ಹಾವೇರಿ: ಓರಿಗಾಮಿ ತಂತ್ರ ಬಳಸಿಕೊಂಡು ಗಣಿತದ ಮಾದರಿಗಳನ್ನು ರಚಿಸಿ, ಗಣಿತದ ಸಿದ್ಧಾಂತಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಓರಿಗಾಮಿ ಹೊಸ ಶಿಕ್ಷಣ ನೀತಿಗೆ ಪೂರಕವಾಗಿದೆ ಎಂದು ವಿಜ್ಞಾನ ಗಣಿತದ ಸಂವಹನಕಾರ, ವಿಜ್ಞಾನ ಬರಹಗಾರ, ಓರಿಗಾಮಿ ತಜ್ಞ ವಿ.ಎಸ್.ಎಸ್. ಶಾಸ್ತ್ರೀ ಹೇಳಿದರು.
ನಗರದ ಹುಕ್ಕೇರಿಮಠದ ಕಲ್ಯಾಣ ಮಂಟಪದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ ಹಾವೇರಿ ಜಿಲ್ಲಾ ಘಟಕ ಹಾಗೂ ಹಾವೇರಿ ಶಿಕ್ಷಣಾ ಧಿಕಾರಿಗಳ ಕಚೇರಿ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಮೂರು ದಿನಗಳ ಓರಿಗಾಮಿ ಕೌಶಲ್ಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೌಶಲ್ಯ ಆಧಾರಿತ ಕಲಿಕೆ, ಬೋಧನೆಯೇ ಹೊಸ ಶಿಕ್ಷಣ ನೀತಿಯ ಧ್ಯೇಯವಾಗಿದೆ. ಓರಿ ಎಂದರೆ ಮಡಚು, ಗಾಮಿ ಎಂದರೆ ಕಾಗದ. ಕಾಗದವನ್ನು ಮಡಚುವ ಕೌಶಲ್ಯವೇ ಓರಿಗಾಮಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾ ಧಿಕಾರಿ ಮೌನೇಶ ಬಡಿಗೇರಿ ಮಾತನಾಡಿ, ಕಬ್ಬಿಣದ ಕಡಲೆಯಂತಿರುವ ಗಣಿತದ ಕಲಿಕೆಯನ್ನು ಓರಿಗಾಮಿ ಮೂಲಕ ಸುಲಭಗೊಳಿಸಬಹುದು. ಮೂರು ದಿನಗಳಲ್ಲಿ ಪಡೆದ ತರಬೇತಿಯ ಕೌಶಲದ ಪ್ರಯೋಜನ ಮಕ್ಕಳಿಗೆ ನೇರವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಕುತೂಹಲ ಬೆಳೆಸಿಕೊಳ್ಳಬೇಕೆಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ, ವಿಜ್ಞಾನ ಬರಹಗಾರ ಎಸ್. ಆರ್. ಪಾಟೀಲ ಮಾತನಾಡಿ, ಜೂ. 30ರಿಂದ ಜುಲೈ ಕೊನೆಯವರೆಗೆ ಶುಕ್ರ ಭೂಮಿಗೆ ಅತೀ ಸಮೀಪದಲ್ಲಿ ಕಂಗೊಳಿಸಲಿದ್ದಾನೆ. ಜು. 7ರಂದು ಅತೀ ಸಮೀಪ ಅಂದರೆ ನಾಲ್ಕು ಕೋಟಿ ಕಿಲೋಮೀಟರ್ ಭೂಮಿಗೆ ಸಮೀಪಿಸಲಿದ್ದು, ಅಂದು ಶುಕ್ರ ಬಿದಿಗೆ ಚಂದ್ರನಂತೆ ಕಂಗೊಳಿಸಲಿದ್ದಾನೆ. ಶುಕ್ರನ ಸನಿಹವನ್ನು ಕಣ್ತುಂಬಿಕೊಂಡು, ವರ್ಷಗಳಿಗೊಮ್ಮೆ ಸಂಭವಿಸುವ ಈ ವಿದ್ಯಮಾನವನ್ನು ವಿದ್ಯಾರ್ಥಿಗಳು ವೀಕ್ಷಣೆ ಮಾಡುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಬಿ.ಹಿರೇಮಠ ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದಿಂದ ಮುಂದಿನ ದಿನಗಳಲ್ಲಿ ಪ್ರಖ್ಯಾತ ವಿಜ್ಞಾನಿಗಳನ್ನು ಕರೆಸಿ ವಿದ್ಯಾರ್ಥಿ ವಿಜ್ಞಾನಿ ಸಮಾಜದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಶಿಕ್ಷಣ ಸಂಯೋಜಕ ಓಂಪ್ರಕಾಶ ಯತ್ನಳ್ಳಿ, ತಾಲೂಕು ಗಣಿತ ಶಿಕ್ಷಕರ ಸಂಘದ ಅಧ್ಯಕ್ಷ ವಸಂತ ಮೆಳ್ಳಳ್ಳಿ ಹಾಗೂ ಬೆಳಗಾವಿ ವಿಕಸನ ಕೇಂದ್ರದ ಅಧ್ಯಕ್ಷ ಸಂಜಯ ಮುಗದುಮ್ ಇದ್ದರು. ಕರಾವಿಪ ಜಿಲ್ಲಾ ಘಟಕದ ಕಾರ್ಯದರ್ಶಿ ಹಾಗೂ ಮೇವುಂಡಿ
ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ವೀರೇಶ ಗಡ್ಡದೇವರಮಠ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಎಚ್. ಎಸ್. ಕಬ್ಬಿಣದಂತಿಮಠ ವಂದಿಸಿದರು. ಸಂಚಾಲಕ ಜಿ.ಎಸ್. ಹತ್ತಿಮತ್ತೂರ ನಿರೂಪಿಸಿದರು.