ ಅಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಮಾತನಾಡಿ, ಸಮ್ಮೇಳನಕ್ಕೆ ಕಾಲ ಕಡಿಮೆ ಇದೆ. ಸಿದ್ಧತೆಯ ವೇಗ ಜಾಸ್ತಿಯಾಗಬೇಕು. ಪ್ರತಿನಿಧಿಗಳ ನೋಂದಣಿಗೆ ವಿಶೇಷ ಆ್ಯಪ್ ರೂಪಿಸಲಾಗಿದೆ. ಶೀಘ್ರವೇ ನೋಂದಣಿ ಆರಂಭಿಸಲಾಗುವುದು. ಸಾಹಿತ್ಯ ಪರಿಷತ್‌ನ ಸದಸ್ಯರಿಗೆ ಮಾತ್ರ ಪ್ರತಿನಿಧಿ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. 500 ರೂ. ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ದಸರಾಕ್ಕಿಂತ ಮಿಗಿಲಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಎಲ್ಲ ಜಿಲ್ಲೆಯಿಂದ ವೈವಿಧ್ಯಮಯ ಕಲಾತಂಡಗಳು, ಸ್ತಬ್ಧಚಿತ್ರಗಳನ್ನು ಆಹ್ವಾನಿಸಲಾಗಿದೆ. ಮೌಲಿಕವಾದ ಗೋಷ್ಠಿ ಆಯೋಜಿಸಲಾಗುವುದು. ವಿಶ್ವದ ಎಲ್ಲೆಡೆಯಿಂದ 86 ಜನ ಕನ್ನಡ ಸಾಧಕರನ್ನು ಆಹ್ವಾನಿಸಿ ಸನ್ಮಾನಿಸಲಾಗುವುದು ಎಂದರು.
ಸ್ಥಳ ಪರಿಶೀಲನೆ: ಉಸ್ತುವಾರಿ ಸಚಿವರು ಹಾಗೂ ಸ್ವಾಗತ ಸಮಿತಿ ಸದಸ್ಯರೊಂದಿಗೆ ಸಮ್ಮೇಳನದ ಉದ್ದೇಶಿತ ಜಾಗಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.