Advertisement

ಇಬ್ಬರ ವಿರುದ್ಧ ಗೂಂಡಾ ಕಾಯ್ದೆ ಜಾರಿ

04:55 PM Nov 07, 2022 | Team Udayavani |

ಹಾವೇರಿ: ಜಿಲ್ಲೆಯಾಗಿ ರಚನೆಗೊಂಡು 25 ವರ್ಷಗಳ ಬಳಿಕ ಮೊದಲ ಬಾರಿಗೆ ಇಬ್ಬರ ವಿರುದ್ಧ ಗೂಂಡಾ ಕಾಯ್ದೆ ಜಾರಿಯಾಗಿದೆ. ಈ ಮೂಲಕ ಜಿಲ್ಲಾ ಪೊಲೀಸ್‌ ಇಲಾಖೆ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

Advertisement

ಹಲವು ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದ ಅಬೀದ್‌(ಉಬೇದುಲ್ಲಾ) ಬಷೀರಸಾಬ್‌ ಪತ್ತೇಗೌಡ್ರ ಹಾಗೂ ಹಿರೇಕೆರೂರು ತಾಲೂಕಿನ ಹಂಸಭಾವಿಯ ಅತ್ತಾವುಲ್ಲಾ ತಂದೆ ಅಬ್ದುಲ್‌ಸಾಬ್‌ ಎಂಬವರ ವಿರುದ್ಧ ಗೂಂಡಾ ಕಾಯ್ದೆ ಜಾರಿಯಾಗಿದೆ.

ಇವರಿಬ್ಬರೂ ಓಸಿ, ಮಟಕಾ ಜೂಜಾಟ ನಡೆಸುತ್ತಿದ್ದ ಕಿಂಗ್‌ ಪಿನ್‌ಗಳಾಗಿದ್ದರು. ಇದಲ್ಲದೇ, ಹಲವು ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇವರ ವಿರುದ್ಧ ಗೂಂಡಾ ಕಾಯ್ದೆ ಜಾರಿಯಾಗಿದ್ದು, ಇಬ್ಬರೂ ಸದ್ಯ ಜೈಲಿನಲ್ಲಿದ್ದಾರೆ.

ಜಿಲ್ಲೆಯಲ್ಲಿ ಮಟಕಾ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪಗಳ ನಡುವೆ ಇಬ್ಬರು ಕಿಂಗ್‌ಪಿನ್‌ಗಳ ಮೇಲೆ ಗೂಂಡಾ ಕಾಯ್ದೆ ಜಾರಿಯಾಗಿರುವುದು ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸಿದೆ. ಜತೆಗೆ ಓಸಿ ಮಟಕಾಕೋರರಿಗೆ ಬಿಸಿ ಮುಟ್ಟಿಸಿದಂತಾಗಿದೆ.

ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಇಬ್ಬರ ಮೇಲೂ ಈ ಹಿಂದೆ ಬಿದ್ದಿರುವ ಕೇಸ್‌ ಗಳು ಒಂದೆರಡಲ್ಲ. ಹಿರೇಹಳ್ಳಿಯ ಅಬೀದ್‌ ಪತ್ತೇಗೌಡ್ರ ಈತ ಓಸಿ ಮಟಕಾ ನಡೆಸುವುದರಲ್ಲಿ ನಿಸ್ಸೀಮನಾಗಿದ್ದ. ಗೋವಾದ ಪಣಜಿಯ ಚಿಂಚ್ವಾಡ ಚಿಂಬಲ್‌ನಲ್ಲಿ ವಾಸವಾಗಿದ್ದುಕೊಂಡೇ ಜಿಲ್ಲೆಯ ವ್ಯಾಪ್ತಿಯಲ್ಲಿ ಓಸಿ ಮಟಕಾ ನಡೆಸುತ್ತಿದ್ದ. ಈತನ ಮೇಲೆ 2017ಕ್ಕಿಂತ ಮೊದಲು 38 ಪ್ರಕರಣಗಳು ದಾಖಲಾಗಿದ್ದರೆ, 2017ರ ಬಳಿಕ 24 ಕೇಸ್‌ಗಳು ಬಿದ್ದಿವೆ. ಈತನೊಬ್ಬನ ಮೇಲೆಯೇ ಬರೋಬ್ಬರಿ 62 ಕೇಸ್‌ಗಳು ವಿವಿಧ ಠಾಣೆಯಲ್ಲಿ ದಾಖಲಾಗಿವೆ. ಓಸಿ ಅಡ್ಡೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್‌ ಮೇಲೆಯೇ ಹಲ್ಲೆ ನಡೆಸಿದ್ದ ಕುಖ್ಯಾತಿ, ಆರೋಪ ಈತನ ಮೇಲಿದೆ. ಗೋವಾದಿಂದಲೇ ಜಿಲ್ಲೆಯ ಓಸಿ ದಂಧೆಯನ್ನು ನಿಯಂತ್ರಿಸುತ್ತಿದ್ದ ಈತ ಪೊಲೀಸ್‌ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ.

