ಹಾವೇರಿ: ಅಧಿಕಾರಿಗಳ ಯೋಚನೆ ಇಲ್ಲದ ಯೋಜನೆಗಳಿಂದ ಏನೆಲ್ಲ ಅದ್ವಾನಗಳಾಗುತ್ತವೆ. ಇದರಿಂದ ಸರ್ಕಾರ ಹಣ ಹೇಗೆಲ್ಲ ವ್ಯರ್ಥವಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿಯ ದೇವಗಿರಿ-ಯಲ್ಲಾಪುರ ಬಳಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ.
ಮೆಟ್ರಿಕ್ ನಂತರದ ಬಾಲಕಿಯರಿಗಾಗಿ ಸರ್ಕಾರ ವಸತಿ ನಿಲಯ ಮಂಜೂರಿ ಮಾಡಿದೆ. ಬಾಲಕಿಯರ ವಸತಿ ನಿಲಯ ಕಟ್ಟುವ ಸ್ಥಳ ಎಂದರೆ ಸುತ್ತಮುತ್ತ ಸುರಕ್ಷತೆ ಇರಬೇಕು. ಜನಸಂಚಾರ, ಜನವಸತಿಯಾಗಿರಬೇಕು. ಆದರೆ, ಇಲ್ಲಿ ಅಧಿ ಕಾರಿಗಳು ಮೆಟ್ರಿಕ್ ನಂತರದ ಬಾಲಕಿರಯರ ವಸತಿ ನಿಲಯಕ್ಕಾಗಿ ಆಯ್ಕೆ ಮಾಡಿಕೊಂಡ ಸ್ಥಳ ನಗರದಿಂದ ನಾಲ್ಕೈದು ಕಿಮೀ ಹೊರಗಿರುವ ದೇವಗಿರಿ-ಯಲ್ಲಾಪುರ ಗ್ರಾಮದ ಬಳಿ.
ಜನಸಂಪರ್ಕದಿಂದ ದೂರವಿರುವ ಈ ಸ್ಥಳದಲ್ಲಿ ಕಟ್ಟಿರುವ ವಿದ್ಯಾರ್ಥಿನಿಯರ ವಸತಿನಿಲಯ ಕಟ್ಟಡದ ಸುತ್ತಮುತ್ತ ಯಾವುದೇ ಒಂದೇ ಒಂದು ಕಟ್ಟಡ ನಿರ್ಮಾಣವಾಗಿಲ್ಲ, ಮನೆಗಳು, ಕಚೇರಿಗಳೂ ಇಲ್ಲ. ಜನಸಂಪರ್ಕದಿಂದ ದೂರವಿದೆ. ಇದು ಬಾಲಕಿಯರ ವಸತಿ ನಿಲಯವಾಗಿರುವುದರಿಂದ ಭಯದಿಂದ ಬಾಲಕಿಯರು ಇಲ್ಲಿ ಉಳಿಯಲು ಹಿಂದೇಟು ಹಾಕುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಇಲ್ಲಿ ವಿದ್ಯಾರ್ಥಿನಿಯರು ಬಂದು ನೆಲೆಸಿದರೂ ಐದು ಕಿಮೀ ದೂರದ ನಗರದಲ್ಲಿ ವಿವಿಧ ಭಾಗಳಲ್ಲಿರುವ ಕಾಲೇಜಿಗೆ ವಿದ್ಯಾರ್ಥಿನಿಯರು ಓಡಾಡುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಈ ಬಗ್ಗೆ ಕಿಂಚಿತ್ತೂ ಆಲೋಚಿಸದೆ ದೂರದಲ್ಲಿ ಒಂಟಿ ಕಟ್ಟಡ ಕಟ್ಟಿ ಅಧಿಕಾರಿಗಳು ತಮ್ಮ ಕಾಟಾಚಾರದ ಕೆಲಸ ಮಾಡಿ ಕೈತೊಳೆದುಕೊಂಡಿದ್ದಾರೆ.
ಪಾಳುಬಿದ್ದ ಹೊಸಕಟ್ಟಡ: ಕಟ್ಟಡ ನಿರ್ಮಾಣವಾಗಿ ಐದಾರು ತಿಂಗಳು ಕಳೆದಿದ್ದು ಕಟ್ಟಡವಿರುವ ಈ ಸ್ಥಳ ಜನಸಂಪರ್ಕದಿಂದ ದೂರವಿರುವುದರಿಂದ ಸದ್ಯ ಅದು ಕಿಡಗೇಡಿಗಳ ಅನೈತಿಕ ಚಟುವಟಿಕೆಯ ತಾಣವಾಗಿದೆ. ಇಲ್ಲಿ ಕಿಡಗೇಡಿಗಳು ರಾತ್ರಿ ವೇಳೆ ಮದ್ಯ ಸೇವಿಸಿ, ಅಕ್ರಮ ಚಟುವಟಿಕೆ ನಡೆಸುವ ಜತೆಗೆ ಕಿಟಕಿಯ ಗಾಜುಗಳನ್ನು ಒಡೆದು ಹಾಳು ಮಾಡಿದ್ದಾರೆ. ಕಟ್ಟಡದ ಹೊಣೆಹೊತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಈ ಕಟ್ಟಡದ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಟ್ಟಡವನ್ನೇ ರಕ್ಷಿಸಿಕೊಳ್ಳಲಾಗದ ಅಧಿಕಾರಿಗಳು ಅದರಲ್ಲಿ ವಿದ್ಯಾರ್ಥಿನಿಯರನ್ನು ಉಳಿಸಿಕೊಂಡು ಅವರಿಗೆಲ್ಲ ಹೇಗೆ ರಕ್ಷಣೆ ಕೊಡಿಸುತ್ತಾರೆ ಎಂಬ ಸಂಶಯ ಮೂಡುವಂತಾಗಿದೆ.
