Advertisement

Haveri: ವಿದೇಶಿ ನೆಲ ತಲುಪಿದ ಕಬಡ್ಡಿ ಕ್ರೀಡೆ; ಕೋಚ್‌ ರವೀಂದ್ರ ಶೆಟ್ಟಿ

05:48 PM Nov 03, 2023 | Team Udayavani |

ಬ್ಯಾಡಗಿ: ಭಾರತದ ಅತ್ಯಂತ ಜನಪ್ರಿಯ ಕಬಡ್ಡಿ ಕ್ರೀಡೆ ವಿದೇಶಿ ನೆಲ ತಲುಪಿದ್ದು, ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಪರಿಚಯವಾದ ಪ್ರೊ| ಕಬಡ್ಡಿ ಬಳಿಕ ಪ್ರತಿಯೊಬ್ಬ ಕ್ರೀಡಾಪಟು ಕೋಟಿಗೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರ ಶೇ.2 ರಷ್ಟು ಮೀಸಲಾತಿ ಪ್ರಕಟಿಸಿದ್ದು ಕೂಡ ಕ್ರೀಡಾಪಟುಗಳು ಕಬಡ್ಡಿಯತ್ತ ಗಮನ ಸೆಳೆಯುವಂತೆ ಮಾಡಿದೆ ಎಂದು ಪಟ್ನಾ ಪೈರೇಟ್ಸ್‌ ಹಾಗೂ ಥೈಲ್ಯಾಂಡ್‌ ಕೋಚ್‌ ರವೀಂದ್ರ ಶೆಟ್ಟಿ ಹೇಳಿದರು.

Advertisement

ತುಮಕೂರಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮೋಟೆಬೆನ್ನೂರಿನ ಬಿಆರ್‌ಇ (ಸಿಬಿಎಸ್‌ಇ) ಪ್ರೌಢಶಾಲೆ ಕ್ರೀಡಾಪಟುಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಬಹುದೊಡ್ಡ ಪಾತ್ರ ವಹಿಸುತ್ತವೆ. ಆದರೆ, ಉದ್ಯೋಗ ಭರವಸೆ ಸಿಗದ ಬಹಳಷ್ಟು ಕಬಡ್ಡಿ ಕ್ರೀಡಾಪಟುಗಳು ಭವಿಷ್ಯ ರೂಪಿಸಿಕೊಳ್ಳಲಾಗದೇ ನೇಪಥ್ಯಕ್ಕೆ ಸರಿದಿದ್ದಾರೆ. ಮೂಲ ಸೌಕರ್ಯದ ಜೊತೆಗೆ ಪ್ರತಿಭಾನ್ವಿತರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಗುರುತರ ಜವಾಬ್ದಾರಿ ಇದೀಗ ಸರ್ಕಾರದ ಮೇಲಿದೆ. ಈ ಕುರಿತು ಬಹುದೊಡ್ಡ ಚಿಂತನೆ ನಡೆಸಬೇಕಾಗಿದೆ ಎಂದರು.

ಮಾಜಿ ಶಾಸಕ ಹಾಗೂ ಬಿಆರ್‌ಇ ಸಂಸ್ಥೆ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿರುವ ಮಾಜಿ ಕಬಡ್ಡಿ ಕ್ರೀಡಾಪಟುಗಳೆಲ್ಲರೂ ಸೇರಿಕೊಂಡು ಅಸೋಸಿಯೇಶನ್‌ ರಚಿಸಿದ್ದು, ಕಬಡ್ಡಿ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಬದುಕಿನ ಮಾರ್ಗ ತೋರಿಸುವ ನಿರ್ದಿಷ್ಟ ಗುರಿಯೊಂದಿಗೆ ಕಳೆದೆರಡು ದಶಕದಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಯಶಸ್ಸು ಕಂಡಿರುವ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್‌ ಜಿಲ್ಲೆಯ ನೂರಾರು ಕ್ರೀಡಾಪಟುಗಳ ಏಳ್ಗೆಗೆ ಸಹಕರಿಸಿ ಕಬಡ್ಡಿ ಕ್ರೀಡೆಯನ್ನು ಉತ್ತುಂಗಕ್ಕೇರಿಸಿದೆ. ಬಹಳಷ್ಟು ಕ್ರೀಡಾಪಟುಗಳು ಅವರ ಗರಡಿಯಲ್ಲೇ ಪಳಗಿದ್ದಾರೆ ಎಂದರು.

