ಹಾವೇರಿ: ಜಿಲ್ಲೆಯ ರಾಣಿಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್. ಶಂಕರ್ ಸಮ್ಮಿಶ್ರ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಕೌತುಕ ಸೃಷ್ಟಿಯಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆರ್. ಶಂಕರ್ ರಾಣಿಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಇವರಿಗೆ ಭಾರಿ ಬೇಡಿಕೆ ಬಂದು, ಶಾಸಕರಾಗಿ ಆಯ್ಕೆಯಾದ ಪ್ರಥಮ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಆಗ ನಡೆದ ರಾಜಕೀಯ ಚದುರಂಗದಾಟದಲ್ಲಿ ಆರ್. ಶಂಕರ್ ಅಳೆದು ತೂಗಿ ಅಧಿಕಾರದ ಜಾಡು ಹಿಡಿದು ಹೆಜ್ಜೆ ಇಟ್ಟಿದ್ದರು.
ಸರ್ಕಾರ ರಚನೆ ಆರಂಭದಲ್ಲಿ ಹೆಚ್ಚು ಸ್ಥಾನ ಹೊಂದಿರುವ ಬಿಜೆಪಿ ಸರ್ಕಾರ ನಡೆಸಬಹುದೆಂದು ತಿಳಿದು ಬೆಳಗ್ಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಆರ್. ಶಂಕರ್, ಸಂಜೆ ಹೊತ್ತಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯ ಸುಳಿವು ಸಿಕ್ಕು ಕಾಂಗ್ರೆಸ್ ಸೇರಿದ್ದರು. ಅಧಿಕಾರದ ಒಳ ಒಪ್ಪದದಂತೆ ರಾಜ್ಯದ ನೂತನ ಸಮ್ಮಿಶ್ರ ಸರ್ಕಾರದಲ್ಲಿ ಆರ್. ಶಂಕರ್ ಸಚಿವ ಸ್ಥಾನ ನೀಡಲಾಗಿತ್ತು. ಆಗ ಜಿಲ್ಲೆಯ ಅಧಿಕಾರ ರಾಜಕಾರಣದಲ್ಲಿ ಹೊಸಬರ ಪ್ರವೇಶವಾಗಿದೆ ಎಂದೇ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಯಾಗಿತ್ತು. ನಂತರ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ಅವರನ್ನು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಿಂದ ಕೈಬಿಡಲಾಯಿತು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ್ದ ಆರ್. ಶಂಕರ್, ಈಗ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ಪಡೆಯಲು ಮುಂದಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿರುವ ಆರ್. ಶಂಕರ್ ಅವರಿಗೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ದೊರಕುವುದು ಬಹುತೇಕ ಖಚಿತ ಎಂದು ಜಿಲ್ಲೆಯ ಜನ ಭಾವಿಸಿದ್ದರು. ಆದರೆ, ಅವರಿಗೆ ಜಿಲ್ಲೆಯ ಉಸ್ತುವಾರಿ ಕೊಡಲೇ ಇಲ್ಲ. ಇನ್ನು ಆರ್. ಶಂಕರ್ ಜಿಲ್ಲೆಯ ಜನತೆಯ ನಿರೀಕ್ಷೆಗೆ ತಕ್ಕಂತೆ ತಮ್ಮ ಕಾರ್ಯವೈಖರಿ ಪ್ರದರ್ಶಿಸದೆ ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತರಾಗಿದ್ದರು ಎಂಬುದು ಸಹ ಅವರ ಹಿನ್ನಡೆಗೆ ಕಾರಣವಾಯಿತು.
ಸಚಿವ ಸ್ಥಾನ ಕಳೆದುಕೊಂಡ ಬಳಿಕ ನಡೆದ ರಾಜಕೀಯ ವಿದ್ಯಮಾನದಲ್ಲಿ ಮತ್ತೆ ಆರ್. ಶಂಕರ್ ಸಕ್ರಿಯರಾಗಿದ್ದು, ಬಿಜೆಪಿ ಸರ್ಕಾರ ನಡೆಸುವುದಾದರೆ ಆ ಪಕ್ಷಕ್ಕೆ ಬೆಂಬಲ ಸೂಚಿಸಿ ಅಲ್ಲಿ ಮಂತ್ರಿಯಾಗುವ ಕನಸು ಹೊತ್ತು ಮುನ್ನಡೆದಿದ್ದಾರೆ.
•ಎಚ್.ಕೆ. ನಟರಾಜ