ಹಾವೇರಿ: ಬೆಳಕಿನ ಹಬ್ಬ ದೀಪಾವಳಿ ಹಬ್ಬ ಬರುವಿಕೆಗೆ ದಿನಗಣನೆ ಶುರುವಾಗಿದ್ದು ಮಾರುಕಟ್ಟೆಯಲ್ಲಿ ವೈವಿಧ್ಯಮ ಆಕಾಶಬುಟ್ಟಿಗಳ ವ್ಯಾಪಾರ ಜೋರಾಗಿದ್ದು, ನೂರಾರು ನಮೂನೆಯ ಆಕಾಶಬುಟ್ಟಿಗಳು ಜನರನ್ನು ಆಕರ್ಷಿಸುತ್ತಿವೆ. ಗೋಲಾಕಾರ, ಯು ಆಕಾರ, ಚೌಕಾಕಾರ, ನಕ್ಷತ್ರಾಕಾರ, ಪಿರಾಮಿಡ್ ಆಕಾರ, ಬಹುಮಹಡಿಯ ಪಿರಾಮಿಡ್ ಆಕಾರ ಸೇರಿದಂತೆ ನಾನಾ ವಿನ್ಯಾಸದ ಆಕಾಶ ಬುಟ್ಟಿಗಳು ಮಿಂಚಿನ ಹೊಳಪಿನೊಂದಿಗೆ ಗ್ರಾಹಕರ ಕಣ್ಮನ ಸೆಳೆಯುತ್ತಿವೆ.
ಬಣ್ಣದ ಕಾಗದ ಹಾಳೆಯಲ್ಲಿ ವಿವಿಧ ವಿನ್ಯಾಸದಲ್ಲಿ ರೂಪಿಸಿದ ಬುಟ್ಟಿಗಳು, ಪ್ಲಾಸ್ಟಿಕ್ ಹಾಳೆಯಲ್ಲಿ ರಚಿಸಿದ ಬುಟ್ಟಿಗಳು, ಪ್ಲಾಸ್ಟಿಕ್‌ನಿಂದ ತಯಾರಿಸಿದ ಬುಟ್ಟಿಗಳು ತಮ್ಮದೇ ಆದ ಕಲಾ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಅಂಗಡಿಕಾರರು ಗ್ರಾಹಕರನ್ನು ಸೆಳೆಯಲು ತಮ್ಮ ಅಂಗಡಿಗಳಿಗೆ ದೀಪಾಲಂಕಾರ ಮಾಡಿ, ನೂರಾರು ವೈವಿಧ್ಯಮಯ ಆಕಾಶಬುಟ್ಟಿಗಳನ್ನು ಹೊರಗಡೆ ಹಾಕಿ ಜನರನ್ನು ಆಕರ್ಷಿಸುತ್ತಿದ್ದಾರೆ. ಗ್ರಾಹಕರು ಸಹ ತಮಗಿಷ್ಟವಾದ ವಿನ್ಯಾಸದ ಆಕಾಶಬುಟ್ಟಿಗಳನ್ನು ಖರೀದಿಸಿ ತಮ್ಮ ಮನೆ ಅಂಗಳ ಬೆಳಗಲು ಮುಂದಾಗಿದ್ದಾರೆ.
