ಹಾವೇರಿ: ಮಹಿಳೆ ಇಂದು ಅಡುಗೆ ಮನೆಗೆ ಸೀಮಿತವಾಗಿ ಉಳಿದಿಲ್ಲ. ಮನೆ ಹೊರಗೂ ಹಾಗೂ ಮನೆಯೊಳಗು ದುಡಿಯುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಹೀಗಾಗಿ ಮೊದಲು ಮನೆ, ವೈಯಕ್ತಿಕ ಸುರಕ್ಷತೆ ಬಗ್ಗೆ ಯೋಚಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಎಚ್.ರೇಣುಕಾದೇವಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇಡಾರಿ ಸಂಸ್ಥೆ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಮಹಿಳೆಯರು ಕೀಳರಿಮೆ ಬಿಡಬೇಕು ಹಾಗೂ ವೈಯಕ್ತಿಕ ಅಭಿವೃದ್ಧಿ ಹೊಂದಬೇಕು. ಬದುಕು ಅಸಹನೀಯ ಮಾಡಿಕೊಳ್ಳದೆ ಸಹನೀಯ ಮಾಡಿಕೊಳ್ಳಿ. ಬದುಕು ಎಲ್ಲದ್ದಕ್ಕಿಂತ ದೊಡ್ಡದು ಎಂದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳುತ್ತಾರೆ. ಹೆಣ್ಣು ಸಹನಾಶೀಲೆ, ಮನಸ್ಸು ಬಿಚ್ಚಿ ಮಾತನಾಡುವ ಮನೋಭಾವ ಹೊಂದಿದ್ದಾಳೆ. ಇದರ ಮಧ್ಯೆ ಏನಾದರೂ ಸಮಸ್ಯೆಗಳಿದ್ದರೆ ಮನೆ ಮಟ್ಟದಲ್ಲಿ ಬಗೆಹರಿಸಿಕೊಳ್ಳಿ. ಸಾಧ್ಯವಿಲ್ಲವೆಂದಾಗ ಮಾತ್ರ ಕೋರ್ಟ್ ಮೊರೆಹೋಗಿ ಎಂದರು.
1910ಕ್ಕಿಂತ ಮೊದಲು ಮಹಿಳೆಯರು ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಪುರುಷರಿಗೆ ಸಮಾನ ವೇತನ ನೀಡುತ್ತಿರಲಿಲ್ಲ. ಇಂತಹ ಅನೇಕ ಸಮಸ್ಯೆಗಳ ವಿರುದ್ಧ ಮಹಿಳೆಯರು ಸಂಘಟನೆ ಮೂಲಕ ಹೋರಾಡಿದರು. ಮಹಿಳೆಯರು ದೈಹಿಕವಾಗಿ ಸದೃಢವಾಗಿಲ್ಲದಿದ್ದರೂ ಮಾನಸಿಕವಾಗಿ ಸದೃಢವಾಗಿದ್ದಾಳೆ ಎಂದರು.
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ವೈ.ಎಲ್. ಲಾಡಖಾನ್ ಪ್ರಾಸ್ತಾವಿಕ ಮಾತನಾಡಿ, ಸೃಷ್ಟಿಕರ್ತ ಮಹಿಳೆಗೆ ವಿಶೇಷ ಸಾಮರ್ಥ್ಯ ನೀಡಿದ್ದಾನೆ. ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಎಲ್ಲ ರಂಗಗಳಲ್ಲೂ ಗುರುತಿಸಿಕೊಂಡಿದ್ದಾಳೆ. ಮಹಿಳೆಯರು ತಮ್ಮ ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಕಾನೂನುಗಳನ್ನು ರಚಿಸಲಾಗಿದೆ. ಈ ಕಾನೂನುಗಳ ಸದುಪಯೋಗವಾಗಬೇಕೇ ಹೊರತು ದುರುಪಯೋಗವಾಗಬಾರದು. ಎಲ್ಲರೂ ಕಾನೂನನ್ನು ಗೌರವಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕರುಣಾ ಇಟಗಿ ಹಾಗೂ ವಿಜಯಾ ಕುಂಬಾರಿ ಅವರಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು. ಜಿಪಂ ಸಿಇಒ ಕೆ.ಲೀಲಾವತಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ. ಪಾವಲಿ, ಕಾರ್ಯದರ್ಶಿ ಪಿ.ಎಂ. ಬೆನ್ನೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಿಗೇರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಪಿಎಸ್‌ಐ ನಂದಿ, ತಹಶೀಲ್ದಾರ್ ಎಚ್.ಸಿ. ಶಿವಕುಮಾರ,, ಪರಿಮಳಾ ಜೈನ್ ಇದ್ದರು.