ಮೆಣಸಿನಕಾಯಿಯಂತೆ ಬ್ಯಾಡಗಿ ಪಟ್ಟಣ ಕಬಡ್ಡಿ ಕ್ರೀಡೆಗೆ ಉತ್ತಮ ಹೆಸರು ಪಡೆದುಕೊಂಡಿದೆ. ನಮ್ಮ ತಾಲೂಕಿನ ರವೀಂದ್ರ ಶೆಟ್ಟಿ ಥೈಲ್ಯಾಂಡ್‌ ದೇಶದ ಪುರುಷ ಮತ್ತು ಮಹಿಳಾ ಕಬಡ್ಡಿ ತಂಡಗಳಿಗೆ ಮುಖ್ಯ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯ. ಇತ್ತೀಚೆಗೆ ಮುಕ್ತಾಯವಾದ ಏಷ್ಯನ್‌ ಚಾಂಪಿಯನ್‌ ಶಿಪ್‌ನಲ್ಲಿ ಥೈಲ್ಯಾಂಡ್‌ ದೇಶದ ತಂಡಗಳಿಗೆ ಕೋಚಿಂಗ್‌ ಮಾಡುವ ಮೂಲಕ ಪಂದ್ಯಾವಳಿಯಲ್ಲಿ ಮಾರ್ಗದರ್ಶನ ನೀಡಿ ಬ್ಯಾಡಗಿ ಹೆಸರನ್ನು ಸಾಗರದಾಚೆಗೂ ತಲುಪಿಸಿದ್ದಾರೆ ಎಂದರು.

Advertisement

ಇದೇ ವೇಳೆ ನಾಯಕಿ ಗುಣಶೀಲಾ ಸೂರಣಗಿ ಸೇರಿದಂತೆ ಕ್ರೀಡಾಪಟುಗಳಾದ ನಿತ್ಯಾ ಬನ್ನಿಮಟ್ಟಿ, ಸ್ನೇಹ ಹರಪನಹಳ್ಳಿ, ರೇವತಿ ಕಣದಮನಿ, ಅಮೂಲ್ಯ ಮಾಜೀಗೌಡ್ರ, ಕವನಾ ರ್ಯಾವಣ್ಣನವರ, ಎಂ.ಕೆ. ದೀಪ್ತಿ, ನಿವೇದಾ ಜಲಾಟಿಗೌಡ್ರ, ಪೂರ್ಣಿಮಾ ಚಿನಿವಾಲಗಟ್ಟಿ, ಚೈತ್ರಾ ನಾಯಕ್‌, ರೇಣುಕಾ ಬುಶೆಟ್ಟಿ, ವಿದ್ಯಾ ಸಣ್ಣಕ್ಕಿ ಕೋಚ್‌ ನಿಂಗಪ್ಪ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಾವೇರಿ ಜಿಲ್ಲಾ ಅಮೇಚೂರ್‌ ಕಬಡ್ಡಿ ಅಸೋಸಿಯೇಶನ್‌ ಚೇರ್ಮನ್‌ ಸಿ.ಜಿ.ಚಕ್ರಸಾಲಿ,
ಬಿಆರ್‌ಈ ಸಂಸ್ಥೆಯ ಖಜಾಂಚಿ ಚನ್ನವೀರಪ್ಪ ಬಳ್ಳಾರಿ, ಪ್ರಾಚಾರ್ಯ ಮೋಹಿತ್‌ ಅರಬೈಲ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next