ರಚಿಸುವ ಕಲೆ ಮಾಯ: ಐದಾರು ವರ್ಷಗಳ ಹಿಂದೆ ಆಕಾಶಬುಟ್ಟಿಗಳಲ್ಲಿ ಇಷ್ಟೊಂದು ಪ್ರಕಾರ, ಶೈಲಿಗಳಿರಲಿಲ್ಲ. ಬಣ್ಣದ ಹಾಳೆಯನ್ನು ತಂದು ಬಿದಿರಿನ ಕಡ್ಡಿಗಳನ್ನು ಜೋಡಿಸಿ ಮನೆಯಲ್ಲಿಯೇ ಸುಂದರ ಆಕಾಶಬುಟ್ಟಿಗಳನ್ನು ತಯಾರಿಸಿ ಅದರೊಳಗೆ ಹಣತೆ ಇಟ್ಟು ಸಂತಸ ಪಡುತ್ತಿದ್ದರು. ಆದರೆ, ಈಗ ಕಾಗದದ ಹಾಳೆ, ಬಿದಿರಿನ ಕಡ್ಡಿ ಜಾಗದಲ್ಲಿ ಪ್ಲಾಸ್ಟಿಕ್ ಆಕ್ರಮಣ ಮಾಡಿದೆ. ಮನೆಗಳಲ್ಲಿ ಆಕಾಶ ಬುಟ್ಟಿಯನ್ನು ತಯಾರಿಸುವ ಸಂದರ್ಭದಲ್ಲಿ 10ರಿಂದ 20 ರೂ.ಗಳಲ್ಲಿ ಆಕಾಶಬುಟ್ಟಿ ಸಿದ್ಧವಾಗುತ್ತಿತ್ತು. ಮನೆಯಲ್ಲಿಯೇ ಸಿಗುವ ಸಾಮಗ್ರಿಗಳನ್ನು ಬಳಸಿ ಆಕರ್ಷಕ ಆಕಾಶಬುಟ್ಟಿಗಳನ್ನು ತಯಾರಿಸಿ ಅಲ್ಲಿ ಮನೆ ಮನೆಯಲ್ಲಿ ಸ್ವತಃ ತಮ್ಮ ಕಲಾ ಪ್ರೌಢಿಮೆ ಮೆರೆಯುಲಾಗುತ್ತಿತ್ತು.
ಬೆಲೆಯೂ ಹೆಚ್ಚು: ಈಗ ಆಕಾಶಬುಟ್ಟಿ ರಚಿಸುವ ಕಲೆ ಮಾಯವಾಗಿದ್ದು, ಜತೆಗೆ ಅದನ್ನು ಸಿದ್ಧಪಡಿಸುವಷ್ಟು ಸಮಯವೂ ಇಲ್ಲದಾಗಿದೆ. ಹಾಗಾಗಿ ದುಬಾರಿ ವೆಚ್ಚದ ಸಿದ್ಧ ಆಕಾಶಬುಟ್ಟಿಗೆ ಜನ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ಆಕಾಶಬುಟ್ಟಿಗಳ ಬೆಲೆ 75ರಿಂದ 500ರೂ. ವರೆಗೆ ಇದ್ದು, ಗ್ರಾಹಕರು ತಮ್ಮ ಶಕ್ತಿಯಾನುಸಾರ ಆಕಾಶ ಬುಟ್ಟಿ ಖರೀದಿಯಲ್ಲಿ ತೊಡಗಿದ್ದಾರೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ವೈವಿಧ್ಯಮ ಆಕಾಶಬುಟ್ಟಿಗಳು ಕಾಗದದ ಹಾಳೆಯಲ್ಲಿ ರಚಿತ ಆಕಾಶಬುಟ್ಟಿಗಳಿಗಿಂತ ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಈಗ ಪ್ಲಾಸ್ಟಿಕ್‌ನಿಂದ ನಿರ್ಮಿತ ಆಕಾಶಬುಟ್ಟಿಗಳದ್ದೇ ಕಾರುಬಾರು.
ಹೊರ ರಾಜ್ಯಗಳಿಂದ ಸರಬರಾಜು
ವೈವಿಧ್ಯಮಯ ಆಕಾಶಬುಟ್ಟಿಗಳು ಪುನಾ, ಮುಂಬಯಿಗಳಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತಿದ್ದು, ಅಲ್ಲಿಂದಲೇ ನಗರದ ಮಾರುಕಟ್ಟೆಗೆ ಬರುತ್ತಿವೆ. ಮನೆಯಲ್ಲಿ ಸಿದ್ದಪಡಿಸುವ ಪದ್ಧತಿ ಮರೆಯಾಗಿರುವುದರಿಂದ ದೀಪಾವಳಿ ಹಬ್ಬದಲ್ಲಿ ಈ ವೈವಿದ್ಯಮಯ ಆಕಾಶಬುಟ್ಟಿಗಳಿಗೆ ಎಲ್ಲಿಲ್ಲದೆ ಬೇಡಿಕೆ ಇದೆ.
ಮಹಾಲಿಂಗ ಶೆಟ್ಟರ್, ವ್ಯಾಪಾರಿ.
ಎಚ್.ಕೆ. ನಟರಾಜ