Advertisement

ಹಾವೇರಿ: ಸಾಧನೆಗೆ ಸಾಧಕರ ಯಶೋಗಾಥೆ ಅನುಸರಿಸಿ-ಅರುಣಾರಾಜೇ

06:12 PM Jul 01, 2023 | Team Udayavani |

ಹಾವೇರಿ: ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸು ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಯಶಸ್ಸು ಗಳಿಸಲು ಒಳ ಮಾರ್ಗಗಳಿವೆ. ಕಠಿಣ ದುಡಿಮೆ, ನಿರಂತರ ಸಾಧನೆ, ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲ, ತುಡಿತ ಇವು ಯಶಸ್ಸಿನ ಮೆಟ್ಟಿಲುಗಳು. ಸಾಧನೆಯ ಉತ್ತುಂಗಕ್ಕೇರಿದವರ, ಮಹಾನ್‌ ಸಾಧಕರ ಜೀವನ ಕ್ರಮ, ಅವರ ಯಶೋಗಾಥೆಯನ್ನು ಅವಲೋಕಿಸಿದರೆ ಯಶಸ್ಸಿನ ಗುಟ್ಟು ನಮಗೆ ಅರಿವಾಗುತ್ತದೆ ಎಂದು ಭಾರತೀಯ ಚಿತ್ರರಂಗದ ನಿರ್ದೇಶಕಿ, ಚಿಂತಕಿ ಅರುಣಾರಾಜೇ ಪಾಟೀಲ ಹೇಳಿದರು.

Advertisement

ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಆಯೋಜಿಸಿದ್ದ ಕೌಶಲ್ಯಾತ್ಮಕ ಸ್ವರಮೇಳ-ಮೃದು ಕೌಶಲ್ಯಗಳೊಟ್ಟಿಗೆ ಯಶಸ್ಸಿನ ಗುಟ್ಟು ವಿಷಯದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು
ಮಾತನಾಡಿದರು.

ಬಹುತೇಕ ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣುತ್ತಾರೆ. ಸಿದ್ಧತೆ ಇಲ್ಲದೇ ಮುನ್ನುಗ್ಗಲು ಯತ್ನಿಸುತ್ತಾರೆ. ನಿರೀಕ್ಷಿತ ಫಲಿತಾಂಶ ಸಿಗದೇ ಸೋಲಿನ ಕಡೆಗೆ ಸಾಗುತ್ತಾರೆ. ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಛಲದಿಂದ ಮುನ್ನಡೆಯುವತ್ತ ಚಿತ್ತ ಹರಿಸಬೇಕಾದದ್ದು ಅವಶ್ಯಕ. ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್‌ ಸಾಧಕರು ಹಲವಾರು ಜನರು ಇದ್ದಾರೆ. ಇಂತಹ ಸಾಧಕರ, ಸಾಧನೆಯ ಹಿಂದಿನ ಪ್ರೇರಕಶಕ್ತಿಯನ್ನು ವಿಶ್ಲೇಷಿಸಿ ಪ್ರೇರಣಾತ್ಮಕವಾಗಿ ಮುನ್ನಡೆಯುವ ಅಗತ್ಯತೆ ಇದೆ ಎಂದರು.

ಕೆಲಸ ಯಾವುದೇ ಇರಲಿ ಅದನ್ನು ಶಿಸ್ತುಬದ್ಧವಾಗಿ, ಸಮಯದ ಮಿತಿಯೊಳಗೆ ಜರುಗಬೇಕು. ಯಾವುದೇ ಕಾರ್ಯವನ್ನು ಅತ್ಯುತ್ತಮವಾಗಿ ಮಾಡಬೇಕೆಂಬ ತುಡಿತ-ಆಸೆ, ಸಾಧನೆ-ಯಶಸ್ಸಿನ ಮೊದಲ ಮೆಟ್ಟಿಲು. ಹೀಗಾಗಿ, ಉತ್ಕೃಷ್ಟತೆಯನ್ನು ತಲುಪಬೇಕೆಂಬ ಹಂಬಲ ಇರಬೇಕು. ನಿನಗೊಂದು ಕೊಠಡಿಯನ್ನು ಶುಚಿಗೊಳಿಸುವ ಕೆಲಸವನ್ನೇ ನೀಡಲಿ. ಆ ಕೆಲಸವನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ, ಆತ್ಮಸಾಕ್ಷಿ ಮೆಚ್ಚುವಂತೆ ಸಮಯದ ಮಿತಿಯೊಳಗೆ ಮಾಡಿ ಮುಗಿಸುವುದೇ ನಿನ್ನ ಗುರಿಯಾಗಿರಲಿ ಎಂದು ಮಹಾತ್ಮ ಗಾಂಧಿ  ಹೇಳಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ವೆಂಬುದು ಕೆಲಸದ ಮಹತ್ವ ಸಾರುತ್ತದೆ.

ಹಿರಿಯರ ಮಾರ್ಗದರ್ಶನದಲ್ಲಿ ಇಂದಿನವರು ಮುನ್ನಡೆದರೆ ಜೀವನದಲ್ಲಿ ಶ್ರೇಯಸ್ಸು ಹೊಂದಲು ಸಾಧ್ಯವಾದೀತು. ಅಲ್ಪ ಅವ ಧಿಯಲ್ಲಿ ಏನು ಸಾಧನೆ ಮಾಡಲು ಸಾಧ್ಯವಿದೆಯೋ ಸಾಧಿಸಿ-ಶೋಧಿಸಿ ಕೀರ್ತಿಶಾಲಿಗಳಾಗಬೇಕೆಂದು ವಿದ್ಯಾರ್ಥಿಗಳೊಟ್ಟಿಗೆ ಸಂವಹನ ನಡೆಸುತ್ತಲೇ ಕಿವಿಮಾತು ಹೇಳಿದರು. ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಡಾ|ಸಂಧ್ಯಾ ಆರ್‌. ಕುಲಕರ್ಣಿ ಸ್ವಾಗತಿಸಿದರು. ಪ್ರೊ|ರೂಪಾ ಕೋರೆ ಪರಿಚಯಿಸಿದರು.

Advertisement

ಐಕ್ಯೂಎಸಿ ಸಂಯೋಜಕ ಪ್ರೊ|ಟಿ.ವಿ. ಚವ್ಹಾಣ ವಂದಿಸಿದರು. ಕಾರ್ಯಾಗಾರದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಮಯದ ಸದ್ಬಳಕೆ ಸಾಧನೆಗೆ ಸಹಕರಿಸುತ್ತದೆ. ಗೆಲುವು ಸಾಧಿಸಿದಾಗ ಹಿಗ್ಗದೇ, ಸೋಲನುಭವಿಸಿದಾಗ ಕುಗ್ಗದೇ ಜೀವನ ಸಾರ್ಥಕಗೊಳಿಸಬೇಕು. ಕಠಿಣ ಪರಿಶ್ರಮ, ನಿರಂತರ ಅಧ್ಯಯನ,ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸ ಹೊಂದಿದವರಾಗಿ ಯಶಸ್ಸಿನತ್ತ ಮುಖ ಮಾಡಬೇಕು.
ಅರುಣಾರಾಜೇ ಪಾಟೀಲ,
ಭಾರತೀಯ ಚಿತ್ರರಂಗದ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next