Advertisement

ಹಾವೇರಿ: ಅಕ್ಟೋಬರ್‌ನಿಂದ ವೈದ್ಯಕೀಯ ತರಗತಿ ಆರಂಭ

06:37 PM Jul 25, 2023 | Team Udayavani |

ಹಾವೇರಿ: ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ಸೆಪ್ಟೆಂಬರ್‌ ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಕ್ಟೋಬರ್‌ ನಿಂದ ವೈದ್ಯಕೀಯ ತರಗತಿ ಆರಂಭಿಸಬಹುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಯನ್ನು ಸೋಮವಾರ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳು ಆಗಸ್ಟ್‌ ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಿ ತರಗತಿ ಆರಂಭಿಸಲು ಸಿದ್ಧತೆ ಮಾಡಿಕೊಡುವುದಾಗಿ ಮಾಹಿತಿ ನೀಡಿದರೂ, ವಾಸ್ತವ ಸ್ಥಿತಿಗತಿ ಪರಿಶೀಲಿಸಿದಾಗ ಅಕ್ಟೋಬರ್‌ವರೆಗೂ ಸಮಯ ಬೇಕಾಗುತ್ತದೆ ಎಂದರು.

ಕಾಲೇಜಿನ ಮೂರು ಅಂತಸ್ತಿನ ಕಟ್ಟಡವನ್ನು ಏಕಕಾಲದಲ್ಲಿ ಆರಂಭಿಸುವ ಬದಲು ಮೊದಲ ಅಂತಸ್ತಿನ ಕೊಠಡಿಗಳನ್ನು ಪೂರ್ಣಗೊಳಿಸಿ ಹಂತ ಹಂತವಾಗಿ ನಿರ್ಮಾಣ ಕೈಗೊಂಡಿದ್ದರೆ ತತ್‌ಕ್ಷಣ ತರಗತಿ ನಡೆಸಬಹುದಾಗಿತ್ತು. ಕಟ್ಟಡದ ಎ ಮತ್ತು ಬಿ ಬ್ಲಾಕ್‌ ಆದ್ಯತೆ ಮೇಲೆ ಪೂರ್ಣಗೊಳಿಸಿ ತರಗತಿಗಳ ಆರಂಭಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು. ನೂತನವಾಗಿ 35 ಬೋಧಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಪೈಕಿ 22 ಜನ ಬೋಧಕರು ಮಾತ್ರ ಹಾಜರಾಗಿದ್ದಾರೆ. ಉಳಿದವರಿಗೆ ಕಾಲಮಿತಿ ನೀಡಿ ಈ ಸಮಯದಲ್ಲಿ ಹಾಜರಾಗದಿದ್ದರೆ ಹೊಸ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಮನವಿ ಮೇರೆಗೆ ಮೊದಲ ಭೇಟಿ: ಜುಲೈ ತಿಂಗಳ ಆರಂಭದಲ್ಲಿ ಕೆಡಿಪಿ ಸಭೆ ನಡೆಸಿದಾಗ ಜಿಲ್ಲೆಯಲ್ಲಿ ಬರದಛಾಯೆ ಆವರಿಸಿತ್ತು. ಅದೃಷ್ಟವಶಾತ್‌ ಮಳೆ ಬಂದು ಬರದ ಛಾಯೆ ಮಾಯವಾಗಿದೆ.

ಜಿಲ್ಲೆಯ ಕುಡಿಯುವ ನೀರು ಹಾಗೂ ನೀರವಾರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಯನ್ನು ವಿವರಿಸಲಾಗಿತ್ತು. ನಮ್ಮ ಮನವಿಯನ್ನು ಪರಿಗಣಿಸಿ ರಾಜ್ಯದಲ್ಲಿ ಮೊದಲಬಾರಿಗೆ ಹಾವೇರಿ ಜಿಲ್ಲೆಯಿಂದ ಪ್ರಗತಿ ಪರಿಶೀಲನೆ ಸಭೆ ನಡೆಸಲು ಜಿಲ್ಲೆಗೆ ಆಗಮಿಸುತ್ತಾರೆ ಎಂದು ಮಾಹಿತಿ ನೀಡಿದರು.

Advertisement

ನಾಳಿನ ಸಭೆಯಲ್ಲಿ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು. ನೂತನ ವೈದ್ಯಕೀಯ ಕಾಲೇಜು ಕಟ್ಟಡದ ವಿವಿಧ ಬ್ಲಾಕ್‌ಗಳನ್ನು ಏಕಕಾಲದಲ್ಲಿ ನಿರ್ಮಾಣ ಮಾಡುವ ಬದಲು ವಿದ್ಯಾರ್ಥಿಗಳಿಗೆ ಅವಶ್ಯವಿರುವಂತೆ ಎ ಮತ್ತು ಬಿ ಬ್ಲಾಕ್‌ ಕಟ್ಟಡ ಪೂರ್ಣಗೊಳಿಸಲು ಆದ್ಯತೆ ಮೇಲೆ ಅನುದಾನ ನೀಡಲು ಮನವಿ ಮಾಡಿಕೊಳ್ಳಲಾಗುವುದು ಎಂದರು. ಸರ್ಕಾರ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿದೆ. ಐದನೇ ಯೋಜನೆ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದೆ. ಇದಲ್ಲದೇ ಜಿಲ್ಲೆಯ ಅಂಗನವಾಡಿ-ಶಾಲಾ ಕಟ್ಟಡ ಸಮಸ್ಯೆ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗುವುದು ಎಂದರು.

ಈ ವೇಳೆ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಜಿಲ್ಲಾ ಕಾರಿ ರಘುನಂದನ್‌ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಶಿವಕುಮಾರ ಗುಣಾರೆ, ವೈದ್ಯಕೀಯ ಕಾಲೇಜ್‌ ಡೀನ್‌ ಉದಯ
ಮುಳಗುಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next