Advertisement
ಹಿರಿಯ ಮುಖಂಡ ಸಿ.ಎಂ. ಉದಾಸಿ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮೊದಲಿನಿಂದಲೂ ರಾಜ್ಯ ರಾಜಕಾರಣದಲ್ಲಿ ಹಿರಿಯರಾಗಿ ಗುರುತಿಸಿಕೊಂಡವರು. ಸಚಿವರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ ರಾಜ್ಯಮಟ್ಟದಲ್ಲಿ ಬೆಳೆದವರು. ಇವರ ಜತೆಗೆ ಈಗ ಹಿರೇಕೆರೂರಿನ ಶಾಸಕ ಬಿ.ಸಿ. ಪಾಟೀಲ ಹಾಗೂ ಪಕ್ಷೇತರ ಶಾಸಕ ಆರ್. ಶಂಕರ್ ಇಬ್ಬರೂ ರಾಜ್ಯ ರಾಜಕಾರಣದಲ್ಲಿ ಬೇರೆಯದೇ ಆದ ರೀತಿಯಲ್ಲಿ ಗಮನ ಸೆಳೆದ ಶಾಸಕರಾಗಿದ್ದಾರೆ.
Related Articles
Advertisement
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಬಿಜೆಪಿ ಬೆಂಬಲಿಸಬಹುದಾದ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕ ಬಿ.ಸಿ. ಪಾಟೀಲ ಅವರಿಗೂ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಇನ್ನು ಶಾಸಕ ಸ್ಥಾನದ ಅನರ್ಹತೆ ಶಿಕ್ಷೆಗೊಳಗಾದ ಆರ್. ಶಂಕರ್ ಅವರಿಗೂ ಸಾಧ್ಯಾಸಾಧ್ಯತೆ ಆಲೋಚಿಸಿ ವಿ.ಪ. ಸದಸ್ಯತ್ವ ನೀಡಿಯಾದರೂ ಸಚಿವ ಸ್ಥಾನ ನೀಡಬಹುದು ಎಂಬ ಚರ್ಚೆ ನಡೆದಿದೆ. ಹೀಗೆ ಜಿಲ್ಲೆಯ ನಾಲ್ವರು ಶಾಸಕರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಪಕ್ಷದ ವಲಯದಲ್ಲಿ ನಡೆದಿದೆ.
ಬಿಜೆಪಿ ಅವಧಿಯಲ್ಲಿ ಭರಪೂರ: ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಭರಪೂರ ಸ್ಥಾನಮಾನ ದೊರಕಿತ್ತು. ಸಿ.ಎಂ. ಉದಾಸಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇದರ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಆಯೋಗದ ಅಧ್ಯಕ್ಷ ಸ್ಥಾನ ಹಾವೇರಿ ಶಾಸಕ ನೆಹರು ಓಲೇಕಾರ ಅವರಿಗೆ, ಮಲಪ್ರಭಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಸೋಮಣ್ಣ ಬೇವಿನಮರದ ಅವರಿಗೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಭೋಜರಾಜ ಕರೂದಿ ಅವರಿಗೆ ನೀಡಲಾಗಿತ್ತು. ಇಷ್ಟೇ ಅಲ್ಲ ಸೋಮಣ್ಣ ಬೇವಿನಮರದ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನೂ ನೀಡಲಾಗಿತ್ತು.
‘ಕೈ’ ಅವಧಿಯಲ್ಲಿ ಕಡಿಮೆ: ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಹೆಚ್ಚಿನ ರಾಜಕೀಯ ಸ್ಥಾನಮಾನ ಸಿಕ್ಕಿರಲಿಲ್ಲ. ಒಂದು ಸಚಿವ ಸ್ಥಾನ ಕೊಡಲು ಸಹ ಭಾರಿ ಮೀನಾಮೇಷ ಎಣಿಸಿ ಒಂದೂವರೆ ವರ್ಷದ ಬಳಿಕ ಹಾನಗಲ್ಲ ಶಾಸಕ ಮನೋಹರ ತಹಸೀಲ್ದಾರ್ ಅವರಿಗೆ ಸಚಿವ (ಅಬಕಾರಿ)ಸ್ಥಾನ ಕೊಟ್ಟು ವರ್ಷದೊಳಗೇ ಅವರಿಂದ ಸಚಿವ ಸ್ಥಾನ ವಾಪಸ್ ಪಡೆಯಲಾಗಿತ್ತು. ಬಳಿಕ ನಡೆದ ರಾಜಕೀಯ ತಲ್ಲಣಗಳ ನಡುವೆ (ಸಚಿವ ಪರಮೇಶ ನಾಯ್ಕ ರಾಜೀನಾಮೆ)ಲಂಬಾಣಿ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ಸಂದರ್ಭ ನಿರ್ಮಾಣವಾಗಿ ನಿರಾಯಾಸವಾಗಿ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿಯವರಿಗೆ ಸಚಿವ ಸ್ಥಾನ ಒಲಿದಿತ್ತು.2018ರಲ್ಲಿ ಬಂದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಂತೂ ಜಿಲ್ಲೆಗೆ ಹೆಚ್ಚಿನ ಸ್ಥಾನಮಾನ ಮರೀಚಿಕೆಯಾಗಿತ್ತು. ಆರ್. ಶಂಕರ್‌ಗೆ ಬಿಟ್ಟರೆ ಬೇರೆ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ. ಆರಂಭದಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿ.ಸಿ. ಪಾಟೀಲ ಇದೇ ಕಾರಣಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈಗ ಇತಿಹಾಸ.
ಒಟ್ಟಾರೆ ಈ ಬಾರಿ ಬಿಜೆಪಿ ಸರ್ಕಾರ ರಚನೆಗೂ ಮೊದಲೇ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಹಾಗೂ ಇತರೆ ಸ್ಥಾನಮಾನ ಲಭಿಸುವ ನಿರೀಕ್ಷೆ ಹೆಚ್ಚಾಗಿದೆ. ಶಾಸಕರು, ಮುಖಂಡರು ವಿವಿಧ ಸ್ಥಾನಮಾನಕ್ಕಾಗಿ ಪಕ್ಷದ ಗಮನಸೆಳೆಯಲು ಮುಂದಾಗಿದ್ದಾರೆ.
•ಎಚ್.ಕೆ. ನಟರಾಜ