Advertisement

ಹಾವೇರಿ: ಕೃಷಿ ಕಾಯ್ದೆ ರದ್ದತಿ ಆದೇಶ ಗೆಜೆಟ್‌ನಲ್ಲಿ ಅಳವಡಿಸಿ

05:41 PM Jun 30, 2023 | Team Udayavani |

ಬ್ಯಾಡಗಿ: ಮೂರು ಕೃಷಿ ಕಾನೂನುಗಳ ಕುರಿತು ಸಚಿವ ಸಂಪುಟದ ತೀರ್ಮಾನ ಒಪ್ಪಲು ಸಾಧ್ಯವಿಲ್ಲ. ಕೂಡಲೇ ಬರುವ ಅಧಿವೇಶನದ ಅಜೆಂಡಾದಲ್ಲಿ ಅದನ್ನು ಸೇರಿಸಿ ಕಾನೂನು ರೀತಿ ಗೆಜೆಟ್‌ ನೋಟಿಫಿಕೇಶನ್‌ ಮಾಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ರಾಜ್ಯ ಸಂಚಾಲಕ ಹನುಮಂತಪ್ಪ ದೀವಿಗಿಹಳ್ಳಿ ಆಗ್ರಹಿಸಿದರು.

Advertisement

ಪಟ್ಟಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿಗಳನ್ನು ರದ್ದುಪಡಿಸಿ ರೈತನಿಗೆ ಮಾರಾಟದ ಹಕ್ಕು ನೀಡುವುದು, ಒಪ್ಪಂದದ ಕೃಷಿಗೆ ಅವಕಾಶ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತರ ಮೇಲೆ ಹಿಡಿತ ಸಾಧಿಸಲು ಹೊರಟಿತ್ತು. ಆದರೆ, ರೈತರ ಬೃಹತ್‌ ಪ್ರತಿಭಟನೆ ಬಳಿಕ ಕೃಷಿ ಮೇಲಿನ ತಿದ್ದುಪಡಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ, ಕಾಯ್ದೆ ರದ್ದತಿಗೆ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿತ್ತು. ಆದರೆ, ಕಳೆದ ಸರ್ಕಾರ ಇದನ್ನು ಮಾಡಿಲ್ಲ ಹೀಗಿರುವಾಗ ನೂತನ ರಾಜ್ಯ ಸರ್ಕಾರ ಸದರಿ ಕಾಯ್ದೆಗಳನ್ನು ಅಧಿವೇಶನದಲ್ಲಿ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಬರಪೀಡಿತ ಜಿಲ್ಲೆ ಘೋಷಿಸಿ: ರಾಜ್ಯದ ಹಲವಾರು ಪ್ರದೇಶಗಳಲ್ಲಿ ಅಸಮರ್ಪಕ ಮಳೆಯಿಂದ ಬರ ಪರಿಸ್ಥಿತಿ ಎದುರಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಇನ್ನಿತರ ಕಡೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಶೇ.10ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ಹವಾಮಾನ ಇಲಾಖೆ ವರದಿಯಂತೆ ಮಾನಸೂನ್‌ ಸಂಪೂರ್ಣವಾಗಿ ಕೈಕೊಟ್ಟಿದ್ದು ಬಿತ್ತನೆಗೆ ಅವಕಾಶವಿಲ್ಲದಂತಾಗಿದೆ. ಹಾಗಾಗಿ, ಕೂಡಲೇ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇವೆ ಎಂದರು.

ಅಸಮರ್ಪಕ ಪ್ರಮಾಣದ ಮಳೆ ರಾಜ್ಯದ ಮಹತ್ವದ ಭಾಗಗಳಲ್ಲಿ ಬರ ಪರಿಸ್ಥಿತಿ ಆತಂಕ ಹೆಚ್ಚಿಸಿದೆ. ಈ ಬಗ್ಗೆ ಸರ್ಕಾರಿ ಅಧಿ ಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಚದುರಿದಂತೆ ಆಗುವ ಮಳೆಯಿಂದ ಬಿತ್ತನೆ ಅಸಾಧ್ಯ. ಪ್ರಸ್ತುತ ಮಳೆ ನಮ್ಮ ರೈತರನ್ನು ಭಾರಿ ಒತ್ತಡಕ್ಕೆ ಸಿಲುಕಿಸಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ರೈತರು ಬೆಳೆ ನಾಶಪಡಿಸುತ್ತಿರುವ ಸುದ್ದಿಗಳು ವರದಿಯಾಗಿವೆ. ಕೂಡಲೇ ಅವರಿಗೆ ಪರಿಹಾರ ನೀಡುವುದೂ ಸೇರಿದಂತೆ ಬರಗಾಲ ಘೋಷಿಸುವಂತೆ ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸುಮಾ ಅಸಾದಿ ಮಾತನಾಡಿ, ಬೆಳೆ ಮಾರಾಟದಿಂದ ಹಣ ಬೆಳೆ ಸಾಲಕ್ಕೆ (ಕ್ರಾಪ್‌ ಲೋನ್‌) ಜಮಾ ಮಾಡಿದಲ್ಲಿ ನಮ್ಮ ತಕರಾರಿಲ್ಲ. ಆದರೆ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಸೇರಿದಂತೆ ಇನ್ನಿತರ ಕಾರಣಗಳಿಂದ ನಮ್ಮ ಎಸ್‌ಬಿ ಖಾತೆಗೆ ಬಂದಿರುವ ಹಣ ನಮಗೆ ತಿಳಿಸದೇ ನೇರ ಬೆಳೆ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ಖಂಡನೀಯ. ಅಷ್ಟಕ್ಕೂ ಅನುಮತಿ ಇಲ್ಲದೇ ನೇರವಾಗಿ ನಮ್ಮ ಖಾತೆಯಿಂದ ಹಣ ಪಡೆಯೋದು ಅಕ್ಷಮ್ಯ ಅಪರಾಧ. ಇಂತಹ ಬ್ಯಾಂಕ್‌ಗಳು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಅಂತಹವರ ವಿರುದ್ಧ ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಶಿವಯೋಗಿ ಗಡಾದ, ರವಿ ಮಾಳಗೇರ, ಬಸವರಾಜ ಕೋಡಿಹಳ್ಳಿ, ಶಾರದಾ ಮೇಗಳಮನಿ ಸೇರಿದಂತೆ ಇನ್ನಿತರರಿದ್ದರು.

Advertisement

ಜಿಲ್ಲೆಯಿಂದ ಸುಮಾರು 500ಕ್ಕೂ ಹೆಚ್ಚು ರೈತರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಬೃಹತ್‌ ಪ್ರತಿಭಟನೆಯಲ್ಲಿ
ಪಾಲ್ಗೊಳ್ಳಲಿದ್ದಾರೆ. ರೈತರ ಶ್ರೇಯೋಭಿವೃದ್ಧಿಗೆ ಬೇಕಾಗಿರುವ ನಮ್ಮ ಹಕ್ಕುಗಳನ್ನು ಪ್ರತಿಪಾದಿಸಲಿದ್ದೇವೆ.
ಹನುಮಂತಪ್ಪ ದೀವಿಗಿಹಳ್ಳಿ, ರೈತ
ಸಂಘ-ಹಸಿರು ಸೇನೆ ರಾಜ್ಯ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next