ವಿದ್ಯುತ್ ಸಂಪರ್ಕವಿಲ್ಲ: ಸಮಾಜ ಕಲ್ಯಾಣ ಇಲಾಖೆಯ ಎರಡು ಕೋಟಿ ರೂ. ಅನುದಾನದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಜಿಲ್ಲಾ ನಿರ್ಮಿತಿ ಕೇಂದ್ರದವರು ನಿರ್ಮಿಸಿದ್ದಾರೆ. ಕಟ್ಟಡ ಕಟ್ಟಿ ಐದಾರು ತಿಂಗಳಾದರೂ ಇದನ್ನು ಬಳಕೆ ಮಾಡದೇ ಇರಲು ಅಧಿಕಾರಿಗಳು ಕೊಡುವ ಕಾರಣ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವಿಲ್ಲ ಎಂಬುದಾಗಿದೆ. ಅಧಿಕಾರಿಗಳು ಈ ಕಟ್ಟಡದ ಕ್ರಿಯಾಯೋಜನೆ ತಯಾರಿಸುವಾಗ ಅದರಲ್ಲಿ ವಿದ್ಯುತ್ ಸಂಪರ್ಕ ಸೇರಿಸದೆ ಕ್ರಿಯಾಯೋಜನೆ ತಯಾರಿಸಿದ್ದರಂತೆ. ಹೀಗಾಗಿ ಈಗ ವಿದ್ಯುತ್ ಸಂಪರ್ಕಕ್ಕಾಗಿ ಪ್ರತ್ಯೇಕ ಕ್ರಿಯಾಯೋಜನೆ ತಯಾರಿಸಿ, ಅದಕ್ಕೆ ಮಂಜೂರಾತಿ ಪಡೆಯಬೇಕಾಗಿದ್ದು, ವಿದ್ಯುತ್ ಸಂಪರ್ಕ ಆಗುವವರೆಗೆ ಕಟ್ಟಡ ಅಕ್ಷರಶಃ ಕತ್ತಲೆಯಲ್ಲೇ ಇರಬೇಕಾಗಿದೆ. ಒಟ್ಟಾರೆ ದೂರದೃಷ್ಟಿ ಇಲ್ಲದ, ಸರಿಯಾದ ಯೋಚನೆ, ಯೋಜನೆ ಇಲ್ಲದ ಅಧಿಕಾರಿಗಳ ನಡೆಯಿಂದ ಸರ್ಕಾರದ ಕೋಟ್ಯಂತರ ಹಣ ಅಪವ್ಯಯವಾಗುತ್ತಿದ್ದು ಇಂಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಆಗಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ದೇವಗಿರಿ ಯಲ್ಲಾಪುರ ಬಳಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಿರುವ ಬಾಲಕಿಯರ ವಸತಿ ನಿಲಯ ಯಾರ ಮೇಲುಸ್ತುವಾರಿಯೂ ಇಲ್ಲದೇ ಹಾಳು ಬಿದ್ದಿದೆ. ಕೂಡಲೇ ವಿದ್ಯುತ್ ಸಂಪರ್ಕ ಸೂಕ್ತ ರಕ್ಷಣೆಯೊಂದಿಗೆ ವಿದ್ಯಾರ್ಥಿಯರ ವಸತಿಗೆ ಅವಕಾಶ ಮಾಡಿಕೊಡಬೇಕು.
ವಿರುಪಾಕ್ಷಪ್ಪ ಕಡ್ಲಿ, ಜಿಪಂ ಸದಸ್ಯ,
ವಸತಿ ನಿಲಯ ನಿರ್ಮಿಸಿ ಚುನಾವಣೆಗೂ ಮುನ್ನವೇ ಸಮಾಜ ಕಲ್ಯಾಣ ಇಲಾಖೆಗೆ ಕಟ್ಟಡ ಹಸ್ತಾಂತರಿಸಲಾಗಿದೆ. ಹೀಗಾಗಿ ಕಟ್ಟಡ ರಕ್ಷಣೆಯ ಜವಾಬ್ದಾರಿ ಆ ಇಲಾಖೆಗೆ ಸೇರಿದೆ. ಕಟ್ಟಡದ ಸುತ್ತ ತಡೆಗೋಡೆ ಸೇರಿದಂತೆ ಇತರ ಸೌಕರ್ಯ ಕಲ್ಪಿಸಲು 32ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಕೊಟ್ಟಿದ್ದೇವೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಟಿಸಿ ಅಳವಡಿಸುವ ಕಾರ್ಯ ನಡೆದಿದೆ.
ತಿಮ್ಮೇಶಕುಮಾರ,
ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ
ಈ ಕಟ್ಟಡದ ಕ್ರಿಯಾ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಸೇರಿರಲಿಲ್ಲ, ವಿದ್ಯುತ್ ಸಂಪರ್ಕಕ್ಕೆ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಬಳಿಕ ಕಾರ್ಯಾರಂಭ ಮಾಡಲಾಗುವುದು.
ಚೈತ್ರಾ, ಉಪನಿರ್ದೇಶಕಿ, ಸಮಾಜ
ಕಲ್ಯಾಣ ಇಲಾಖೆ
ಎಚ್.ಕೆ. ನಟರಾಜ