Advertisement

ಇನ್ನು ಹಂಸಭಾವಿಯ ಅತ್ತಾವುಲ್ಲಾ ಅಬ್ದುಲ್‌ ಸಾಬ್‌ ಕೂಡ ಮಟಕಾ ಗ್ಯಾಂಬಲಿಂಗ್‌ ನಡೆಸಿದ ಆರೋಪದಲ್ಲಿ ಹಲವು ಕೇಸ್‌ಗಳನ್ನು ಎದುರಿಸುತ್ತಿದ್ದ. ಈತನ ಮೇಲೆ 14 ಕೇಸ್‌ಗಳು ದಾಖಲಾಗಿವೆ. ಇಬ್ಬರೂ ರೂಢಿಗತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಆರೋಪದಲ್ಲಿ ಪೊಲೀಸ್‌ ಇಲಾಖೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿತ್ತು. ಇದಕ್ಕೆ ಜಿಲ್ಲಾ ದಂಡಾಧಿ ಕಾರಿಗಳು ಇವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿದ್ದಾರೆ.

9 ಜನರ ಗಡಿಪಾರಿಗೆ ಆದೇಶ: ಸಮಾಜದಲ್ಲಿ ಅಶಾಂತಿ ಹುಟ್ಟಿಸಿದ ಆರೋಪದ ಮೇಲೆ 2017ರಿಂದ ಈಚೆಗೆ ಜಿಲ್ಲೆಯಲ್ಲಿ 9 ಜನರ ಗಡಿಪಾರಿಗೆ ಆದೇಶವಾಗಿದೆ. ಒಟ್ಟು 43 ಜನರ ಮೇಲೆ ಗಡಿಪಾರಿಗೆ ವರದಿ ಸಲ್ಲಿಕೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 5 ಜನರನ್ನು ಗಡಿಪಾರು ಮಾಡುವಂತೆ ಸಲ್ಲಿಕೆಯಾಗಿರುವ ವರದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿದೆ ಎಂದು ಎಸ್‌ಪಿ ಹನುಮಂತರಾಯ ತಿಳಿಸಿದ್ದಾರೆ.

ಗೂಂಡಾ ಕಾಯ್ದೆಯಡಿ ಬಂಧಿಸಿದರೆ ನೇರ ಜೈಲು

ಗೂಂಡಾ ಕಾಯ್ದೆಯಡಿ ಬಂ ಧಿಸುವ ಆರೋಪಿಯನ್ನು 24 ಗಂಟೆಯೊಳಗಾಗಿ ನ್ಯಾಯಾಧಿಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯವಿಲ್ಲ. ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೆ ವಿಸ್ತರಿಸುವ ಅಗತ್ಯವಿಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದು. ಅಲ್ಲದೇ, ಈ ಕಾಯ್ದೆಯಡಿ ಬಂಧನಕ್ಕೊಳಗಾಗುವ ಅಪರಾಧಿಗೆ ಒಂದು ವರ್ಷದವರೆಗೆ ಜಾಮೀನು ಕೂಡ ಸಿಗುವುದಿಲ್ಲ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಗೂಂಡಾ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದು, ಅತ್ಯಾಚಾರಿಗಳ ವಿರುದ್ಧ ಹೆಚ್ಚಾಗಿ ಈ ಕಾಯ್ದೆ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸುವ ಮೂಲಕ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ.

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಬ್ಬರ ವಿರುದ್ಧ ಗೂಂಡಾ ಕಾಯ್ದೆ ಜಾರಿಯಾಗಿದೆ. ಓಸಿ ಮಟಕಾ ಸೇರಿದಂತೆ ಕ್ರಿಮಿನಲ್‌ಗ‌ಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.  -ಹನುಮಂತರಾಯ, ಎಸ್‌ಪಿ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next