Advertisement

Haveri: ಜೀವನದಲ್ಲಿ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಿ-ನಿಂಗರಾಜು

06:36 PM Oct 12, 2023 | Team Udayavani |

ಹಾವೇರಿ: ನಮ್ಮ ಪಾರಂಪರಿಕ ಹಿನ್ನೆಲೆ ಅವಲೋಕಿಸಿದಾಗ ವೈಜ್ಞಾನಿಕ ಚಿಂತನೆಗಳು ಹೇರಳವಾಗಿ ಕಂಡು ಬರುತ್ತವೆ. ಆದರೆ,
ಆಚರಣೆಯಲ್ಲಿನ ತಪ್ಪು ಗ್ರಹಿಕೆಗಳಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೈನಂದಿನ ಬದುಕಿನಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೈಸ್‌ ಅಕಾಡೆಮಿ ಮುಖ್ಯಸ್ಥ ನಿಂಗರಾಜು ಸುಳ್ಳಳ್ಳಿ ಹೇಳಿದರು.

Advertisement

ನಗರದ ನೈಸ್‌ ಅಕಾಡೆಮಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಲಯನ್ಸ್‌ ಕ್ಲಬ್‌ ಆಶ್ರಯಲ್ಲಿ ನಡೆದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಸಮಾವೇಶದಲ್ಲಿ “ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ’ ವಿಷಯದ ಕುರಿತು ಮಾತನಾಡಿದರು.

ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿಜ್ಞಾನವನ್ನು ಕೇವಲ ಕಲಿಕೆಯ ವಿಷಯವನ್ನಾಗಿ ಅಷ್ಟೇ ಪರಿಗಣಿಸುವುದು ಸೂಕ್ತವಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು
ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯತ್ತ ಸಾಗಬೇಕು. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮೂಢನಂಬಿಕೆ, ಕಂದಾಚಾರಗಳಿಂದ ಹೊರಬರಬಹುದು ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಚ್‌.ಎ.ಅಹ್ಮದ್‌ ಮಾತನಾಡಿ, ವೈಜ್ಞಾನಿಕ ಮನೋಭಾವ, ಮಹಿಳಾ ಸಮಾನತೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸಂವಿಧಾನ ಆಧಾರಿತ ಚಿಂತನೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುವುದು ಭಾರತ ಜ್ಞಾನ ವಿಜ್ಞಾನ ಸಮಿತಿ ಉದ್ದೇಶ ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಪಾಂಡುರಂಗ ಜಟಗಣ್ಣವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ನಾಗಾಲೋಟದತ್ತ ಸಾಗುತ್ತಿದೆ. ಆದರೂ, ಜನರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡದೇ ಮೌಡ್ಯತೆ ಇನ್ನೂ
ಹೆಚ್ಚುತ್ತಿದೆ ಎಂದು ವಿಷಾದಿಸಿದರು.

Advertisement

ಮಹಾಂತೇಶ ಕರ್ಜಗಿ, ಲತಾ ಮಣಿ, ಪ್ರೊ|ಪಿ.ಸಿ. ಹಿರೇಮಠ ಮಾತನಾಡಿದರು. ಗೆಳೆಯರ ಬಳಗ ಶಾಲೆಯ ಆಡಳಿತಾಧಿಕಾರಿ ಪಿ.ಬಿ. ಮುದ್ದಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸತೀಶ ಕುಲಕರ್ಣಿ, ರಾಜೇಂದ್ರ ಹೆಗಡೆ, ಕೆ.ಆರ್‌  ಹಿರೇಮಠ, ಆರ್‌.ಸಿ. ನಂದಿಹಳ್ಳಿ, ಮಹಾಂತೇಶ ಮರಿಗೂಳಪ್ಪನವರ, ಅಕ್ಕಮಹಾದೇವಿ ಹಾನಗಲ್ಲ, ಜುಬೇದಾ ನಾಯಕ್‌, ವೀರಪ್ಪ ಅರಕೇರಿ, ಪಿ.ಎಸ್‌. ಯಲಿಗಾರ, ವಿ.ಎಸ್‌. ಹತ್ತಿಮತ್ತೂರ, ಜೆ.ಎಂ. ಮಠದ, ಮಹೇಶ್ವರಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೋತ್ತರ ಮಾಲಿಕೆ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಕಲಾ ಬಳಗದ ಕಲಾವಿದರು ಜಾಗೃತಿ ಗೀತೆ ಪ್ರಸ್ತುತಪಡಿಸಿದರು. ರೇಣುಕಾ ಗುಡಿಮನಿ ಸ್ವಾಗತಿಸಿ, ಜಿ.ಎಂ. ಓಂಕಾರಣ್ಣವರ ನಿರೂಪಿಸಿ,
ಗೂಳಪ್ಪ ಅರಳಿಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next